ದಿಲ್ಲಿ : 2001 ರಲ್ಲಿ ದೇಶಾದ್ಯಂತ ತಲ್ಲಣವುಂಟು ಮಾಡಿದ್ದ ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಮತ್ತು ಇತರ ಇಬ್ಬರಿಗೆ ದಿಲ್ಲಿಯ ವಿಶೇಷ ನ್ಯಾಯಾಲಯ ಗುರುವಾರ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ವೀರೇಂದ್ರ ಭಟ್ ಅವರು ಮೂವರು ಆರೋಪಿಗಳಾದ ಜೇಟ್ಲಿ, ಅವರ ಮಾಜಿ ಸಹೋದ್ಯೋಗಿ ಗೋಪಾಲ್ ಪಚೇರ್ವಾಲ್ ಮತ್ತು ಮೇಜರ್ ಜನರಲ್ (ನಿವೃತ್ತ) ಎಸ್ಪಿ ಮುರ್ಗೈ ಅವರನ್ನು ಸಂಜೆ 5 ಗಂಟೆಯೊಳಗೆ ಶರಣಾಗುವಂತೆ ನಿರ್ದೇಶಿಸಿದ್ದು ತಲಾ 1 ಲಕ್ಷ ರೂ. ದಂಡ ಸಹ ವಿಧಿಸಿದ್ದಾರೆ ಎಂದು ಅಪರಾಧಿಗಳ ಪರ ವಕೀಲರಲ್ಲಿ ಒಬ್ಬರಾದ ವಿಕ್ರಮ್ ಪನ್ವಾರ್ ಹೇಳಿದ್ದಾರೆ.
ಜುಲೈ 21 ರಂದು, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 9 ರ ಕ್ರಿಮಿನಲ್ ಪಿತೂರಿ ಪ್ರಕರಣದ ಆರೋಪದಡಿ ಜೇಟ್ಲಿ, ಅವರ ಹಿಂದಿನ ಪಕ್ಷದ ಸಹೋದ್ಯೋಗಿ ಗೋಪಾಲ್ ಪಚೇರ್ವಾಲ್ ಮತ್ತು ನಿವೃತ್ತ ಮೇಜರ್ ಜನರಲ್ ಎಸ್ಪಿ ಮುರ್ಗೈ ಅವರನ್ನು ನ್ಯಾಯಾಲಯ ಶಿಕ್ಷೆಗೊಳಪಡಿಸಿತ್ತು.
ಜೇಟ್ಲಿ ಆರೋಪಿ ಗೋಪಾಲ್ ಪಚೇರ್ವಾಲ್ ಅವರ ಮೂಲಕ 2 ಲಕ್ಷ ರೂ.ಗಳನ್ನು ಪ್ರಾಸಿಕ್ಯೂಷನ್ ಸಾಕ್ಷಿಯಿಂದ ಪಡೆದಿದ್ದಾರೆ. ಅದೇ ರೀತಿ, ಮುರ್ಗೈ ಅವರು ಜನವರಿ 4, 2001 ರಂದು ಸಾಕ್ಷಿಯಿಂದ 20,000 ರೂ. ಮೊತ್ತವನ್ನು ಪಡೆದರು, 2012 ರಲ್ಲಿ, ನ್ಯಾಯಾಲಯವು ಜೇಟ್ಲಿ, ಗೋಪಾಲ್ ಪಚೇರ್ವಾಲ್ ಮತ್ತು ಮುರ್ಗೈ ವಿರುದ್ಧಥರ್ಮಲ್ ಇಮೇಜರ್‌ಗಳನ್ನು ಖರೀದಿಸಿದ ಭ್ರಷ್ಟಾಚಾರದ ಆರೋಪಗಳನ್ನು ಮಾಡಿತು. ಜನವರಿ 2001 ರಲ್ಲಿ ನ್ಯೂಸ್ ಪೋರ್ಟಲ್ ಪ್ರಸಾರ ಮಾಡಿದ ಕುಟುಕು ಕಾರ್ಯಾಚರಣೆಯಿಂದ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಸಿಬಿಐ, 2006 ರಲ್ಲಿ ಸಲ್ಲಿಸಿದ ಮೂವರ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ, ವೆಸ್ಟೆಂಡ್ ಇಂಟರ್‌ನ್ಯಾಷನಲ್ ಕಂಪನಿಯ ಪ್ರತಿನಿಧಿಯಾಗಿರುವ ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರಿಂದ ಆರೋಪಿಗಳು ಅಕ್ರಮ ಹಣ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದರು. ಸೈನ್ಯದಿಂದ ಥರ್ಮಲ್ ಇಮೇಜರ್‌ಗಳಿಗೆ ಸರಬರಾಜು ಆದೇಶಗಳನ್ನು ಪಡೆಯಲು ಅಕ್ರಮ ಹಣವನ್ನು ಸ್ವೀಕರಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.