ದಿಲ್ಲಿ :ರಾಜಧಾನಿ ದಿಲ್ಲಿಯಲ್ಲಿ ಒಂದು ವರ್ಷ ಕಾಲ ಪಾನ್ ಮಸಾಲ,ಗುಟ್ಕಾ ಮುಂತಾದ ಜಗಿಯುವ ತಂಬಾಕು ಉತ್ಪನ್ನಗಳು ಸಿಗುವುದಿಲ್ಲ. ಕೊರೊನಾ ವೈರಸ್ ಸೋಂಕು ಹರಡದಂತೆ ಪಾನ್‍ಮಸಾಲ, ಗುಟ್ಕಾ ಸೇವನೆಗೆ ತಾತ್ಕಾಲಿಕ ನಿಷೇಧ ಹೇರಿದ್ದ ದಿಲ್ಲಿ ಸರ್ಕಾರ, ಈಗ ಈ ನಿಷೇಧವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿದೆ.
ಹರ್ಯಾಣ ಸರ್ಕಾರ, ಉತ್ತರಪ್ರದೇಶ ಸರ್ಕಾರ ಕೂಡಾ ಒಂದು ವರ್ಷಗಳ ಕಾಲ ಪಾನ್ ಮಸಾಲ, ಗುಟ್ಕಾ ಸೇವನೆಗೆ ನಿಷೇಧ ಹೇರಿದೆ.
ಸರ್ಕಾರದ ಆದೇಶದಂತೆ ಉತ್ಪಾದನೆ ಹಾಗೂ ಮಾರಾಟ ಮಾತ್ರವಲ್ಲದೆ, ಶೇಖರಿಸಿಟ್ಟುಕೊಳ್ಳಲು ಕೂಡಾ ಅನುಮತಿ ಇಲ್ಲ ಎಂದು ಆಹಾರ ಮತ್ತು ಔಷಧಿ ಪ್ರಾಧಿಕಾರದ ಅಧಿಕಾರಿ ಡಿ.ಎನ್. ಸಿಂಗ್ ಹೇಳಿದ್ದಾರೆ.
2006ರ ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಕಾಯ್ದೆ ಸೆಕ್ಷನ್ 30ರ ಅನ್ವಯ ಪಾನ್ ಮಸಾಲ ಬಳಕೆಗೆ ನಿಷೇಧ ಹೇರಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾನ್ ಮಸಾಲ ಹಾಗೂ ಗುಟ್ಕಾ ಜಗಿದು ಎಲ್ಲೆಂದರಲ್ಲಿ ಉಗುಳುವುದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಈ ತಂಬಾಕು ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ.