ಕಾರ್ಕಳದಲ್ಲಿ ಬ್ಲಡ್‌ ಬ್ಯಾಂಕ್‌ ಸ್ಥಾಪನೆ ಸನ್ನಿಹಿತ

ಕಾರ್ಕಳ : ರಕ್ತವನ್ನು ದಾನಿಗಳಿಂದ ಪಡೆದು, ಸುರಕ್ಷಿತವಾಗಿ ಸಂಗ್ರಹಿಸಿ, ಪರೀಕ್ಷಿಸಿ ಮತ್ತು ಅಗತ್ಯವಿರುವ ರೋಗಿಗಳಿಗೆ ಒದಗಿಸುವ ಪ್ರಮುಖ ವೈದ್ಯಕೀಯ ಕೇಂದ್ರವೇ ರಕ್ತನಿಧಿ ಕೇಂದ್ರ. ತುರ್ತು ಪರಿಸ್ಥಿತಿ, ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆ ಸಂದರ್ಭ ರಕ್ತ ಅವಶ್ಯ. ಇಲಿಜ್ವರ, ಡೆಂಗ್ಯೂ ಬಾಧಿತರಿಗೂ ರಕ್ತದ ಪ್ಲೇಟ್‌ಲೆಟ್ ಅಗತ್ಯ. ಆದರೆ, ಕಾರ್ಕಳದಲ್ಲಿ ರಕ್ತನಿಧಿ ಕೇಂದ್ರವಿಲ್ಲ.

ಕಾರ್ಕಳಕ್ಕೊಂದು ರಕ್ತನಿಧಿ ಕೇಂದ್ರದ ಅವಶ್ಯಕತೆಯನ್ನು ಮನಗಂಡು ರೋಟರಿ ಕ್ಲಬ್‌ ಕಾರ್ಕಳವು ಬ್ಲಡ್‌ ಬ್ಯಾಂಕ್‌ ಸ್ಥಾಪನೆಗೆ ಮುಂದಾಗಿದೆ. 2023ರಲ್ಲಿ ಜಾನ್‌ ಡಿಸಿಲ್ವಾ ಅವರು ರೋಟರಿ ಕ್ಲಬ್‌ ಅಧ್ಯಕ್ಷರಾಗಿದ್ದ ವೇಳೆ ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದ್ದು ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ಸ್ಥಾಪನೆ ಕುರಿತು ನಿರ್ಧರಿಸಲಾಯಿತು. ತದ ಅನಂತರ ಆರೋಗ್ಯ ಇಲಾಖೆಯ ಅನುಮತಿಗಾಗಿ ಅರ್ಜಿ ಸಲ್ಲಿಸಲಾಯಿತು.

ಅನುಮತಿ ವಿಳಂಬ

ರೋಟರಿ ಕ್ಲಬ್‌ 2023ರಲ್ಲಿ ಬ್ಲಡ್‌ ಬ್ಯಾಂಕ್‌ ಸ್ಥಾಪನೆಗೆ ಮುಂದಡಿಯಿಟ್ಟಿತ್ತಾದರೂ ಸರಕಾರದಿಂದ ಅನುಮತಿ ಪಡೆಯುವಲ್ಲಿ ವಿಳಂಬವಾಯಿತು. ಈ ಹಿನ್ನೆಲೆಯಲ್ಲಿ ಸತತ ಪ್ರಯತ್ನ ನಡೆಯಿತು. ಬ್ಲಡ್‌ ಬ್ಯಾಂಕ್‌ ಸ್ಥಾಪನೆ ಪೂರ್ವ ಹತ್ತಾರು ಕಾರ್ಯವಿಧಾನವಿರುವುದರಿಂದ ತಡವಾಯಿತು. ಇದೀಗ ಅನುಮತಿ ಕಾರ್ಯವಿಧಾನ ಅಂತಿಮ ಹಂತದಲ್ಲಿದೆ ಎಂದು ತಿಳಿದುಬಂದಿದೆ.

80 ಲಕ್ಷ ರೂ. ಯೋಜನೆ
ಇದು ಸರಿಸುಮಾರು 80 ಲಕ್ಷ ರೂ. ವೆಚ್ಚದ ಯೋಜನೆಯಾಗಿದ್ದು, ರೋಟರಿಯ ಹಿರಿಯ ಸದಸ್ಯರಾಗಿರುವ ತುಕಾರಾಮ ನಾಯಕ್‌ ಹಾಗೂ ಸುವರ್ಣ ನಾಯಕ್‌ ದಂಪತಿ 40 ಲಕ್ಷ ರೂ. ಭರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಉಳಿದಂತೆ ರೋಟರಿ ಗ್ಲೋಬಲ್‌ ಗ್ಯ್ಯಾಂಟ್‌ನಿಂದ 40 ಲಕ್ಷ ರೂ. ಅನುದಾನ ದೊರೆಯಲಿದೆ.

