ಬೆಂಗಳೂರು, ಅ.17: ಇಡೀ ರಾಜ್ಯವನ್ನು ನಡುಗಿಸಿರುವ ಸರಣಿ ಹಂತಕ ಸಯನೈಡ್ ಮೋಹನ್‌ನ ಕರಾಳ ಬದುಕಿನ ಕತೆ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ. ಮಿಡ್ಲ್ ಈಸ್ಟ್ ಸಿನೇಮಾ ಎಂಬ ನಿರ್ಮಾಣ ಸಂಸ್ಥೆ ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಸಯನೈಡ್ ಎಂಬ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಿಸಲಿದೆ. ರಾಜೇಶ್ ತಚ್ರಿವರ್ ಚಿತ್ರಕತೆ ಬರೆದು ನಿರ್ದೇಶಿಸುತ್ತಾರೆ.
ಮಂಗಳೂರು, ಮೈಸೂರು ಸೇರಿ ಮೋಹನ ಓಡಾಡಿದ ಮತ್ತು ಕೊಲೆ ಕೃತ್ಯಗಳನ್ನು ಎಸಗಿದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಹಾಗೆಂದು ಇದು ಮೋಹನನ ಜೀವನಗಾಥೆಯಲ್ಲ, ಬದಲಾಗಿ ಕ್ರೈಮ್ ಥ್ರಿಲ್ಲರ್ ಸಿನೇಮಾ. ಮೋಹನನ ಬದುಕು ಯಾವ ಥ್ರಿಲ್ಲರ್ ಸಿನೇಮಾಕ್ಕೂ ಕಡಿಮೆಯಿಲ್ಲದ್ದು ಎಂದಿದ್ದಾರೆ ನಿರ್ದೇಶಕ ರಾಜೇಶ್.
ಶಿಕ್ಷಕ ಮೋಹನ 20 ಯುವತಿಯರನ್ನು ಸಾಯಿಸಿದ್ದು, ಈ ಪೈಕಿ 15 ಪ್ರಕರಣಗಳು ಸಾಬೀತಾಗಿ ಅವನಿಗೆ ಜೀವಾವಧಿಯಿಂದ ಹಿಡಿದು ಮರಣ ದಂಡನೆ ತನಕ ಶಿಕ್ಷೆಯಾಗಿದೆ.

ಕನ್ನಡ, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಸಯನೈಡ್ ಚಿತ್ರ ತಯಾರಾಗಲಿದೆ. ಆಯಾಯ ಭಾಷೆಯ ಕಲಾವಿದರನ್ನು ಹಾಕಿಕೊಳ್ಳಲಾಗುವುದು. ಹಿಂದಿ ಹೊರತುಪಡಿಸಿ ಉಳಿದೆಲ್ಲ ಭಾಷೆಗಳಲ್ಲಿ ಪ್ರಿಯಾಮಣಿ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲ ಭಾಷೆಗಳಲ್ಲಿ ಬಾಲಿವುಡ್ ಮತ್ತು ಕನ್ನಡದ ಕೆಲವು ಖ್ಯಾತ ನಟರು ಅಭಿನಯಿಸಲಿದ್ದಾರೆ.























