ಅತಿಥಿ ಉಪನ್ಯಾಸಕರಿಗೆ ಖಾಯಂ ಉಪನ್ಯಾಸಕರಿಂದ ನೆರವು

ಬೆಂಗಳೂರು:  ಕಳೆದ ನಾಲ್ಕು ತಿಂಗಳಿನಿಂದ ವೇತನ ಇಲ್ಲದೆ ಜೀವನ ನಡೆಸಲು ಪರದಾಡುತ್ತಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಖಾಯಂ ಉಪನ್ಯಾಸಕರು ತಮ್ಮ ಒಂದು ದಿನದ ವೇತನ ನೀಡಿ ನೆರವಾಗಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ಸುಮಾರು ಮೂರು ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಜೂನ್‍ನಲ್ಲಿ ಅವರನ್ನು ನೇಮಿಸಿಕೊಂಡು ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮಾರ್ಚ್, ಎಪ್ರಿಲ್ ತಿಂಗಳಿನಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡು ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದರು.

ಈ ಬಾರಿ ಕೊರೊನಾ ಕಾಟದಿಂದ ಮಾರ್ಚ್‍ನಲ್ಲೇ ಲಾಕ್‍ಡೌನ್ ಘೋಷಣೆಯಾಯಿತು. ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡವು. ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಕೆಲಸ ಇಲ್ಲದೆ ಅತಿಥಿ ಉಪನ್ಯಾಸಕರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ.

ಅತಿಥಿ ಉಪನ್ಯಾಸಕರಿಗೆ ಸಾಮಾಜಿಕವಾಗಿ ವಿದ್ಯಾವಂತರು, ಓದಿದವರು, ಉಪನ್ಯಾಸಕರು ಎಂಬ ದೊಡ್ಡಸ್ಥಿಕೆಯನ್ನು ಅಂಟಿಸಲಾಗಿದೆ. ಹಾಗಾಗಿ ಸಂಘ ಸಂಸ್ಥೆಗಳು ನೀಡುವ ಆಹಾರದ ಕಿಟ್‍ಗಳು, ದವಸ ಧಾನ್ಯಗಳಿಗೆ ಸರದಿ ಸಾಲಿನಲ್ಲೂ ನಿಲ್ಲಲ್ಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಒಪ್ಪೊತ್ತಿನ ಊಟಕ್ಕೂ ಪರಡಾಡುತ್ತಾ, ಮನನೊಂದು ರಾಜ್ಯದಲ್ಲಿ ಈವರೆಗೂ ಎಂಟು ಮಂದಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಪ್ರೌಢಶಿಕ್ಷಣ, ಪದವಿ ಪೂರ್ವ, ಪದವಿ ಕಾಲೇಜುಗಳು ಸೇರಿ ಸುಮಾರು ಮೂರು ಲಕ್ಷ ಅತಿಥಿ ಉಪನ್ಯಾಸಕರು. ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ವಿವಿಧ ವರ್ಗಗಳಿಗೆ ಪ್ಯಾಕೇಜ್ ಘೋಷಣೆ ಮಾಡಿದೆ, ಆಹಾರದ ಕಿಟ್‍ಗಳನ್ನು ನೀಡಿದೆ. ಆದರೆ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ಹಲವಾರು ಭಾರಿ ಮನವಿ ಮಾಡಿದರು ಸರ್ಕಾರ ಸ್ಪಂದಿಸಿಲ್ಲ.

ಎಂಟು ಜನ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳಿಂದ ಕನಲಿ ಹೋಗಿರುವ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಖಾಯಂ ಉಪನ್ಯಾಸಕರು ತಮ್ಮ ಒಂದು ದಿನದ ವೇತನ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಎಲ್ಲಾ ಉಪನ್ಯಾಸಕರು ಒಪ್ಪಿದ್ದಾರೆ.

ನಮ್ಮದೆ ಭಾಗವಾಗಿರುವ ಅತಿಥಿ ಉಪನ್ಯಾಸಕರು ನಾಲ್ಕು ತಿಂಗಳಿನಿಂದ ವೇತನ ಇಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ಸ್ಪಂದಿಸುವುದು ನಮ್ಮ ನೈತಿಕ ಜವಾಬ್ದಾರಿ. ಇದರಲ್ಲಿ ಬಲವಂತ ಇಲ್ಲ ಎಂದು ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಹೇಳಿದ್ದಾರೆ.

ಬಹುತೇಕ ಎಲ್ಲಾ ಉಪನ್ಯಾಸಕರು ತಮ್ಮ ಒಂದು ದಿನದ ವೇತನ ನೀಡಲು ಒಪ್ಪಿದ್ದಾರೆ. ಖಾಯಂ ಉಪನ್ಯಾಸಕರು ತಮ್ಮ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಕೊಟ್ಟರೆ ಅವರ ಒಂದು ದಿನ ವೇತನ ಕಡಿತ ಮಾಡಿ ಖಜಾನೆಯ ಮೂಲಕವೇ ಅತಿಥಿ ಉಪನ್ಯಾಸಕರಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.error: Content is protected !!
Scroll to Top