ಬಾಂಗ್ಲಾದಲ್ಲಿ ನಡೆದಿರುವುದು ವಿದ್ಯಾರ್ಥಿ ಚಳವಳಿಯಲ್ಲ !

ದೆಹಲಿ : ಬಾಂಗ್ಲಾದೇಶದಲ್ಲಿ 2024 ರ ಜುಲೈ-ಆಗಸ್ಟ್ ಅವಧಿಯಲ್ಲಿ ನಡೆದ ಚಳುವಳಿ ಶಾಂತಿಯುತ ವಿದ್ಯಾರ್ಥಿ ಚಳವಳಿಯಾಗಿರಲಿಲ್ಲ. ಬದಲಿಗೆ ಅದು ಆಡಳಿತ ಬದಲಾವಣೆಗೆಂದೇ ನಡೆಸಿದ ಸಂಘಟಿತ ಹಿಂಸಾತ್ಮಕ ರಾಜಕೀಯ ಅಸ್ತ್ರ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿಯ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ ಆಯೋಜಿಸಿದ್ದ ವರ್ಚುವಲ್ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾಂಗ್ಲಾದೇಶವು ಸಾಗುತ್ತಿರುವ ಪ್ರಸ್ತುತ ದಾರಿಯ ಕುರಿತು ತೀವ್ರ ಕಳವಳ ಮತ್ತು ನೋವನ್ನು ತೋಡಿಕೊಂಡಿದ್ದಾರೆ.
ತಮಗೆ ಮರಣದಂಡನೆ ವಿಧಿಸಲಾಗಿದ್ದರೂ ಸಹ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಹಿಂತಿರುಗುವುದಾಗಿ ಶೇಖ್ ಹಸೀನಾ ಈ ಸಂದರ್ಭದಲ್ಲಿ ಘೋಷಿಸಿದರು. ಆಗಸ್ಟ್ 5, 2024 ರಂದು ಭಾರತಕ್ಕೆ ಬಂದ ನಂತರ ಅವರು ಇದೇ ಮೊದಲ ಬಾರಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ನನ್ನ ಪ್ರೀತಿಯ ಬಾಂಗ್ಲಾದೇಶ ಅನುಭವಿಸುತ್ತಿರುವ ಸಂಕಷ್ಟವನ್ನು ನಾನು ನೋಡುತ್ತಿದ್ದೇನೆ. ಇದು ನಾವು ಕಟ್ಟಿದ ಬಾಂಗ್ಲಾದೇಶವಲ್ಲ, ಹಾಗೂ 1971 ರ ವಿಮೋಚನಾ ಸಂಗ್ರಾಮದಲ್ಲಿ 30 ಲಕ್ಷ ಜನರು ತಮ್ಮ ಪ್ರಾಣತ್ಯಾಗ ಮಾಡಿದ್ದು ಈ ರೀತಿಯ ದೇಶಕ್ಕಾಗಿ ಅಲ್ಲ ಎಂದು ಹಸೀನಾ ಭಾವುಕರಾಗಿ ನುಡಿದರು.

ಮೀಸಲಾತಿ ಸುಧಾರಣೆ ಚಳವಳಿಯನ್ನು ತಮ್ಮ ಸರ್ಕಾರವು ಮಾತುಕತೆ, ಕಾನೂನು ಪ್ರಕ್ರಿಯೆ ಮತ್ತು ತಾಳ್ಮೆಯ ಮೂಲಕ ಬಗೆಹರಿಸಲು ಸತತ ಪ್ರಯತ್ನ ನಡೆಸಿತ್ತು. ಆದರೆ ಸಂಘಟಿತ ಗುಂಪುಗಳು ಈ ಚಳವಳಿಯನ್ನು ತಮ್ಮ ರಾಜಕೀಯ ದುರುದ್ದೇಶ ಸಾಧನೆಗೆ ದುರ್ಬಳಕೆ ಮಾಡಿಕೊಂಡವು.

ವಿದ್ಯಾರ್ಥಿಗಳ ಬೇಡಿಕೆಯನ್ನು ನನ್ನ ರಾಜೀನಾಮೆಗೆ ಒತ್ತಾಯಿಸುವ ಏಕಪಕ್ಷೀಯ ಆಗ್ರಹವನ್ನಾಗಿ ಮಾರ್ಪಡಿಸಲಾಯಿತು. ಯೋಜನಾಬದ್ಧವಾಗಿ ಸುಳ್ಳು ಪ್ರಚಾರ ಹರಡಿಸಿ, ಅಮಾಯಕರಾದ ವಿದ್ಯಾರ್ಥಿಗಳನ್ನು ಭಾವನಾತ್ಮಕವಾಗಿ ದುರ್ಬಳಕೆ ಮಾಡಿಕೊಳ್ಳಲಾಯಿತು. ಹಿಂಸಾಚಾರ ಮತ್ತು ಸರ್ಕಾರವನ್ನು ಕೆಡವಲು ವಿದ್ಯಾರ್ಥಿ ಚಳವಳಿಯನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳಲಾಯಿತು. ಜುಲೈ 15, 2024 ರ ನಂತರ ಪ್ರತಿಭಟನೆಯು ವ್ಯಾಪಕ ಕೊಲೆ, ಬೆಂಕಿ ಹಚ್ಚುವಿಕೆ, ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮತ್ತು ಪೋಲಿಸರ ಮೇಲಿನ ದಾಳಿಯಾಗಿ ಭೀಕರ ರೂಪ ಪಡೆಯಿತು ಎಂದಿದ್ದಾರೆ.









































error: Content is protected !!
Scroll to Top