ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರುವ ಹಂತ ತಲುಪಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು’ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದರು.
ಮಾಧ್ಯಮ ಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ವಿರೋಧ ಪಕ್ಷಗಳ ಸಲಹೆ ಪಡೆಯಬೇಕು’. ‘ಇಟಲಿಯ ಪರಿಸ್ಥಿತಿ ರಾಜ್ಯದಲ್ಲಿ ಬರುವ ಮುನ್ನ ಸಭೆ ಕರೆಯಬೇಕು. ಈಗಾಗಲೇ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದೆ. ಆ ಸಲಹೆಗಳನ್ನು ಪಾಲಿಸಿ, ಸೋಂಕು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಸೋಂಕು ದೃಢಪಟ್ಟವರಿಗೆ ಸರ್ಕಾರ ರೂ.5 ಲಕ್ಷದ ವಿಮೆ ಮಾಡಿಸಬೇಕು. ಅದರಿಂದ ಪಾಸಿಟಿವ್ ಬಂದ ವ್ಯಕ್ತಿಗೆ ಉಪಯೋಗ ಆಗಲಿದೆ’. ‘ರಾಜ್ಯ ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ, ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ. ಮುಂದೆ ಜನರೇ ಬಾರುಕೋಲು ಹಿಡಿದುಕೊಂಡು ಬರುತ್ತಾರೆ. ಹುಷಾರ್’ ಎಂದೂ ಎಚ್ಚರಿಕೆ ನೀಡಿದರು.
ಟೆಂಡರ್ ನಲ್ಲಿ ಅವ್ಯವಹಾರ
‘ಆರೋಗ್ಯ ಇಲಾಖೆಯ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ. ಆಸ್ಪತ್ರೆಗಳಿಗೆ ಕಳಪೆ ಗುಣಮಟ್ಟದ ಸ್ಯಾನಿಟೈಸರ್ ಪೂರೈಕೆ ಮಾಡಲಾಗಿದೆ. ಹಲವು ಆಸ್ಪತ್ರೆಗಳು ಕಳಪೆ ಎಂದು ಈಗಾಗಲೇ ವಾಪಸ್ ನೀಡಿವೆ. ಭ್ರಷ್ಟರಿಗೆ ಸರಿಯಾದ ಎಚ್ಚರಿಕೆ ಕೊಡಬೇಕು. ಭ್ರಷ್ಟಾಚಾರ ಮುಚ್ಚಿಹಾಕುವ ಪ್ರಯತ್ನ ಬೇಡ’ ಎಂದರು.
‘ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಆಗಿ ಎಂದೂ ಹೇಳುತ್ತಿದ್ದಾರೆ. ನಾವು ಮೊದಲೇ ಸಾಕಷ್ಟು ಸಲಹೆಗಳನ್ನು ನೀಡಿದ್ದೆವು. ಹಾಸ್ಟೆಲ್, ಹೊಟೇಲ್ ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದೆವು. ಆದರೆ, ಇಂದಿಗೂ ಏನೂ ಆಗಿಲ್ಲ.ಇದೇ ಸ್ಥಿತಿ ಮುಂದುವರಿದರೆ ಬೀದಿ ಬೀದಿಗಳಲ್ಲಿ ಜನ ಸಾಯುವುದನ್ನು ನೋಡಬೇಕಾಗಬಹುದು ಎಂಬ ಗಂಭೀರ ಎಚ್ಚರಿಕೆಯನ್ನು ಪಾಟೀಲ್ ಸರಕಾರಕ್ಕೆ ನೀಡಿದ್ದಾರೆ.