ಯಕ್ಷಾಂಕಣ – ರೈಗಳಿಂದಲೇ ರೈಸುತ್ತಿದ್ದವು ಆಟಗಳು

      ದಿ. ಎಂಪೆಕಟ್ಟೆ ರಾಮಯ್ಯ ರೈಯವರು  ಯಕ್ಷಗಾನ ಕಂಡ ಅಪೂರ್ವ ಕಲಾವಿದರು . ಯಾವುದೇ  ಪಾತ್ರವನ್ನಾದರೂ ಚಿತ್ರಿಸುವಲ್ಲಿ ಅವರದೇ ಛಾಪು. ಯಾವುದಾದರೂ ಪಾತ್ರ ರೈಗಳು  ಮಾಡಿದರೆಂದರೆ ಮತ್ತೆ ಬೇರಾರು ಮಾಡಿದರೂ ಆ ಪಾತ್ರ ಸಪ್ಪೆಯೇ. ಅಂಥಹ ಪಾತ್ರ ಚಿತ್ರಣದಲ್ಲಿ ಸಿದ್ಧಹಸ್ತರು . ಪಾತ್ರದ ಒಳಗನ್ನು ಅರಿತು , ಪ್ರಸಂಗದ ನಡೆಯಲ್ಲೇ ಪಾತ್ರ  ನಿರ್ವಹಿಸುವುದರಲ್ಲಿ ಅಗ್ರಗಣ್ಯರು .  ಆ ಕಾಲದಲ್ಲಿ  ಕೆಲವು ಪ್ರಸಂಗಗಳು  ಎಂಪೆಕಟ್ಟೆಯವರಿಲ್ಲದಿದ್ದಲ್ಲಿ  ಪ್ರದರ್ಶನ ನೀಡುವುದೇ ಸವಾಲಿನ ಕೆಲಸವಾಗಿತ್ತು. ಕೊನೆಯ ತನಕವೂ ಧರ್ಮಸ್ಥಳ ಮೇಳದಲ್ಲಿ  ತಿರುಗಾಟ ನಡೆಸಿ  ಪ್ರೇಕ್ಷಕರ ಮನವನ್ನು ಗೆದ್ದವರು . ದೇವೇಂದ್ರ  , ಪೌಂಢ್ರಕ  , ಕೌರವ,  ಶಿಶುಪಾಲ , ಕೌಂಡ್ಲಿಕ  , ಸಾಲ್ವ ಮುಂತಾದ ವಿತಂಡ ವಾದಕ್ಕೆ ಅವಕಾಶ ಇರುವ ಪಾತ್ರಗಳನ್ನು  ಎಂಪೆಕಟ್ಟೆಯವರಷ್ಟು ಸಮರ್ಥವಾಗಿ ನಿರ್ವಹಿಸಬಲ್ಲ  ಕಲಾವಿದರನ್ನು  ನಾನು  ಈಗಿನ ವರೆಗೂ ಕಂಡಿಲ್ಲ.

          ಯಾವುದೇ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ರೈಗಳು ಅಪಾರವಾದ ಪೌರಾಣಿಕ ಜ್ಞಾನ , ಪ್ರಸಂಗದ ನಡೆ , ಪಾತ್ರ ಚಿತ್ರಣದ ಕೌಶಲ್ಯ ಹೊಂದಿದ್ದರು .ನವರಸಗಳನ್ನೂ ಪ್ರಸ್ತುತ ಪಡಿಸಬಲ್ಲ ಸಾಮರ್ಥ್ಯದ  ರೈಗಳು ತಮ್ಮ ಅರ್ಥದಲ್ಲಿ ಹಾಸ್ಯಕ್ಕೇ ಪ್ರಾಧಾನ್ಯತೆ ಕೊಡುತ್ತಿದ್ದುದು ಎದ್ದು ಕಾಣುತ್ತಿತ್ತು . ಯುಧಾಜಿತು , ಉಸ್ಮಾನ್ , ರತ್ನಾಕರ ಶೆಟ್ಟಿ , ರಾವಣ ಮುಂತಾದ ವಿಭಿನ್ನ ಪಾತ್ರಗಳಲ್ಲಿ  ರೈಯವರ ನಿರ್ವಹಣೆ ಇದಕ್ಕೆ ಸಾಕ್ಷಿಯಾಗಿತ್ತು .

