ಚಿತ್ರಮಂದಿರ ತೆರೆದರೂ ಹೊಸ ಸಿನೆಮಾ ಇಲ್ಲ. ಅ. 16ರಿಂದ ಸಿನೆಮಾ ಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಕರ್ನಾಟಕದಲ್ಲಿ ಎಲ್ಲಾ ಚಿತ್ರಮಂದಿರಗಳು ತೆರೆಯುತ್ತಿಲ್ಲ. ಮಾರ್ಚ್ 19ರಿಂದ ಮುಚ್ಚಿರುವ ಚಿತ್ರ ಮಂದಿರಗಳು ಕಳೆದ ಏಳು ತಿಂಗಳಿಂದ ತೆರೆದಿಲ್ಲ. ಸಿನೆಮಾಕ್ಕೆ ಸಂಬಂಧಪಟ್ಟ ಎಲ್ಲ ಮಂದಿ ಕೂಡ ತುಂಬಾ ನಷ್ಟ-ಕಷ್ಟಪಟ್ಟುಕೊಂಡಿದ್ದಾರೆ. ಮೊದಲ ಆರು ತಿಂಗಳು ಸಿನೆಮಾ ಶೂಟಿಂಗ್ ಕೂಡ ಬಂದ್ ಆಗಿತ್ತು. ಈಗ ಒಂದು ತಿಂಗಳಿಂದ ಶೂಟಿಂಗ್ ಆರಂಭ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಆರಂಭ ಆಗಿವೆ. ಯಶ್ ಅಭಿನಯದ KGF ಪಾರ್ಟ್ 2, ದರ್ಶನ ಅಭಿನಯದ ಚಾರ್ಲಿ, ಪುನೀತ್ ಅಭಿನಯದ ರಾಜರತ್ನ ಮೊದಲಾದ ಮೆಗಾ ಸಿನೆಮಾಗಳು ಶೂಟಿಂಗ್ ಕೊನೆಯ ಹಂತದಲ್ಲಿ ಇವೆ. ಆದರೆ ಜನ ಥಿಯೇಟರಿಗೆ ಬರ್ತಾರಾ? ಅನ್ನೋದು ಉತ್ತರ ಸಿಗದ ಪ್ರಶ್ನೆ. ಕಾದು ನೋಡುವ ತಂತ್ರದಲ್ಲಿ ಸಿನೆಮಾ ಪ್ರದರ್ಶಕರು ಇದ್ದಾರೆ.
ಅಕ್ಟೋಬರ್ 15ರಂದು ಆರು ಕನ್ನಡ ಸಿನೆಮಾಗಳು ರೀ ರಿಲೀಸ್ ಆಗಲಿವೆ. ಲಾಕ್ ಡೌನ್ ಮೊದಲು ರಿಲೀಸ್ ಆಗಿ ನಂತರ ಸಂತ್ರಸ್ತ ಆದ ಈ ಸಿನೆಮಾಗಳಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ, ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್, ಹೊಸ ಪ್ರತಿಭೆಗಳ ಲವ್ ಮಾಕ್‌ಟೇಲ್ ಪ್ರಮುಖ ಚಿತ್ರಗಳು. ಅಕ್ಟೋಬರ್ 15ರಂದು ಮರು ಬಿಡುಗಡೆ ಆಗಲಿವೆ. ನರೇಂದ್ರ ಮೋದಿ ಆತ್ಮ ಚರಿತ್ರೆಯ ಸಿನೆಮಾ ಮತ್ತೆ ರಿಲೀಸ್ ಆಗ್ತಾ ಇದೆ. ನಗರ ಪ್ರದೇಶದ ಕೆಲವೇ ಚಿತ್ರ ಮಂದಿರಗಳು ಮತ್ತು ಮಲ್ಟಿ ಪ್ಲೆಕ್ಸ್ ಗಳು ತೆರೆಯುವ ಸಾಧ್ಯತೆ ಇದೆ. ಮುಂದಿನ 15 ದಿನಗಳವರೆಗೂ ಹೊಸ ಸಿನೆಮಾ ರಿಲೀಸ್ ಆಗುವ ಸಾಧ್ಯತೆ ಇಲ್ಲ ಅನ್ನಿಸುತ್ತಿದೆ. ತೆಲುಗು, ತಮಿಳು, ಹಿಂದಿ ಸಿನೆಮಾ ಪ್ರದರ್ಶನ ಮಾಡುವ ಚಿತ್ರ ಮಂದಿರಗಳು ತೆರೆಯುವ ಸಾಧ್ಯತೆ ಇಲ್ಲ.
ಕೇಂದ್ರ ಸರ್ಕಾರದ ನಿಯಮಗಳು ಕೂಡ ಬಿಗು ಆಗಿರುವ ಕಾರಣ ಚಿತ್ರ ಮಂದಿರ ಮಾಲೀಕರಿಗೆ ನಷ್ಟವೇ ಗತಿ. ಚಿತ್ರ ಮಂದಿರದ ಒಳಗೆ ಸೋಷಿಯಲ್ ಡಿಸ್ಟೆನ್ಸ್, sanitisation ಕಷ್ಟ. ಗೇಟ್ ಕೀಪರ್ PPE kit ಧರಿಸಬೇಕು ಅನ್ನುವುದು ಕೂಡ ಹಾಸ್ಯಾಸ್ಪದ ನಿಯಮ ಅನ್ನುತ್ತಾರೆ ಚಿತ್ರ ಮಂದಿರದ ಮಾಲೀಕರು. ಮಂದಿರದ ಒಳಗೆ 30% ಸೀಟ್ ಮಾತ್ರ ತುಂಬಿ ನಷ್ಟ ಮಾಡಿಕೊಳ್ಳಲು ಯಾರೂ ಸಿದ್ಧರಿಲ್ಲ. ಮನೆಯ ಒಳಗೆ ಏಳು ತಿಂಗಳಿಂದ ಬೆಚ್ಚಗೆ ಕೂತು ಟಿವಿಯಲ್ಲಿ ಬರುವ ಹಳಸಲು ಸಿನೆಮಾ ನೋಡಿ ಬೇಸತ್ತಿರುವ ಸಿನೆಮಾ ಅಭಿಮಾನಿಗಳು ಆದಷ್ಟು ಬೇಗ ಸಿನೆಮಾ ಬಿಡುಗಡೆ ಆಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಅಲ್ಲಿಯವರೆಗೂ “ಜಾನೆ

ಕಹಾಂ ಗಯೇ ವೋ ದಿನ್” ಎಂದು ಕನವರಿಸುವುದು ಮಾತ್ರ ಸಾಧ್ಯ. ವಾರಕ್ಕೆ ಸರಾಸರಿ ಆರರಿಂದ ಏಳು, ವರ್ಷಕ್ಕೆ 150-175 ಸಿನೆಮಾ ರಿಲೀಸ್ ಆಗುತ್ತಿದ್ದ ಕನ್ನಡ ಚಿತ್ರ ರಂಗ, ಅದನ್ನೇ ನಂಬಿ ಬದುಕಿರುವ ಸಾವಿರಾರು ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ದಿನಗೂಲಿ ನೌಕರರು, ಥಿಯೇಟರ್ ಸಿಬ್ಬಂದಿ ಎಲ್ಲರೂ ಮತ್ತೆ ಆ ಸುವರ್ಣ ದಿನವು ಮರಳಿ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.




















