ಅಯೋಧ್ಯೆ, ಜು. 30 : ರಾಮ ಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಪ್ರಾರಂಭವಾಗಿರುವಂತೆಯೇ ಅಯೋಧ್ಯೆಯ ಓರ್ವ ಅರ್ಚಕ ಹಾಗೂ ಭದ್ರತೆಯ ಕರ್ತವ್ಯದಲ್ಲಿರುವ 15 ಪೊಲೀಸರಿಗೆ ಕೊರೊನಾ ಸೋಂಕು ಅಂಟಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಆ.5ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದು ಇದಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್ಚಿನ ಜನರಿಗೆ ಅವಕಾಶವಿಲ್ಲ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆ.5ರಂದು ನಿಮ್ಮ ಮಠ, ಮಂದಿರಗಳಲ್ಲೇ ವಿಶೇಷ ಪೂಜೆ ನೆರವೇರಿಸಿ ಎಂದು ಎಲ್ಲ ಸಂತರಿಗೆ ಮನವಿ ಮಾಡಿದೆ.
ಆ.5ರ ಭೂಮಿ ಪೂಜೆ ವಿಧಿಗಳನ್ನು ವಾರಣಾಸಿ ಮತ್ತು ಅಯೋಧ್ಯೆಯ 11 ಅರ್ಚಕರು ನೆರವೇರಿಸಲಿದ್ದಾರೆ. ಕೊರೊನಾ ಪೊಸಿಟಿವ್ ಆಗಿರುವ ಅರ್ಚಕ ಈ 11 ಮಂದಿಯ ತಂಡದಲ್ಲಿ ಇಲ್ಲ.ಹೀಗಾಗಿ ಕಾರ್ಯಕ್ರಮಕ್ಕೆ ಯಾವುದೇ ಅಡಚಣೆಯಿಲ್ಲ ಎಂದು ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.