
ಕಳೆದ ವರ್ಷ ಜು.9ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಓವಲ್ನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಔಟ್ ಆದ ಸನ್ನಿವೇಶವನ್ನೊಮ್ಮೆ ಸ್ಮೃತಿಗೆ ತಂದುಕೊಳ್ಳಿ.ಮಾರ್ಟಿನ್ ಗಪ್ಟಿಲ್ ಎಸೆದ ಚೆಂಡಿಗೆ ರನ್ ಔಟ್ ಆಗಿ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಧೋನಿ ಪೆವಿಲಿಯನ್ ಗೆ ಹೋದಾಗ ಶತಕೋಟಿ ಭಾರತೀಯರ ಗೆಲುವಿನ ಆಸೆಯೂ ಕಮರಿ ಹೋಗಿತ್ತು. ಅಲ್ಲಿಗೆ ಭಾರತದ ವಿಶ್ವಕಪ್ ಅಭಿಯಾನವೂ ಮುಗಿದಿತ್ತು. ಅದರೆ ಯಾರೂ ಧೋನಿಯನ್ನು ಬ್ಲೂ ಜೆರ್ಸಿಯಲ್ಲಿ ಕೊನೆಯದಾಗಿ ನೋಡುತ್ತಿರುವ ಕ್ಷಣವೂ ಇದೇ ಎಂದು ಕನಸು ಮನಸಿನಲ್ಲೂ ಎಣಿಸಿರಲಿಕ್ಕಿಲ್ಲ.
ವಿಶ್ವಕಪ್ ಸೆಮಿಫೈನಲ್ ಪಂದ್ಯವೇ ಧೋನಿ ಆಡಿದ ಕೊನೆಯ ಅಂತಾರಾಷ್ಟ್ರೀಯ ಏಕದಿನವೂ ಆಗಿಹೋಯಿತು.ಜಗದೇಕ ವೀರನಂಥ ಕ್ಯಾಪ್ಟನ್ ಪಾಲಿಗೆ ಒಂದು ಸೋಲಿನ ಪಂದ್ಯವೇ ಕೊನೆಯ ಪಂದ್ಯವೂ ಆಯಿತಲ್ಲ ಎನ್ನುವ ನೋವು ಕ್ರಿಕೆಟ್ ಅಭಿಮಾನಿಗಳನ್ನು ಸದಾ ಕಾಡಲಿದೆ.
16 ವರ್ಷದ ಅದ್ಭುತ ಕ್ರಿಕೆಟ್ ಕೆರಿಯರ್ಗೆ ವಿದಾಯ ಹೇಳುವಾಗ ಶ್ರೇಷ್ಠ ಕ್ಯಾಪ್ಟನ್ಗೆ ಎದ್ದುನಿಂತು ಅಭಿವಾದನ ಸಲ್ಲಿಸುವ ಅವಕಾಶ ಅಭಿಮಾನಿಗಳಿಗೆ ಮತ್ತು ಗೌರವದಿಂದ ಬೀಳ್ಕೊಡುವ ಅವಕಾಶ ಭಾರತೀಯ ಕ್ರಿಕೆಟ್ ತಂಡಕ್ಕೆ ಸಿಗದೇ ಹೋಯಿತು.

2004ರಲ್ಲಿ ಧೋನಿ ಎಂಬ ಕ್ರಿಕೆಟ್ ಮಾಂತ್ರಿಕನ ಬದುಕು ಹೇಗೆ ಆರಂಭವಾಯಿತೋ ಅದೇ ರೀತಿ ಅಂತ್ಯವಾದದ್ದೊಂದು ವಿಸ್ಮಯವೇ ಸರಿ.
ಅಂದಹಾಗೇ ಧೋನಿ ಮೊದಲ ಪಂದ್ಯದಲ್ಲೂ ರನ್ ಔಟ್ ಆಗಿಯೇ ಮೈದಾನದಿಂದ ನಿರ್ಗಮಿಸಿದ್ದರು. ಕೊನೆಯ ಪಂದ್ಯದಲ್ಲಿ ರನ್ ಔಟ್ ಆಗಿ ಆಂತಾರಾಷ್ಟ್ರೀಯ ಕ್ರಿಕೆಟ್ನಿಂದಲೇ ನಿರ್ಗಮಿಸಿದರು.
