ಯಕ್ಷಗಾನದಲ್ಲಿ ಹೊಸತನ ಮೂಡಿಸಿದ ಯಕ್ಷ ದೇಗುಲದ ಯಕ್ಷೋಲ್ಲಾಸ

0

ಶಿವಪ್ರಸಾದ್‌ ಕಾಂತಾವರ

ಕಲೆಯು ಭಗವಂತ ಸ್ವರೂಪಿಯಾದುದು. ಅಲ್ಲಿ ಬಡವ, ಸಿರಿವಂತ, ಮೇಲು -ಕೀಳು ಎಂಬ ಭೇದಭಾವಗಳಿಗೆ ಜಾಗವಿಲ್ಲ. ಒಂದು ವೇಳೆ ಅದು ಕಂಡು ಬಂದರೂ ಅದು ಸ್ವಾರ್ಥಿಗಳ ಸ್ವಾರ್ಥ ಚಿಂತನೆಗಳಿಂದ. ನಿಸ್ವಾರ್ಥತತೆಯಿಂದ, ಪ್ರಾಮಾಣಿಕವಾಗಿ ಕಲೆಯ, ಕಲಾವಿದರ ಏಳಿಗೆಗೆ ಉಳಿವಿಗೆ ಶ್ರಮಿಸಿದಾಗ ತನ್ನಿಂದ ತಾನಾಗಿಯೇ ಕಲೆಯು ಪರಿಪೂರ್ಣವಾಗಿ ಸಾಕ್ಷಾತ್ಕಾರವಾಗುತ್ತದೆ  ಎನ್ನುವ ನಿತ್ಯ ಸತ್ಯವನ್ನು ಕಾಂತಾವರದ ಯಕ್ಷ ದೇಗುಲ ಸಂಘಟನೆಯು ಯಕ್ಷೋಲ್ಲಾಸ-2020 ಕಾರ್ಯಕ್ರಮದ ಮೂಲಕ ಸಾಬೀತುಪಡಿಸಿದೆ.

ಅಲ್ಲಿ ಪ್ರಸಿದ್ಧಿಯ ಕಲಾವಿದರು ಇದ್ದಿದ್ದರೂ… ಬೆರಳೆಣಿಕೆಯಷ್ಟು ಮಾತ್ರ , ಯಕ್ಷರಂಗದಲ್ಲಿ ಪರಿಪಕ್ವರು ಎನ್ನಿಸಿಕೊಂಡ ಕಲಾವಿದರುಗಳು ಹಲವರಿರಲಿಲ್ಲ ಆದರೂ ಯಕ್ಷಗಾನ ಮೇಳೈಸಿತು.

ಪ್ರೌಢಿಮೆಯ ,ಪ್ರಬುದ್ಧತೆಯ ಕಲಾವಿದರುಗಳಿದ್ದರೆ ಸಾಕು ಯಕ್ಷಗಾನವನ್ನು ಜನಮಾನಸದಲ್ಲಿ ನಿತ್ಯ ನಿರಂತರವಾಗಿ ನೆಲೆಸುವಂತೆ ಮಾಡಬಹುದು ಎಂಬುದನ್ನು ಯಕ್ಷಗಾನ ಕಲಾವಿದ ಯಕ್ಷ ಗುರು ಯಕ್ಷ ದೇಗುಲ ಕಾಂತವರ ಇದರ ಸಂಘಟಕ ಮಹಾವೀರ ಪಾಂಡಿಯವರು ಸಾಧಿಸಿ ತೋರಿಸಿದ್ದಾರೆ.

ಪ್ರತಿ ವರ್ಷ ಶಿಕ್ಷಣದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಯಕ್ಷಗಾನ, ಜೊತೆಗೆ ಪ್ರಸಿದ್ಧ ಕಲಾವಿದರುಗಳ ಯಕ್ಷಗಾನ- ತಾಳಮದ್ದಳೆ ಕಾರ್ಯಕ್ರಮಗಳ ಮೂಲಕ ಯಕ್ಷಪ್ರಿಯರನ್ನು ಸಂತಸಗೊಳಿಸುತ್ತಿದೆ ಯಕ್ಷ ದೇಗುಲ ಸಂಘಟನೆ.