          ರೈಗಳ ನಿಧನ ಆಕಸ್ಮಿಕವಾಗಿ ಆದದ್ದು ಯಕ್ಷರಂಗಕ್ಕೆ ನಿಜಾರ್ಥದಲ್ಲಿ ದೊಡ್ಡ ನಷ್ಟವೇ ಹೌದು . ರೈಗಳ  ನಿಧನ ವಾರ್ತೆ ಕೇಳಿ  ಧರ್ಮಸ್ಥಳದ  ಧರ್ಮಾಧಿಕಾರಿ  ಡಾ. ವೀರೇಂದ್ರ ಹೆಗ್ಗಡೆಯವರು  ಅತೀವ  ದುಃಖ  ಪಟ್ಟಿದ್ದರು . 

” ಇನ್ನು ಕೆಲವು ಪ್ರಸಂಗಗಳನ್ನು ಆಡಿಸಲಾಗಲಿಕ್ಕಿಲ್ಲ ”   ಎಂದು ಆ ಕಾಲದಲ್ಲಿ   ಪ್ರೇಕ್ಷಕರೇ  ಹೇಳುತ್ತಿದ್ದುದು ಸತ್ಯ  .ಎದುರು ಕಲಾವಿದರೊಂದಿಗೆ ವಾದ , ಸಂವಾದ ಬೆಳೆಸುವಲ್ಲಿ  ರೈಗಳ ಕ್ರಮ ಅನುಕರಣೀಯ .ಸಹ ಕಲಾವಿದರಿಗೆ ಪ್ರಸಂಗದ ಬಗ್ಗೆ ಹೇಳಿ ಕೊಡುತ್ತಿದ್ದರು .ಆ ಕಾಲದಲ್ಲಿ ಮಳೆಗಾಲದ ಪುರಭವನದ ಯಕ್ಷಗಾನ ಪ್ರದರ್ಶನಗಳಲ್ಲಿ ಎಂಪೆಕಟ್ಟೆಯವರು ” ಕಲೆಕ್ಷನ್ ದೃಷ್ಟಿಯಿಂದ ”  ಅನಿವಾರ್ಯ ಕಲಾವಿದರಾಗಿದ್ದರು. ವಿತಂಡವಾದ , ಕುತರ್ಕವಿದ್ದ ಪಾತ್ರಗಳು ರೈಗಳಿಗೇ ಕೊಡಬೇಕೆನ್ನುವಷ್ಟರ ಮಟ್ಟಿಗೆ ಆ ಪಾತ್ರಗಳಿಗೆ ಚಿತ್ರಣ ನೀಡುತ್ತಿದ್ದರು . ತಾಳಮದ್ದಳೆ ಕೂಟದಲ್ಲೂ ರೈಗಳು ಭಾಗವಹಿಸುತ್ತಿದ್ದರು .ಮಾತ್ರವಲ್ಲ ಉತ್ತಮ ಅರ್ಥಧಾರಿಗಳೂ ಆಗಿದ್ದರು.  ರೈಗಳದ್ದು ಮೊನಚು ಹಾಸ್ಯದ ಮಾತುಗಾರಿಕೆಯಾದರೂ ಅರ್ಥಗರ್ಭಿತ .ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲೆ  ರೈಗಳಿಗೆ  ಸಿದ್ಧಿಸಿತ್ತು .ಉತ್ತಮ ನಾಟ್ಯಗಾರಿಕೆ ಹೊಂದಿದ್ದು ದೇವೇಂದ್ರನ ಪ್ರವೇಶದ ” ಸಭಾಕ್ಲಾಸ್ ” ನ್ನು ಚೆನ್ನಾಗಿ  ಪ್ರಸ್ತುತ ಪಡಿಸುತ್ತಿದ್ದ ಕಾರಣ , ಅಂದಿನ ಕಾಲದಲ್ಲಿ ದೇವೇಂದ್ರನ ಪಾತ್ರ ರೈಗಳಿಗೇ ಸೀಮಿತವಾಗಿತ್ತು .ರೈಗಳು ವಿಶಿಷ್ಟವಾದ ಕಂಠ ಸ್ವರ ಕುತರ್ಕ , ವಿತಂಡ ವಾದಗಳಿಗೆ ಆ ಸ್ವರ ಸರಿಯಾಗಿ ಹೊಂದುತ್ತಿತ್ತು . ತಮ್ಮ ಪಾತ್ರ ಚಿತ್ರಣಕ್ಕೆ ಪೌರಾಣಿಕ ಆಧಾರ ಕೊಟ್ಟೇ ವಾದ ಮಂಡಿಸುತ್ತಿದ್ದರು . ಕೆಲವೊಮ್ಮೆ ಕತೆಯನ್ನೇ ತಿರುಚಿ ಹೇಳಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು .( ಇದನ್ನು ಪಾತ್ರಪೋಷಣೆಗಾಗಿ ಮಾತ್ರ ಮಾಡುತ್ತಿದ್ದರೇ ಹೊರತು ಪೌರಾಣಿಕ ಪಾತ್ರಗಳಿಗೆ , ಪ್ರಸಂಗದ ಕವಿಗಳಿಗೆ ಎಂದೂ ಅಪಚಾರ ಮಾಡುತ್ತಿರಲಿಲ್ಲ ).  ಹೃದಯಾಘಾತದಿಂದಾಗಿ  ನಿಧನರಾಗುವವರೆಗೂ ಧರ್ಮಸ್ಥಳ ಮೇಳದಲ್ಲೇ ತಿರುಗಾಟ ನಡೆಸಿ, ಖಾವಂದರ ಅಚ್ಚುಮೆಚ್ಚಿನ ಕಲಾವಿದರಾಗಿದ್ದರು . ಧರ್ಮಸ್ಥಳ ಮೇಳದಲ್ಲಿರುವಾಗ  ಎಂಪೆಕಟ್ಟೆ v/s ಕುಂಬ್ಳೆ , ಎಂಪೆಕಟ್ಟೆ v/s ಗೋವಿಂದ ಭಟ್ , ಎಂಪೆಕಟ್ಟೆ v/s ನಯನಕುಮಾರ್  ಜೋಡಿ ತುಂಬಾ ಪ್ರಸಿದ್ಧಿ ಹೊಂದಿತ್ತು.