ಅದು 2004 ಡಿ 23ರಂದು ಬಾಂಗ್ಲಾದೇಶದ ವಿರುದ್ಧ ಛತ್ತೋಗ್ರಾಮ್ ನಲ್ಲಿ ನಡೆದ ಪಂದ್ಯ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪಂದ್ಯ ಎಂಬ ಕಾರಣಕ್ಕಷ್ಟೇ ಈ ಮುಖಾಮುಖಿ ನೆನಪಿನಲ್ಲಿ ಉಳಿಯುತ್ತದೆ. ಏಕೆಂದರೆ ಈ ಪಂದ್ಯದಲ್ಲಿ ಧೋನಿ ತಾನು ಎದುರಿಸಿದ ಮೊದಲ ಬಾಲ್ಗೆ ರನ್ ಔಟ್ ಆಗಿ ಶೂನ್ಯ ಸ್ಕೋರ್ನೊಂದಿಗೆ ಪೆವಿಲಿಯನ್ನತ್ತ ಸಾಗಿದ್ದರು.ಏಕದಿನದಲ್ಲಿ ಎದುರಿಸಿದ ಕೊನೆಯ ಬಾಲ್ನಲ್ಲೂ ರನ್ ಔಟ್ ಆದರು.
ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ರನ್ ಔಟ್ ಆದಾಗ ಕ್ರಿಕೆಟ್ ಪಂಡಿತರೆಲ್ಲ ಇದು ಹೀಗೆ ಬಂದು ಹಾಗೇ ಹೋಗುವ ಇನ್ನೊಬ್ಬ ಕ್ರಿಕೆಟಿಗ ಎಂದು ಲೆಕ್ಕ ಹಾಕಿದ್ದರು. ಏಕೆಂದರೆ ಅಗ ಭಾರತದ ಕ್ರಿಕೆಟ್ ಮುಂಬಯಿ ಕೇಂದ್ರಿತವಾಗಿತ್ತು. ರಾಂಚಿಯಂಥ ಚಿಕ್ಕ ನಗರದ ಓರ್ವ ಕ್ರಿಕೆಟಿಗ ಗಾಡ್ಫಾದರ್ಗಳ ಸಹಾಯವಿಲ್ಲದೆ ಕ್ರಿಕಟ್ನಲ್ಲಿ ಮೇಲೇರುವುದು ಅಸಾಧ್ಯ ಎಂಬ ಪರಿಸ್ಥಿತಿಯಿತ್ತು. ಹೀಗಾಗಿ ಧೋನಿ ಕೆರಿಯರ್ ಪ್ರಾರಂಭವಾಗುವ ಮೊದಲೇ ಮುಗಿದು ಹೋಯಿತು ಎಂದು ಷರಾ ಬರೆದಿದ್ದರು ಹಲವರು.
ಆದರೆ ನಂತರ ನಡೆದದ್ದೆಲ್ಲ ಒಂದು ರೀತಿಯ ಪವಾಡವೇ.ಆ ಪವಾಡಕ್ಕೆ ಧೋನಿ ಮ್ಯಾಜಿಕ್ ಎಂದು ಹೆಸರು. 16 ವರ್ಷದ ಸುದೀರ್ಘ ಕ್ರಿಕೆಟ್ ಕೆರಿಯರ್ನಲ್ಲಿ ಭಾರತದ ಕ್ರಿಕೆಟ್ನ ಸ್ವರೂಪವನ್ನೇ ಧೋನಿ ಬದಲಾಯಿಸಿಬಿಟ್ಟರು.ಗಂಗೂಲಿ ಬಳಿಕ ಟೀಮ್ಗೆ ಒಂದು aggressive attitude ಕೊಟ್ಟದ್ದು ಧೋನಿ. ಕೊನೆಯ ಚೆಂಡಿನ ತನಕವೂ ಗೆಲುವಿಗಾಗಿ ಹೋರಾಡಬೇಕು ಎಂಬ ಛಲ ತುಂಬಿದ್ದು ಧೋನಿ.
2004ರ ಮೊದಲ ರನ್ ಔಟ್ಗೂ 2019ರ ಕೊನೆಯ ರನ್ ಔಟ್ಗೂ ಒಂದು ಪ್ರಮುಖ ವ್ಯತ್ಯಾಸವಿದೆ. 2004ರಲ್ಲಿ ಧೋನಿ ಓರ್ವ ಅಪರಿಚಿತ, ಅನಾಮಧೇಯ ಕ್ರಿಕೆಟಿಗನಾಗಿದ್ದರು.2019ರಲ್ಲಿ ಅವರು ಕ್ರಿಕೆಟ್ನ ದಂತಕತೆಯಾಗಿದ್ದರು. ರೋಹಿತ್ ಶರ್ಮ ಹೇಳಿದಂತೆ ಕ್ರಿಕೆಟ್ ಜಗತ್ತಿನ ಓರ್ವ ಪ್ರಭಾವಿ ವ್ಯಕ್ತಿಯಾಗಿ ಧೋನಿ ಕ್ರಿಕೆಟ್ ಇರುವ ತನಕ ನೆನಪಿನಲ್ಲಿ ಉಳಿಯುತ್ತಾರೆ.
ಉಮೇಶ್ ಕೋಟ್ಯಾನ್