ಆದರೆ ಈ ವರ್ಷ ಎಂದಿನಂತಲ್ಲ. ಮಾಡುವ ಹಂಬಲವಿದ್ದರೂ , ಮಾಡಲು ಕಲಾಭಿಮಾನಿಗಳ ಬೆಂಬಲವಿದ್ದರೂ ಸರಕಾರದ ನೀತಿ ನಿಯಮಗಳಿಗೆ ಬದ್ಧರಾಗಿರಬೇಕಾದ ಅನಿವಾರ್ಯತೆ. ಕೇವಲ ಯಕ್ಷಗಾನದಲ್ಲಿ ಎಂದಲ್ಲ, ಎಲ್ಲಾ  ಕಲಾ ಪ್ರಕಾರಗಳಿಗೂ ಮುಖ್ಯವಾಗಿ ಕಲಾವಿದರುಗಳಿಗೆ ಜೀವನ ನಡೆಸಲು ದಿಕ್ಕು ತೋಚದಂತಾಗಿರುವ ವರ್ಷವಿದು. ಅಲ್ಲೊಂದು ಇಲ್ಲೊಂದು ಸಂಘಟನೆಗಳು ಯೂಟ್ಯೂಬ್ ,ಫೇಸ್ಬುಕ್ ಹಾಗು ಇನ್ನಿತರ  ಲೈವ್ ಚಾನೆಲ್‌ ಗಳ ಮೂಲಕ ಯಕ್ಷಗಾನವನ್ನು ಪ್ರಸ್ತುತಪಡಿಸಿ   ಕಲಾರಸಿಕರಿಗೆ ಅಲ್ಪ ಮಟ್ಟಿನ ಸಂತಸವನ್ನು ಒದಗಿಸಿದರೂ, ಕಲಾವಿದರುಗಳಾಗಿ ಭಾಗವಹಿಸುವ ಯೋಗ ಒದಗಿದ್ದು ಪ್ರಸಿದ್ಧ ರೆನಿಸಿಕೊಂಡುವರಿಗೆ ಮಾತ್ರ.

ಹೀಗಾಗಿ ಯಕ್ಷ ದೇಗುಲ ಸಂಘಟನೆಯ ಮೂಲಕ ಕೆಲ ಕಲಾವಿದರುಗಳಿಗೆ ಯಕ್ಷಗಾನದಲ್ಲಿ ಭಾಗವಹಿಸುವ ಆನಂದವನ್ನು, ಅಲ್ಪ ಮುಟ್ಟಿನ ಸಹಾಯವನ್ನು ಮಾಡಬಾರದೇಕೆ ಎಂಬ ಚಿಂತನೆಯನ್ನು ಅವರು ನಡೆಸಿದರು. ಇವರ ಚಿಂತನೆಗೆ ನಾವೀನ್ಯ ರೀತಿಯಲ್ಲಿ ಪ್ರಸಂಗ ಸಂಕಲನದ ಮೂಲಕ ಕಲಾವಿದ ಗಣೇಶ್ ಶೆಟ್ಟಿ ಸಾಣೂರು ಬೆಂಬಲವನ್ನು ನೀಡಿದರು. ತಾಂತ್ರಿಕವಾಗಿ ಅವರ ಅಣ್ಣನ ಮಗ ರತನ್ ಪಾಂಡಿ ಸಾಥ್  ನೀಡಿದರು. ಇದರ ಫಲ ಸ್ವರೂಪವೇ

ಆಗಸ್ಟ್ ಹದಿನೈದರಂದು ಕಾರ್ಕಳ ತಾಲೂಕಿನ ವೃತ್ತಿಪರ ಮೇಳದ ಕಲಾವಿದರುಗಳಿಂದ ಎಂಬ ನವೀನ ಚಿಂತನೆಯೊಂದಿಗೆ, ಪರಿಕಲ್ಪನೆಯೊಂದಿಗೆ ಪ್ರದರ್ಶನಗೊಂಡ ಆನ್‌ ಲೈನ್ ಯಕ್ಷಗಾನ ಯುಗ ಧರ್ಮ.

