ಐದು ತಿಂಗಳು ಸಿಗಲಿದೆ ಉಚಿತ ದವಸ ಧಾನ್ಯ
ಬೆಂಗಳೂರು:ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆಯಡಿ ಮುಂದಿನ 5 ತಿಂಗಳು ಉಚಿತವಾಗಿ ಪಡಿತರ ನೀಡುವುದಾಗಿ ಘೋಷಿಸಿದ ಬೆನ್ನಲ್ಲೆ, ರಾಜ್ಯ ಸರ್ಕಾರವೂ ಗ್ರಾಹಕರಿಗೆ ಅದೇ ಮಾದರಿಯಲ್ಲಿ ಆಹಾರಧಾನ್ಯ ವಿತರಿಸಲು ಮುಂದಾಗಿದೆ.
ಈ ತಿಂಗಳಿನಿಂದಲೇ ಅನ್ವಯವಾಗುವಂತೆ ಮುಂದಿನ ಐದು ತಿಂಗಳು ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ , ಬೇಳೆ , ಗೋಧಿ, ರಾಗಿ ವಿತರಣೆ ಮಾಡಲು ತೀರ್ಮಾನಿಸಿದೆ.
ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ಅಂತ್ಯದವರೆಗೆ 4.31 ಕೋಟಿ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುವುದು. ರಾಜ್ಯದ ಯಾವೊಬ್ಬ ಪ್ರಜೆಯು ಆಹಾರವಿಲ್ಲದೆ ಬಳಲಬಾರದು.
ಇದಕ್ಕಾಗಿ ನಮ್ಮ ಇಲಾಖೆ ಕೇಂದ್ರದ ಮಾದರಿಯಲ್ಲೇ ಪಡಿತರ ಧಾನ್ಯ ವಿತರಣೆ ಮಾಡಲಿದೆ ಎಂದು ಆಹಾರ ಮತ್ತು ನಾಗರಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಪ್ರದೇಶವಾರು ಪಡಿತರ ವಿತರಣೆ: ಪ್ರಸ್ತುತ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ, ಒಂದು ಕೆಜಿ ಬೇಳೆ ವಿತರಣೆ ಮಾಡಲಾಗುತ್ತಿದ್ದು, ಇನ್ನು ಮುಂದೆ ಆಯಾ ಪ್ರದೇಶದ ಜನರು ಸೇವಿಸುವ ಆಹಾರಕ್ಕೆ ತಕ್ಕಂತೆ ಪಡಿತರವನ್ನು ನೀಡಲಿದ್ದೇವೆ.
ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ, 2 ಕೆಜಿ ಬಿಳಿಜೋಳ ಹಾಗೂ ಒಂದು ಕೆಜಿ ಬೇಳೆ ನೀಡಲಿದ್ದೇವೆ. ಈಗಾಗಲೇ ನಮ್ಮ ಬಳಿ 8506 ಮೆಟ್ರಿಕ್ ಟನ್ ಬಿಳಿಜೋಳ ಸಂಗ್ರಹಿಸಿಟ್ಟುಕೊಂಡಿದ್ದೇವೆ. ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು.
ಹಳೇ ಮೈಸೂರು ಭಾಗದ ಸುಮಾರು 15ರಿಂದ 16 ಜಿಲ್ಲೆಗಳ ಪ್ರತಿ ಕುಟುಂಬದ ಒಬ್ಬೊಬ್ಬ ಸದಸ್ಯರಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ, 2 ಕೆಜಿ ಗೋಧಿ ಹಾಗೂ ಒಂದು ಕೆಜಿ ಬೇಳೆ ನೀಡಲಾಗುವುದು. ಸದ್ಯ ನಮ್ಮ ಇಲಾಖೆಯಲ್ಲಿ 11.95 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಸಂಗ್ರಹಣೆ ಮಾಡಿಟ್ಟುಕೊಂಡಿದ್ದೇವೆ.
ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ 15ರಿಂದ 16 ಜಿಲ್ಲೆಗಳಲ್ಲಿ ರಾಗಿ ವಿತರಿಸಲಿದ್ದೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ ದೇಶದ 80 ಕೋಟಿ ಫಲಾನುಭವಿಗಳಿಗೆ 5 ತಿಂಗಳು ಉಚಿತವಾಗಿ ಆಹಾರ ಧಾನ್ಯ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಅದೇ ಮಾದರಿಯಲ್ಲಿ ನಮ್ಮ ಸರ್ಕಾರವೂ ನೀಡಲು ಮುಂದಾಗಿದೆ ಎಂದರು. ಈಗಾಗಲೇ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ತಕ್ಕಂತೆ ಸಂಗ್ರಹಿಸಿಟ್ಟುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.
ಈ ಹಿಂದೆ ಮೂರು ತಿಂಗಳು ನಮ್ಮ ಸರ್ಕಾರದ ವತಿಯಿಂದಲೇ ಉಚಿತವಾಗಿ ಪಡಿತರವನ್ನು ವಿತರಿಸಿದ್ದೇವೆ. ವಲಸೆ ಕಾರ್ಮಿಕರಿಗೂ ತೊಂದರೆಯಾಗದಂತೆ ಕೇವಲ ಆಧಾರ್ ಕಾರ್ಡ್ ತೋರಿಸಿ ಪಡಿತರ ಪಡೆಯುವಂತಹ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ತಿಳಿಸಿದರು. ಮುಂದಿನ 5 ತಿಂಗಳು ಪಡಿತರ ವಿತರಣೆ ಮಾಡಬೇಕಾದ ಸವಾಲು ನಮ್ಮ ಮುಂದಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಆಹಾರಧಾನ್ಯ ಸಂಗ್ರಹಕ್ಕೆ ಸೂಚನೆ ಕೊಡಲಾಗಿದೆ ಎಂದರು.
ಪ್ರತಿಯೊಬ್ಬ ಫಲಾನುಭವಿಗಳಿಗೂ ಗುಣಮಟ್ಟದ ಪಡಿತರ ನೀಡಬೇಕೆಂದು ಸೂಚಿಸಲಾಗಿದೆ. ಯಾವುದೇ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಪಡಿತರ ವಿತರಿಸುವುದು ಕಂಡುಬಂದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದರು.