ಮಂಗಳೂರು, ಸೆ. 17: ಭಾರತಕ್ಕೆ ವಾಪಸಾಗುವ ಸಲುವಾಗಿ ಕುವೈಟ್ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಸೂಡದ 63ರ ಹರೆಯದ ಮಹಿಳೆ ಗಡೀಪಾರು ಕೇಂದ್ರದಲ್ಲಿ (ಡಿಪಾರ್ಟೇಶನ್ ಸೆಂಟರ್) ಪತ್ತೆಯಾಗಿದ್ದಾರೆ.
ಭಾರತಕ್ಕೆ ವಾಪಾಸಾಗುತ್ತಿದ್ದ ಮಹಿಳೆಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಕುವೈಟ್‌ನಲ್ಲಿರುವ ಭಾರತೀಯ ದೂತವಾಸ ಮಾಹಿತಿ ನೀಡಿದೆ. ಆದರೆ ಯಾವ ಕಾರಣಕ್ಕೆ ಬಂಧಿಸಲಾಗಿದೆ ಎಂದು ತಿಳಿಸಿಲ್ಲ.
ಕುವೈಟ್ ನಲ್ಲಿ 28 ವರ್ಷ ಮನೆ ಪರಿಚಾರಕಿಯಾಗಿ ದುಡಿದ ಮಹಿಳೆ ಆರೋಗ್ಯ ತುಸು ಏರುಪೇರಾದ ಹಾಗೂ ಈಗ ಗಲ್ಫ್ ದೇಶದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಸ್ವದೇಶಕ್ಕೆ ವಾಪಸಾಗುತ್ತಿದ್ದರು. ಆದರೆ ಭಾನುವಾರ ವಿಮಾನ ನಿಲ್ದಾಣ ತಲುಪಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು ಎಂದು ಕರ್ನಾಟಕ ಎನ್‌ಅರ್‌ಐ ಫಾರಂನ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.

ತನ್ನ ಮಾಲಕರ ಜೊತೆಗೆ ಮಹಿಳೆ ಸೌಹಾರ್ದಯುತವಾದ ಸಂಬಂಧವನ್ನು ಹೊಂದಿದ್ದರು. ಈ ವಿಚಾರದಲ್ಲಿ ಯಾವ ತಕರಾರು ಇರಲಿಲ್ಲ. ಹೀಗಾಗಿ ಅವರನ್ನು ಏಕೆ ಬಂಧಿಸಿದರು ಎನ್ನುವುದು ನಿಗೂಢವಾಗಿದೆ ಎಂದು ಆರತಿ ಕೃಷ್ಣ ಹೇಳಿದ್ದಾರೆ.
ತಾಯಿಗೆ ಕಾಲುಬೇನೆ ಶುರುವಾಗಿದ್ದು, ಈ ಕಾರಣಕ್ಕಾಗಿ ಭಾರತಕ್ಕೆ ವಾಪಾಸಾಗುತ್ತಿದ್ದರು. ವಿಮಾನ ಪ್ರಯಾಣ ಅವರಿಗೇನೂ ಹೊಸತಲ್ಲ. ಭಾನುವಾರ ಅವರು ಬೆಂಗಳೂರಿಗೆ ಬಂದಿಳಿಯಬೇಕಿತ್ತು.ವಲಸೆ ಪ್ರಕ್ರಿಯೆ ನಡೆಯುತ್ತಿರುವಾಗ ಅವರು ಸ್ವಲ್ಪ ತೊಂದರೆ ಇದೆ ಎಂದು ಹೇಳಿದ್ದರು. ಅನಂತರ ಅವರು ಫೋನಿಗೆ ಸಿಕ್ಕಿರಲಿಲ್ಲ ಎಂದು ಮಹಿಳೆಯ ಪುತ್ರಿ ಕವಿತಾ ಹೇಳಿದ್ದಾರೆ.






































































