ದಾವಣಗೆರೆ: ಮಾಸ್ಕ್ ಸ್ಯಾನಿಟೈಸರ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಣಿಯಲು ಬಾರದವರಿಗೆ ನೆಲ ಡೊಂಕು ಎಂಬಂತೆ ವಿಪಕ್ಷಗಳು ವರ್ತಿಸುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ವಿಪಕ್ಷದವರು ಏನು ಕೆಲಸ ಮಾಡಿದ್ದಾರೆ? ಕೇವಲ ಆರೋಪದಿಂದ ಪ್ರಯೋಜನವಿಲ್ಲ, ಕೋವಿಡ್ ಸಂದರ್ಭದ ಪ್ರತಿ ಪೈಸೆಯ ಖರ್ಚುವೆಚ್ಚದ ಲೆಕ್ಕ ನೀಡುತ್ತೇವೆ. ಯಾವುದೇ ತನಿಖೆಗೂ ಸಿದ್ಧ. ಸುಳ್ಳು ಆರೋಪ ಮಾಡುವುದು ಬೇಡ ಎಂದು ಅವರು ಆರೋಪವನ್ನು ಅಲ್ಲಗಳೆದಿದ್ದಾರೆ.
ಸಿದ್ದರಾಮಯ್ಯ ಅವರು ಆರೋಪ ಮಾಡುವುದು ಬೇಡ ಅದನ್ನು ಸಾಬೀತುಪಡಿಸಲಿ. ಅವರು ಕೇಳುವ ಪ್ರತಿಯೊಂದು ಆರೋಪಕ್ಕೆ ಉತ್ತರವಿದೆ. ದೇಶದಲ್ಲಿ ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಜಗತ್ತಿನಲ್ಲಿ ಭಾರತ ಕೊರೊನಾ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಅವರು ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರು.
ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇದ್ದರೆ ಯಾವುದೇ ತನಿಖೆ ಮಾಡಿಸಲಿ, ಖರ್ಚು ಮಾಡಿದ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ. ಶ್ವೇತಪತ್ರ ಹೊರಡಿಸಲು ಸಿದ್ಧ. ಸಿದ್ದರಾಮಯ್ಯ ಮಾಡಿದ ಆರೋಪ ಸಾಬೀತುಪಡಿಸಲಿ. ಬೇಕಾದರೇ ನಾವು ಶ್ವೇತಪತ್ರ ಹೊರಡಿಸುತ್ತೇವೆ ಎಂದು ಹೇಳಿದರು.
ಆರೋಪ ಬಿಟ್ಟು ಕೊರೊನಾ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರ ಜೊತೆ ಕೈಜೋಡಿಸಲಿ. ಕಾಂಗ್ರೆಸ್ ನವರ ಕೊರೊನಾ ವೇಳೆ ವಾರಿಯರ್ಸ್ ಆಗಿ ಕೆಲಸ ಮಾಡಿಲ್ಲ, ಸಂಘ ಸಂಸ್ಥೆಯವರು ಕೆಲಸ ಮಾಡುತ್ತಿವೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡುತ್ತಿಲ್ಲ ಎಂದು ದಾವಣಗೆರೆಯಲ್ಲಿ ಶ್ರೀರಾಮುಲು ಅವರು ಪ್ರತಿಪಕ್ಷದ ವಿರುದ್ಧ ಆರೋಪ ಮಾಡಿದರು.