ಮೈಸೂರು: ಪ್ರಧಾನಿ ಮೇಲೆ ವಿಪಕ್ಷಗಳು ಮಾಡಿರುವ ಪದ ಪ್ರಯೋಗ ದೇಶದ ಜನರು ಮೆಚ್ಚಲ್ಲ ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಸಾಧನೆ ಏನು, ಮೋದಿ ಸಾಧನೆ ಏನು ಎನ್ನುವುದು ದೇಶಕ್ಕೆ ಗೊತ್ತಿದೆ.ಸೋಲಿನ ಹತಾಶೆಯಲ್ಲಿರುವ ದೊಡ್ಡವರೆಲ್ಲ ಅಪ್ರಬುದ್ಧರಾಗಿ ಮಾತಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಇನ್ನು ದೇವರಾಜ ಅರಸ್ ಅವರನ್ನು ಮೋದಿಯಲ್ಲಿ ಕಾಣುತ್ತಿದ್ದೇನೆ. ಅಹಿಂದ ಪ್ರಧಾನಿಯನ್ನು ಈ ರೀತಿ ಟೀಕೆ ಮಾಡುವುದು ಸರಿಯಲ್ಲ, ರಾಹುಲ್ ಗಾಂಧಿ, ಈ ಪ್ರಧಾನಿಗೂ ಗೌರವ ಕೊಡಲ್ಲ, ಕಾಂಗ್ರೆಸ್ನಲ್ಲಿ ಪ್ರಧಾನಿಯಾದವರಿಗೂ ಗೌರವ ಕೊಟ್ಟಿಲ್ಲ, ನೀವು ಗೌರವ ಕೊಡುವುದನ್ನೆ ಕಲಿತಿಲ್ಲ ಎಂದು ವಿಶ್ವನಾಥ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯ ಪ್ರಧಾನಿಯನ್ನು ಅನ್ಫಟ್ ಅಂತಾರೆ. ಹಾಗಾದ್ರೆ ನೀವು ಸಿಎಂ ಆಗುವುದುಕ್ಕೆ ಫೀಟ್ ಆಗಿದ್ರಾ? ಮೋದಿ ಅವರದು ಗುಜರಾತ್ ಮಾಡೆಲ್ ಇದೆ, ನಿಮ್ಮ ಮಾಡೆಲ್ ಏನಿದೆ? ಅನ್ನಭಾಗ್ಯದ ಕಲ್ಪನೆಯನ್ನು ನಿಮಗೆ ಕೊಟ್ಟಿದ್ದು ನಾನೇ ಅದು ಕೂಡ ನಿಮ್ಮ ಸಾಧನೆಯಲ್ಲ ಎಂದು ಹೆಚ್.ವಿಶ್ವನಾಥ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಪ್ರಧಾನಿ ವಿರುದ್ದ ದಾಖಲೆ ಇದ್ದರೆ ಬಿಡುಗಡೆ ಮಾಡಿ. ಹಿಟ್ ಅಂಡ್ ರನ್ ಮಾಡಬೇಡಿ. ಕೇಂದ್ರ, ರಾಜ್ಯ ಸರಕಾರದ ವಿರುದ್ದ ಆರೋಪ ಇದ್ದರೆ ದಾಖಲೆ ಕೊಡಿ. ಸುಮ್ಮನೆ ಯಾರ ಬಗ್ಗೆಯೂ ಮಾತನಾಡಬೇಡಿ ಎಂದು ಅವರು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆದುಕೊಂಡು ಬಂದವನು ನಾನು. ಜೆಡಿಎಸ್ನಿಂದ ಹೊರಗೆ ಹಾಕಿಸಿಕೊಂಡಾಗ ವಾಪಾಸ್ ಸಿದ್ದರಾಮನಹುಂಡಿಗೆ ಹೋಗಬಾರದು ಅಂತಾ ಕಾಂಗ್ರೆಸ್ಗೆ ತಂದೆ. ಕಾಂಗ್ರೆಸ್ಗೆ ಬಂದ ಸಿದ್ದರಾಮಯ್ಯ ಹಿಂದುಳಿದ ನಾಯಕರನ್ನು ತುಳಿಯುವ ಕೆಲಸ ಮಾಡಿದರು. ತುಳಿಯೋದೆ ಸಿದ್ದರಾಮಯ್ಯನ ಮಾಡೆಲ್ ಎಂದು ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.