ಕಾರ್ಕಳ, ಸೆ. 9: ಕಾರ್ಕಳ ಮಂಗಲಪಾದೆ ಪರಿಸರದ ನಿರ್ಜನ ಪ್ರದೇಶದಲ್ಲಿ ಇರುವ ವಿಶಿಷ್ಟವಾದ ಜಿನಬಿಂಬದ ಮೇಲೆ ಕೆಲವು ಕಿಡಿಗೇಡಿ ಯುವಕರು ಹತ್ತಿ ಫೋಟೋ ತೆಗೆಯುವ ಹುಚ್ಚು ಸಾಹಸವನ್ನು ಮಾಡುತ್ತಿರುವುಕ್ಕೆ ಸಂಬಂಧಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ನಿನ್ನೆಯಷ್ಟೇ newskarkala.com ಜಿನಬಿಂಬದ ಮೇಲೆ ಯುವಕನೊಬ್ಬ ನಿಂತಿದ್ದ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕುರಿತು ಸುದ್ದಿ ಪ್ರಕಟಿಸಿ ಗಮನ ಸೆಳೆದಿತ್ತು. ಅದನ್ನನುಸರಿಸಿ ಕಾರ್ಕಳ ತಹಶೀಲ್ದಾರರು ಮತ್ತು ಕಾರ್ಕಳ ನಗರ ಠಾಣಾ ಧಿಕಾರಿಗಳಿಗೆ ಕಾರ್ಕಳ ಜೈನ್ ಬ್ರಿಗೇಡ್ ಸದಸ್ಯರು ಲಿಖಿತ ಮನವಿಯನ್ನು ಸಲ್ಲಿಸಿದರು.
ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಮೂರ್ತಿಯನ್ನು ಸ್ಥಳಾಂತರ ಮಾಡುವ ತನಕ ಅದರ ಸುತ್ತ ಬೇಲಿ ಹಾಕಿ ಯಾರೂ ಹತ್ತಿರ ಹೋಗದಂತೆ ರಕ್ಷಣೆ ನೀಡಲು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಯುವಕರು ಚಪ್ಪಲಿ ಧರಿಸಿ ವಿಗ್ರಹದ ಮೇಲೆ ಹತ್ತಿ ಅದರ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಹಾಗೂ ಇದರಿಂದ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುತ್ತಿದೆ ಎಂದು ಆರೋಪಿಸಿರುವ ಕಾರ್ಕಳ ಜೈನ್ ಬ್ರಿಗೇಡ್ ಇದಕ್ಕೆ ಸಂಬಂಧಿಸಿದ ಫೋಟೊಗಳನ್ನು ನೀಡಿದೆ. ಪೊಲೀಸ್ ಇಲಾಖೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಭರವಸೆ ನೀಡಿದೆ.















