ಕೊರೊನಾ ಪೊಸಿಟಿವ್‌ ಆಗಿದೆ ಸಾಯುತ್ತೇನೆ ಎಂದು ಹೇಳಿ ಹೋದವ ಸಿಕ್ಕಿಬಿದ್ದದ್ದೆಲ್ಲಿ ಗೊತ್ತೇ?

ನವಿಮುಂಬಯಿ, ಸೆ. 17 : ಕೊರೊನಾ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸಂಕಷ್ಟ ತಂದೊಡ್ಡಿದೆ. ಆದರೆ ಕೆಲವರು ಈ ಸಂಕಷ್ಟದಲ್ಲೂ ತಮ್ಮ ಅತಿ ಬುದ್ಧಿವಂತಿಕೆಯನ್ನು ತೋರಿಸಿ ಕುಟಿಲ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಅಂಥ ಒಂದು ಘಟನೆ ನಡೆದಿರುವುದು ನವಿಮುಂಬಯಿಯಲ್ಲಿ.

ನವಿಮುಂಬಯಿಯ ತಲೋಜಾದ 28 ವರ್ಷದ ವಿವಾಹಿತ ವ್ಯಕ್ತಿ ಜು.24ರಂದು ಹೆಂಡತಿಗೆ ಫೋನ್‌ ಮಾಡಿ ನನಗೆ ಕೊರೊನಾ ಪೊಸಿಟಿವ್‌ ಆಗಿರುವುದು ದೃಢಪಟ್ಟಿದೆ.   ನಾನಿನ್ನು ಬದುಕುವುದಿಲ್ಲ, ಎಲ್ಲಾದರೂ ಹೋಗಿ ಸಾಯುತ್ತೇನೆ ಎಂದು ಹೇಳಿದ್ದ. ಅನಂತರ ಅವನ ಮೊಬೈಲ್‌ ಸ್ವಿಚ್‌ ಆಫ ಆಯಿತು. ಮರುದಿನ ಭಾವ ಹುಡುಕಾಡಿದಾಗ ವಾಶಿಯಲ್ಲಿ ಅವನ ಬೈಕ್‌ ರಸ್ತೆ ಬದಿಯಲ್ಲಿ ಇತ್ತು,ಹೆಲ್ಮೆಟ್‌, ಕೀಲಿಕೈ, ಬ್ಯಾಗ್‌, ಪರ್ಸ್‌  ಎಲ್ಲವೂ ಬೈಕಿನಲ್ಲೇ ಇದ್ದವು. ಅನಂತರ ಹೆಂಡತಿ ವಾಶಿ ಪೊಲೀಸ್‌ ಠಾಣೆಯಲ್ಲಿ ಗಂಡ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದರು.

ಕೊರೊನಾ ಪೊಸಿಟಿವ್‌ ಆದ ಗಂಡನನ್ನು ಹುಡುಕುವ ಸಲುವಾಗಿ ಪೊಲೀಸರು ಸುತ್ತಮುತ್ತ ಇದ್ದ ಲ್ಯಾಬ್‌, ಆಸ್ಪತ್ರೆ, ಕೊರೊನಾ ಶುಶ್ರೂಷಾ ಕೇಂದ್ರಗಳನ್ನೆಲ್ಲ ತಡಕಾಡಿದರೂ ಯಾವ ಪ್ರಯೋಜನವೂ ಆಗಲಿಲ್ಲ.ಹೆಣವಾದರೂ ಸಿಗುತ್ತಾ ಎಂದು ವಾಶಿಯ ಸಮುದ್ರ, ಖಾಡಿಗಳನ್ನೆಲ್ಲ ಜಾಲಾಡಿದರು.  ಮೊಬೈಲ್‌ ಸ್ವಿಚ್‌ ಆಫ್ ಆದ ಕಾರಣ‌ ಹುಡುಕುವ ಪ್ರಯತ್ನಗಳೆಲ್ಲ ವಿಫಲವಾದವು.

ಕಳೆದ ವಾರ ಅಚಾನಕ್‌ ಆಗಿ ಫೋನ್‌ ಇಂದೋರ್ ನಲ್ಲಿ ಸಕ್ರಿಯವಾಗಿರುವುದು ಪತ್ತೆಯಾಯಿತು.  ಅದರ ಜಾಡು ಹಿಡಿದು ಹೋದಾಗ ಭೂಪ ಅಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದ, ಒಬ್ಬನೇ ಅಲ್ಲ, ಜೊತೆಗೆ ಲವರ್‌ ಕೂಡ ಇದ್ದಳು.  ವಿವಾಹೇತರ ಸಂಬಂಧ ಹೊಂದಿದ್ದ ಆತ ಕೊರೊನಾ ಪೊಸಿಟಿವ್‌ ಆಗಿದೆ, ಸಾಯುತ್ತೇನೆ ಎಂದು ಹೆಂಡತಿಗೆ ಸುಳ್ಳು ಹೇಳಿ ಪ್ರೇಯಸಿ ಜೊತೆಗೆ ಇಂದೋರ್‌ಗೆ ಪಲಾಯನ ಮಾಡಿ ಸುಳ್ಳು ಹೆಸರು ಮತ್ತು ದಾಖಲೆ ನೀಡಿ ಹೊಸ ಸಂಸಾರ ಪ್ರಾರಂಭಿಸಿದ್ದ. ಪೊಲೀಸರು ಅವನನ್ನು ವಾಪಾಸು ಕರೆತಂದು ಹೆಂಡತಿಯ ಕೈಗೊಪ್ಪಿಸಿದ್ದಾರೆ…  















































































































































error: Content is protected !!
Scroll to Top