ಯುಗ ಧರ್ಮ

ಅನಂತರಾಮ ಬಂಗಾಡಿ ಅವರು ರಚಿಸಿದ ಗಾಂಧಾರಿ ಆಖ್ಯಾನದ ಕಥಾಹಂದರಗಳನ್ನು ಮೂಲಕತೆಗೆ ಚ್ಯುತಿ ಬಾರದಂತೆ ನವೀನ ರೀತಿಯಲ್ಲಿ ಸಂಕಲನಗೊಳಿಸಿ ಸಿದ್ಧಗೊಳಿಸಿದ ಆಖ್ಯಾನವೇ ಯುಗ ಧರ್ಮ.

ಕಟೀಲು ,ಸುಂಕದಕಟ್ಟೆ ಬಪ್ಪನಾಡು ,ಮಂಗಳಾದೇವಿ ಸಸಿಹಿತ್ಲು, ಸೂಡ, ಬೆಂಕಿನಾಥೇಶ್ವರ ‘ಸಾಲಿಗ್ರಾಮ ಹೀಗೆ ಅಷ್ಟ ಮೇಳಗಳಲ್ಲಿ ವೃತ್ತಿಪರರಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಕಳ ತಾಲೂಕಿನ ಹಿಮ್ಮೇಳ- ಮುಮ್ಮೇಳ ಕಲಾವಿದರುಗಳು ಪ್ರಸ್ತುತಪಡಿಸಿದ ಯುಗಧರ್ಮ ಕಲಾಸಕ್ತರ ಮನಸೂರೆಗೊಂಡಿತು. ವೀರರಸದ ಅಳವಡಿಕೆ ಈ ಸಂಕಲನದಲ್ಲಿ ಕಡಿಮೆ ಇದ್ದು, ಭಾವನಾತ್ಮಕವಾಗಿ ಸಾಗುವ ಕಥೆಯು ಗಾಂಧಾರಿಯ  ಯೌವ್ವನಾವಸ್ಥೆಯಿಂದ ಆರಂಭಗೊಂಡು ಗಾಂಧಾರಿಗೆ ಶ್ರೀ ಕೃಷ್ಣನಿಂದ ತನ್ನ ಜನ್ಮ ರಹಸ್ಯ ಅರಿವು ಆಗುವವರೆಗಿನ ವಿವಿಧ ಮಜಲುಗಳನ್ನು ದಾಟಿ ಸಾಗುತ್ತದೆ. ಮುಖ್ಯವಾಗಿ ಗೊಂದಲಗಳ ಬೀಡಾಗಿರುವ ಗಾಂಧಾರಿಯ ಚಿತ್ರಣವನ್ನು ಚಿತ್ರಿಸುವುದು ಸುಲಭದ ಮಾತೇನಲ್ಲ. ಗಾಂಧಾರಿಯ ಈ ಪಾತ್ರದಲ್ಲಿ ಪರಕಾಯ ಪ್ರವೇಶದ ಮೂಲಕ ನ್ಯಾಯ ಒದಗಿಸಿದವರು ಯಕ್ಷಕನ್ಯೆ ಶಶಿಕಾಂತ ಶೆಟ್ಟಿಯವರು. ಗಾಂಧಾರಿಯ ಚಿತ್ರಣ ಅಭಿವ್ಯಕ್ತವಾಗುವುದನ್ನು ಹೊಂದಿಕೊಂಡು  ಯುಗ ಧರ್ಮ ಕಥಾ  ಹಂದರದ ಯಶಸ್ಸು ನಿರ್ಧರಿತವಾಗುವುದರಿಂದ ಶಶಿಕಾಂತ್ ಶೆಟ್ಟಿ ಅವರು ಅದ್ಭುತವಾದ ಪಾತ್ರ ಪೋಷಣೆಯ ಮೂಲಕ  “ಮ್ಯಾನ್ ಆಫ್ ದಿ ಮ್ಯಾಚ್” ಆದರು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಇವರೊಂದಿಗೆ ಕಥೆಯುದ್ದಕ್ಕೂ ಸಾಗುವ ಶಕುನಿಯ ಪಾತ್ರದಲ್ಲಿ ಸಂಕಲನಕಾರ ಗಣೇಶ್ ಶೆಟ್ಟಿ  ಸಾಣೂರು ಜೊತೆಗೆ ಸ್ತ್ರೀ ವೇಷಧಾರಿ  ಮಹೇಶ್ ಸಾಣೂರು ಇವರ ಪಾಂಡುವಿನ ಪಾತ್ರಗಳು ಮತ್ತಷ್ಟು ಕಳೆಯನ್ನು ತುಂಬಿದವು. ಇವರೊಂದಿಗೆ ಹಿಮ್ಮೇಳದಲ್ಲಿ ಆರು ಜನ ಭಾಗವತರುಗಳು ಐದು ಜನ ಚೆಂಡೆ ಮದ್ದಳೆ ವಾದಕರ ಹಿತಮಿತವಾದ ಕಾರ್ಯವು ಪ್ರಶಂಸನೀಯವಾಗಿತ್ತು. ಪಾತ್ರವೂ ಹಿರಿದಿರಲಿ ಕಿರಿದಿರಲಿ ಅದಕ್ಕೆ ನ್ಯಾಯ ಸಲ್ಲಿಸಿದ ಪ್ರತಿಯೋರ್ವ ಕಲಾವಿದನ ಪಾತ್ರ ಪೋಷಣೆ ಉತ್ಕೃಷ್ಟ ಮಟ್ಟದಲ್ಲಿತ್ತು.

