ಉಡುಪಿ, ಅ.17: ಡ್ರಗ್ ಸಾಗಾಟ ಮತ್ತು ಮಾರಾಟದ ಮೂರು ಪ್ರಕರಣಗಳನ್ನು ಬೇಧಿಸಿರುವ ಉಡುಪಿ ಪೊಲೀಸರು 73,39,500 ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಉಡುಪಿಯ ಎಸ್‌ಪಿ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಅವರು ಕಾರ್ಯಾಚರಣೆಯ ವಿವರ ನೀಡಿದರು. ಮಾದಕ ವಸ್ತು ದಂಧೆಯ ವಿರುದ್ಧ ಮುಗಿಬಿದ್ದಿರುವ ಪೊಲೀಸರು ಈ ವರ್ಷ ಬರೋಬ್ಬರಿ 209 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಪ್ರಮುಖ ಮೂರು ಪ್ರಕರಣಗಳಲ್ಲಿ 30.57 ಲ.ರೂ. ಮೌಲ್ಯದ ಎಂಡಿಎಂಎ ಮಾತ್ರೆಗಳು, 30 ಲ.ರೂ. ಮೌಲ್ಯದ ಎಲ್‌ಎಸ್‌ಡಿ ಸ್ಟ್ಯಾಂಪ್ಸ್, 3 ಲ.ರೂ. ಮೌಲ್ಯದ ಬ್ರೌನ್ ಶುಗರ್ ಸೇರಿ 73,39,500 ರೂ. ಮೌಲ್ಯದ ಮಾದಕ ವಸ್ತು ವಶವಾಗಿದೆ. ಕಳೆದ ಐದು ವರ್ಷಗಳಲ್ಲಿ ಅತ್ಯಧಿಕ ಪ್ರಕರಣಗಳು ಈ ವರ್ಷ ದಾಖಲಾಗಿವೆ ಎಂದು ತಿಳಿಸಿದರು.











































































