ಮಂಗಳೂರು : ತೊಕ್ಕೊಟ್ಟು ಬಳಿ ಶನಿವಾರ ತಡರಾತ್ರಿ ಸಾರ್ವಜನಿಕವಾಗಿ ತಲವಾರು ಝಳಪಿಸಿ ಜನರನ್ನು ಬೆದರಿಸಿದ ಆರೋಪದಲ್ಲಿ ಇಬ್ಬರನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಾರ್ಗತಲೆ ನಿವಾಸಿ ರೌಡಿಶೀಟರ್ ಮುಹಮ್ಮದ್ ಶಾಕಿರ್ ಹಾಗೂ ಆಟೋ ರಿಕ್ಷಾ ಚಾಲಕ ಮಂಚಿಲ ನಿವಾಸಿ ಅಶ್ಫಾಕ್ ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ 12:00 ರಿಂದ 12:20 ರ ನಡುವೆ ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ಈ ಘಟನೆ ನಡೆದಿದೆ. ಶಾಕಿರ್ ತಲವಾರು ಹಿಡಿದುಕೊಂಡು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಆರೋಪಿ ಅಶ್ಫಾಕ್ ರಿಕ್ಷಾದಲ್ಲಿ ಬಂದಿದ್ದ ಶಾಕಿರ್ ಬಾರ್‌ಗೆ ಬಂದು, ಮಾರಕಾಸ್ತ್ರವನ್ನು ಬೀಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಾರ್ ಅನ್ನು ಬಂದ್ ಮಾಡುವಂತೆ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ.
ಘಟನೆಯ ದೃಶ್ಯಾವಳಿಗಳು ಬಾರ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಲವಾರು ಹಿಡಿದು ವ್ಯಕ್ತಿ ದಾಂಧಲೆ ನಡೆಸುತ್ತಿದ್ದ ವೇಳೆ ಬಾರ್‌ನಲ್ಲಿದ್ದ ಗ್ರಾಹಕರು ಭಯಭೀತರಾಗಿ ಓಡಿಹೋಗಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕಾನೂನಿನ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಾಕಿರ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ತನಿಖೆ ಮುಂದುವರಿದಿದೆ.




