ಯಾವುದೇ ಒಂದು ಯಕ್ಷಗಾನ ಆಖ್ಯಾನದ ಯಶಸ್ಸು ಕಲಾವಿದರ ಪ್ರಸಿದ್ಧಿಯ ಮೇಲೆ ನಿರ್ಧರಿತವಾದುದಲ್ಲ, ಕಲಾವಿದನ ಪ್ರಬುದ್ಧತೆಯ ಮೇಲೆ ಪ್ರಮುಖವಾಗಿ ಕಲಾವಿದರುಗಳ ನಿಸ್ವಾರ್ಥ ಕಲಾ ಕೈಂಕರ್ಯದ ಮೇಲೆ ನಿರ್ಧರಿತವಾಗಿರುತ್ತದೆ. ಪ್ರತಿಯೋರ್ವ ಕಲಾವಿದ  ಆನ್‌ ಲೈನ್ ಕಾರ್ಯಕ್ರಮಕ್ಕೆ ಯೋಗ್ಯ ಎಂಬ  ಸಂದೇಶವನ್ನು ಯಕ್ಷೋಲ್ಲಾಸ – 2020  ಕಾರ್ಯಕ್ರಮದ ಮೂಲಕ ಜನತೆಗೆ ತಲುಪಿಸಿದ ಮಹಾವೀರ ಪಾಂಡಿ ಇವರಿಗೆ ಹೃದಯಾಂತರಾಳದ ನಮನಗಳು.

Previous articleಲಕ್ನೋ : ಬಾಲಕಿ ಮೇಲೆ ಭೀಕರ ಅತ್ಯಾಚಾರ : ಕಣ್ಣಗುಡ್ಡೆ ಕಿತ್ತು, ನಾಲಗೆ ಕತ್ತರಿಸಿ ಕೊಲೆ
Next articleಕಾರ್ಕಳದಲ್ಲಿಂದು ಗರಿಷ್ಠ ಪಾಸಿಟಿವ್‌ ; ಓರ್ವ ಮೃತ

LEAVE A REPLY

Please enter your comment!
Please enter your name here