    ರೈಗಳ ಅರ್ಥಗಾರಿಕೆಯ ಎರಡು ಸಂದರ್ಭ ಈ ಕೆಳಗೆ ಕೊಟ್ಟಿದೆ .  ” ಗುರುದಕ್ಷಿಣೆ ”   ಪ್ರಸಂಗದಲ್ಲಿ  ಎಂಪೆಕಟ್ಟೆ ರೈ ಯವರದ್ದು  ಕೌರವನ ಪಾತ್ರ ಅತ್ಯಂತ ಪ್ರಸಿದ್ಧ . ದ್ರುಪದನ ತಮ್ಮ ಚಿತ್ರಕ ಹಾಗೂ ಕೌರವನ ಯುದ್ಧ.  ಚಿತ್ರಕನ ಪಾತ್ರಧಾರಿ ” ಎಲವೋ,  ಕುರುಡನ ಮಗನೇ ”   ಎಂದರು . ಕೂಡಲೇ ರೈಗಳು‌ , ತಮ್ಮದೇ ವಿಶಿಷ್ಠ ಸ್ವರದಲ್ಲಿ

  ” ಏನಂದೆ ? ಯಾಕೆ ಆ ರೀತಿ ಕರೆದಿ ? ”  ಎಂದರು.ಚಿತ್ರಕ ,

  ” ನಿನ್ನ ಅಪ್ಪ ಕುರುಡನಾದ ಕಾರಣ ನಿನ್ನನ್ನು ಕುರುಡನ  ಮಗನೇ ಎಂದದ್ದು ”  ಎಂದರು.ರೈಗಳು ಆತನಿಗೆ  ” ನಿನ್ನ ಅಪ್ಪ ಎಲ್ಲಿದ್ದಾರೆ ?”  ಎಂದಾಗ ಆತ

” ಅವರು ಸತ್ತಿದ್ದಾರೆ ”   ಎಂದಾಗ , ಕೂಡಲೇ ರೈಗಳು ಅದೇ ವಿಶಿಷ್ಠ ಸ್ವರದಲ್ಲಿ

 ” ಓಹೋ , ಹಾಗೋ. ಹಾಗಾದರೆ ಎಲವೋ ಸತ್ತವನ ಮಗನೇ ” ಎನ್ನಬೇಕೇ?

