ಮುಂಬಯಿ, ಸೆ. 9: ಕಂಗನಾ ರಣಾವತ್ ವರ್ಸಸ್ ಶಿವಸೇನೆ ಫೈಟ್ ಇಂದು ಮುಂಬಯಿಯಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು.ಬೆಳಗ್ಗೆ ಬಿಎಂಸಿ ಅಧಿಕಾರಿಗಳು ಕಂಗನಾ ಕಚೇರಿಯನ್ನು ಕಡವಿ ಹಾಕಿದರು. ಬಳಿಕ ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿತು.
ಹಿಂದೆಯೇ ಘೋಷಿಸಿದಂತೆ ಇಂದು ಅಪರಾಹ್ನದ ಹೊತ್ತಿಗೆ ಕಂಗನಾ ತವರು ರಾಜ್ಯವಾದ ಹಿಮಾಚಲ ಪ್ರದೇಶದಿಂದ ಮುಂಬಯಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಎದುರು ಕಂಗನಾ ಪರವಾಗಿರುವವರು ಮತ್ತು ಶಿವಸೇನೆ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪರ ಮತ್ತು ವಿರೋಧಿ ಘೋಷಣೆಗಳಿಂದ ಒಟ್ಟಾರೆ ಗೊಂದಲದ ವಾತಾವರಣ ಉಂಟಾಯಿತು.
ಇದೇ ವೇಳೆ ಕಂಗನಾ ಬಿಎಂಸಿ ತನ್ನ ಕಚೇರಿಯನ್ನು ನಾಶ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ವೀಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನೇರವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸವಾಲು ಹಾಕಿದ್ದಾರೆ. ಇಂದು ನನ್ನ ಮನೆಯನ್ನು ಕೆಡವಿದ್ದೀರಿ, ನಾಳೆ ನಿಮ್ಮ ಅಹಂಕಾರ ಪತನಗೊಳ್ಳಲಿದೆ ಎಂದು ಉದ್ಧವ ಠಾಕ್ರೆಯನ್ನುದ್ದೇಶಿಸಿ ಕಂಗನಾ ಹೇಳಿದ್ದಾರೆ. ಕಾಲವೆಂಬುದು ಚಕ್ರದ ಹಾಗೆ. ಅದು ತಿರುಗುತ್ತಲೇ ಇರುತ್ತದೆ. ನಾಳೆ ಕುಸಿಯುವ ಸರದಿ ನಿಮ್ಮದಾಗಿರಬಹುದು. ನಿಮ್ಮ ಸೇಡಿನ ಕ್ರಮಕ್ಕೆ ಉತ್ತರವಾಗಿ ಕಾಶ್ಮೀರಿ ಪಂಡಿತರ ಕುರಿತು ಸಿನೇಮಾ ತಯಾರಿಸಿ ತೋರಿಸುತ್ತೇನೆ. ಅವರಿಗಾದ ಗತಿಯೇ ಇಂದು ನನಗೆ ಮುಂಬಯಿಯಲ್ಲಿ ಆಗಿದೆ ಎಂದು ಕಿಡಿಕಾರಿದ್ದಾರೆ.

















