ಈ ವರ್ಷ ಬಹಳ ಕಠಿಣವಾಗಲಿದೆ ಶಬರಿಮಲೆ ಯಾತ್ರೆ

ತಿರುವನಂತಪುರ, ಸೆ.9: ಮಂಡಲ ಪೂಜೆ ಸಂದರ್ಭದಲ್ಲಿ ಶಬರಿಮಲೆ ಯಾತ್ರೆಗೈಯ್ಯುವ ಭಕ್ತರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೊಳಪಡಬೇಕು. ಮಲೆ ಏರುವ ಮೊದಲೇ ನೀಲಕ್ಕಲ್‌ನಲ್ಲಿ  ಎಲ್ಲ ಯಾತ್ರಾರ್ಥಿಗಳನ್ನು ಕೊರೊನಾ ಪರೀಕ್ಷೆಗೊಳಪಡಿಸಿ ನೆಗೆಟಿವ್‌ ವರದಿ ಬಂದವರಿಗೆ ಮಾತ್ರ ಯಾತ್ರೆ ಮುಂದುವರಿಸಲು ಅನುಮತಿ ನೀಡುವ ಪ್ರಸ್ತಾವವನ್ನು ಕೇರಳ ಸರಕಾರ ಪರಿಶೀಲಿಸುತ್ತಿದೆ.  

ನವಂಬರ್‌ 15ರಿಂದ ಮಂಡಲ ಯಾತ್ರಾ ಋತು ಆರಂಭವಾಗಲಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿಸುವ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ಯಾತ್ರೆಗೈಯ್ಯಲು ಈ ವರ್ಷ ಅವಕಾಶ ಸಿಗುವ ಸಾಧ್ಯತೆಯಿದೆ.

ದೇವಸ್ವಂ ಬೋರ್ಡ್‌ ಭಕ್ತರ ಸುರಕ್ಷೆಗಾಗಿ ವಿವಿಧ ಪ್ರಸ್ತಾವಗಳನ್ನು ಪರಿಶೀಲಿಸುತ್ತಿದೆ. ಕೊರೊನಾ ಪರೀಕ್ಷೆಗೆ ಸಂಬಂಧಿಸಿ ಆರೋಗ್ಯ ಇಲಾಖೆ ಜೊತೆಗೆ ಚರ್ಚಿಸಲಾಗುತ್ತಿದೆ. ನೀಲಕ್ಕಲ್‌ನಲ್ಲೇ ಕೊರೊನಾ ಪರೀಕ್ಷೆಗೆ ಸುಸಜ್ಜಿತ ವ್ಯವಸ್ಥೆ ಮಾಡುವ ಕುರಿತು ದೇವಸ್ವಂ ಬೋರ್ಡ್‌ ಚಿಂತಿಸುತ್ತಿದೆ.

ಒಮ್ಮೆಗೆ 50 ಭಕ್ತರು

ಸನ್ನಿದಾನಕ್ಕೆ ಒಂದು ಸಲ ಬರೀ 50  ಮಂದಿಯನ್ನು ಮಾತ್ರ ಬಿಡುವ ನಿಯಮ ಜಾರಿಗೆ ಬರಲಿದೆ. ಇದರಿಂದ ದರ್ಶನ ವಿಳಂಬವಾಗುವ ಸಾಧ್ಯತೆಯಿದೆ ಹಾಗೂ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ಯಾತ್ರೆಗೈಯ್ಯಲು ಅನುಮತಿ ಸಿಗಬಹುದು.

ಈ ವರ್ಷ ವರ್ಚುವಲ್‌ ಕ್ಯೂ ಸಿಸ್ಟಂ ಮಾತ್ರ ಇರುತ್ತದೆ. ಅಂದರೆ ಆನ್ ಲೈನ್‌ನಲ್ಲಿ  ದರ್ಶನಕ್ಕೆ ಸಮಯ ಕಾದಿರಿಸಿ ಆ ಸಮಯವನ್ನು ಹೊಂದಿಕೊಂಡು ಮಲೆಯೇರಲು ತೊಡಗಬೇಕು. ಎಲ್ಲೂ ಜನಜಂಗುಳಿಯಾದಂತೆ ನೋಡಿಕೊಳ್ಳಬೇಕು.

ಈ ಮೊದಲು ಕೊರೊನಾ ನೆಗೆಟಿವ್‌ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಮಲೆಯೇರಲು ಅನುಮತಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಶಬರಿಮಲೆ ಯಾತ್ರೆಗೆ ನಾಲ್ಕೈದು ದಿನ ತಗಲುತ್ತದೆ. ತುಂಬ ದೂರದಿಂದ ಬರುವವರಾದರೆ  ಒಂದು ವಾರಕ್ಕೂ ಹೆಚ್ಚು ಸಮಯ ಹಿಡಿಯುತ್ತದೆ. ನೆಗೆಟಿವ್‌ ಸರ್ಟಿಫಿಕೆಟ್‌ ಇದ್ದರೂ ದಾರಿ ಮಧ್ಯೆ ವೈರಸ್‌ ಸೋಂಕಿಗೆ ತುತ್ತಾಗುವ ಸಾಧ್ಯತೆಯಿರುವುದರಿಂದ ನೀಲಕ್ಕಲ್‌ ನಲ್ಲಿ ಕೊರೊನಾ ಪರೀಕ್ಷೆ ಮಾಡುವ ಬಗ್ಗೆ ಸರಕಾರ ಚಿಂತಿಸುತ್ತದೆ.

ಏನೇ ಆದರೂ ಈ ಸಲ ಶಬರಿಮಲೆ ಯಾತ್ರೆ ಎಂದಿನಂತಿರುವುದಿಲ್ಲ. ಕೊರೊನಾ ಕಾರಣದಿಂದ ಅಯ್ಯಪ್ಪನ ದರ್ಶನವೂ ಬಹಳ ಕಠಿಣವಾಗಲಿದೆ.











































error: Content is protected !!
Scroll to Top