        ಮಂಗಳೂರು ಪುರಭವನದಲ್ಲೊಂದು ಯಕ್ಷಗಾನ. ಪ್ರಸಂಗ ”  ಭೀಷ್ಮಾರ್ಜುನ ” . ಶೇಣಿಯವರ  ಭೀಷ್ಮ ,  ಎಂಪೆಕಟ್ಟೆಯವರದ್ದು ಭೀಷ್ಮನನ್ನು ಸೇನಾಧಿಪತ್ಯಕ್ಕೆ ಒತ್ತಾಯಿಸುವ  ಕೌರವ. ಶೇಣಿಯವರ ಎದುರು ಎಂಪೆಕಟ್ಟೆಯವರಿಂದ ಹಾಸ್ಯಭರಿತ ವಿತಂಡವಾದ. ಪ್ರೇಕ್ಷಕರಿಗೆ ಭರ್ಜರಿ ರಂಜನೆಯಾಯಿತು ‌.ಆದರೆ , ಶೇಣಿಯವರಿಗೆ ಕೋಪ ನೆತ್ತಿಗೇರಿ, ರಂಗಸ್ಥಳದಲ್ಲೇ  ಸರಿ ಜಾಲಾಡಿಸಿದರು.ಅಂತೂ ರೈಗಳ  ಕೌರವನ ಪಾತ್ರ ಮುಗಿಯಿತು. ಶೇಣಿಯವರು ರಂಗದಲ್ಲೇ ಇದ್ದರು. ಭೀಷ್ಮ ಶರಶಯ್ಯೆಯಾಗಿ ಒಂದು ಪ್ರಸಂಗ ಮುಗಿಯಿತು .  ನನಗೆ ಗೊತ್ತಿತ್ತು , ಶೇಣಿಯವರು ಚೌಕಿಯಲ್ಲಿ ರೈಗಳನ್ನು ಪುನಃ

ಜಾಲಾಡಿಸುತ್ತಾರೆಂದು. ಅದಕ್ಕಾಗಿ ನಾನೂ ಚೌಕಿಗೆ ಹೋದೆ. ರೈಗಳು ಚೌಕಿಯಲ್ಲಿ ವೇಷ ಕಳಚಿ  ಮೂಲೆಯಲ್ಲಿ ಕುಳಿತಿದ್ದರು. ನಾನು ರೈಯವರಲ್ಲಿ ಮಾತಾಡುತ್ತಿರುವಾಗ , ಚೌಕಿಗೆ ಬಂದ  ಶೇಣಿಯವರು ,

 ” ಓಲು ಉಲ್ಲೆ ಆ ರಾಮಯ್ಯೇ ”   ಎಂದಾಗ ರೈಗಳು  ” ದಾನೆ ಗುರುಕುಲೇ ”  ಎಂದು ಮುಂದೆ ಬಂದರು. ಶೇಣಿಯವರು ಕೋಪದಿಂದಲೇ , ತುಳುವಿನಲ್ಲೇ,  ರಂಗಸ್ಥಳದಲ್ಲಿ  ಏನು ಮಾತಾಡಿದ್ದು ಎಂದರು. ರೈಗಳೂ ತುಳುವಿನಲ್ಲೇ,  ಸ್ವಲ್ಪ ಭಂಡು ಭಾಷೆಯಲ್ಲಿ

   ” ಮತ್ತೆ ನಿಮ್ಮಂಥಹ ದೊಡ್ಡ ವಿದ್ವಾಂಸರಲ್ಲಿ    ನಾನೇನು ಮಾತಾಡುವುದು  ? ” ಎಂದಾಗ,  ಶೇಣಿಯವರ ಕೋಪವೆಲ್ಲಾ ಇಳಿದು ಮನಃ ಪೂರ್ವಕವಾಗಿ  ನಕ್ಕರು.

  ಧರ್ಮಸ್ಥಳ ಮೇಳದವರ ಒಂದು ವರ್ಷದ ತಿರುಗಾಟದ ಪ್ರಸಂಗ “ಚಕ್ರವರ್ತಿ ದಶರಥ ” ಮುಂಜಾನೆ  ನಾಲ್ಕು ಗಂಟೆವರೆಗೂ ಒಂದೇ ಒಂದು ಹಾಸ್ಯದ ಸನ್ನಿವೇಶವಿಲ್ಲ ‌. ನಾಲ್ಕು ಘಂಟೆ ಹೊತ್ತಿಗೆ ಎಂಪೆಕಟ್ಟೆಯವರು ರಾವಣನಾಗಿ ಪ್ರವೇಶ ಕೊಟ್ಟ ನಂತರವೇ ಪ್ರಸಂಗದಲ್ಲಿ  ಹಾಸ್ಯರಸ  ಚಿಮ್ಮಿ ಪ್ರಸಂಗ  ಕಳೆಕಟ್ಟುತ್ತಿತ್ತು .

” ಸೀತಾ ಸ್ವಯಂವರ ” ದ ಈ ಭಾಗದಲ್ಲಿ  ಎಂಪೆಕಟ್ಟೆಯವರ ರಾವಣನ ಪಾತ್ರವಂತೂ ಎಂದೂ ಮರೆಯಲಾಗದ್ದು .

ಎಂ.ಶಾಂತರಾಮ ಕುಡ್ವ, ಮೂಡಬಿದಿರೆ







































































error: Content is protected !!
Scroll to Top