ಶಾಸಕರ ಕಚೇರಿ, ಮನೆಯಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು
ಕಾರ್ಕಳ : ಶಾಸಕ ಸುನಿಲ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಸ್ಟಿಕ್ಕರ್ ಅಭಿಯಾನಕ್ಕೆ ಮುಂದಾದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದ ಘಟನೆ ಸೆ. 2ರಂದು ಸರ್ವಜ್ಞ ವೃತ್ತ ಬಳಿ ನಡೆದಿದೆ.
ಸುನಿಲ್ ಕುಮಾರ್ ಅವರ ಕಚೇರಿಗೆ ಸ್ಟಿಕ್ಕರ್ ಅಂಟಿಸಲು ಕಾಂಗ್ರೆಸ್ ಕಚೇರಿಯಿಂದ ಹೊರಟಿದ್ದ ಶುಭದ ರಾವ್ ಹಾಗೂ ಸುಮಾರು 40 ಮಂದಿ ಕಾರ್ಯಕರ್ತರನ್ನು ಸರ್ವಜ್ಞ ವೃತ್ತ ತಲುಪುತ್ತಿದ್ದಂತೆ ಪೊಲೀಸರು ತಡೆದರು. ಈ ವೇಳೆ ಶುಭದ ರಾವ್ ಸೇರಿದಂತೆ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಸುನಿಲ್ ಕುಮಾರ್ ವಿರುದ್ಧ ಘೋಷಣೆ ಕೂಗಿದರು. ರಸ್ತೆಯಲ್ಲೇ ಕೂತು ಪ್ರತಿಭಟನೆ ಮಾಡಿದರು. ಪ್ರತಿಭಟನಕಾರರನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ದರು.

100ಕ್ಕೂ ಅಧಿಕ ಪೊಲೀಸರು
ಕಾಂಗ್ರೆಸ್ ಅಭಿಯಾನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಿತ್ತು. ಕಾರ್ಕಳ ಸರ್ವಜ್ಞ ವೃತ್ತ ಬಳಿ ಹೊಟೇಲ್ ಜೈನ್ ಮುಂಭಾಗ ಸುಮಾರು 100 ಕ್ಕೂ ಅಧಿಕ ಪೊಲೀಸರಿದ್ದರು. ಶಾಸಕರ ಮನೆ, ಕಚೇರಿಗೂ ಪೊಲೀಸ್ ರಕ್ಷಣೆ ನೀಡಲಾಗಿತ್ತು.
ಕಾರ್ಕಳ ಉಪವಿಭಾಗದ ಎಎಸ್‌ಪಿ ಇಶಿತಾ ಗುಪ್ತಾ, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ, ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್., ನಗರ ಠಾಣೆ ಎಸ್‌ಐ ಶಿವಕುಮಾರ್, ಕಾಪು ಎಸ್‌ಐ ತೇಜಸ್ವಿ, ಪಡುಬಿದ್ರೆ ಎಸ್‌ಐ ಶಕ್ತಿವೇಲು ಬಂದೊಬಸ್ತ್ ನೇತೃತ್ವ ವಹಿಸಿದ್ದರು.
ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಮನೆ, ಕಚೇರಿಗೆ ಸ್ಟಿಕ್ಕರ್ ಅಂಟಿಸಲು 10 ಗಂಟೆ ಸುಮಾರಿಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ತಿಳಿದ ನೂರಾರು ಬಿಜೆಪಿ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಶಾಸಕರ ಕಚೇರಿ, ಮನೆಯತ್ತ ಧಾವಿಸಿದರು. ಶುಭದ ರಾವ್ ವಿರುದ್ಧ ಧಿಕ್ಕಾರ ಕೂಗಿದರು.

