ತುಕಾರಾಂ ನಾಯಕ್ ದಂಪತಿ

ಕಾರ್ಕಳ ಹೆಬ್ರಿ ಭಾಗದ ಜನತೆಯ ಅನುಕೂಲಕ್ಕಾಗಿ ರೋಟರಿ ಕ್ಲಬ್‌ ಕಾರ್ಕಳವು ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಬ್ಲಡ್‌ ಬ್ಯಾಂಕ್‌ ತೆರೆಯುವ ಸಂಕಲ್ಪ ಮಾಡಿತ್ತು. ಇದಕ್ಕಾಗಿ ರೋಟರಿ ಸದಸ್ಯರಾಗಿರುವ ತುಕಾರಾಮ ನಾಯಕ್‌ ದಂಪತಿ ದೊಡ್ಡ ಮೊತ್ತ ನೀಡಲು ಮುಂದಾಗಿದ್ದಾರೆ. ಬ್ಲಡ್‌ ಬ್ಯಾಂಕ್‌ ತೆರೆಯುವ ನಿಟ್ಟಿನಲ್ಲಿ 2023ರಲ್ಲಿ ರೋಟರಿ ಕ್ಲಬ್‌ ಅಧ್ಯಕ್ಷರಾಗಿದ್ದ ಜಾನ್‌ ಡಿಸಿಲ್ವಾ, ಆ ಬಳಿಕ ಅಧ್ಯಕ್ಷರಾಗಿದ್ದ ಇಕ್ಬಾಲ್‌ ಅಹಮ್ಮದ್‌, ನವೀನ್‌ಚಂದ್ರ ಶೆಟ್ಟಿ ನಿರಂತರವಾಗಿ ಪ್ರಯತ್ನ ನಡೆಸಿದ್ದರು. ಇದೀಗ ಸರಕಾರದಿಂದ ಅನುಮತಿ ದೊರೆಯುತ್ತಿದ್ದು, ಶೀಘ್ರದಲ್ಲೇ ರಕ್ತನಿಧಿ ಕೇಂದ್ರ ಸ್ಥಾಪನೆಯಾಗಲಿದೆ.

ರಕ್ತದಾನಿಗಳು
ಕಾರ್ಕಳ ಹೆಬ್ರಿ ಪರಿಸರದಲ್ಲಿ ಸಾವಿರಾರು ಮಂದಿ ರಕ್ತದಾನಿಗಳಿದ್ದಾರೆ. ರೋಟರಿ ಸದಸ್ಯರಾದ ಇಕ್ಬಾಲ್‌ ಅಹಮ್ಮದ್, ಶೈಲೇಂದ್ರ‌ ರಾವ್‌, ನಿರಂಜನ್‌ ಜೈನ್‌, ಗಣೇಶ್‌ ಸಾಲಿಯಾನ್‌, ರಾಜೇಂದ್ರ ಪ್ರಸಾದ್‌, ಅವಿನಾಶ್‌ ಶೆಟ್ಟಿ ಸೇರಿದಂತೆ ಅನೇಕರು 50ಕ್ಕಿಂತಲೂ ಅಧಿಕ ಬಾರಿ ರಕ್ತದಾನ ಮಾಡಿರುತ್ತಾರೆ. ಕಾರ್ಕಳದಲ್ಲೇ ರಕ್ತನಿಧಿ ಕೇಂದ್ರ ಸ್ಥಾಪನೆಯಾದಲ್ಲಿ ಅವಶ್ಯಕತೆ ಇರುವವರಿಗೆ ಮಾತ್ರವಲ್ಲದೇ ರಕ್ತದಾನಿಗಳಿಗೂ ಅನುಕೂಲವಾಗಲಿದೆ.

ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 12 ಸಾವಿರ ಯುನಿಟ್‌ ರಕ್ತಸಂಗ್ರಹವಾಗುತ್ತಿದೆ. ಡಿಸೆಂಬರ್‌, ಜನವರಿ, ಎಪ್ರಿಲ್‌, ಮೇ ತಿಂಗಳಲ್ಲಿ ಮತ್ತು ಕಾಲೇಜಿಗೆ ರಜೆ ಸಂದರ್ಭ ರಕ್ತ ಸಂಗ್ರಹದ ಕೊರತೆಯಾಗುತ್ತಿದೆ. ಈ ಸಂದರ್ಭ ಕ್ಯಾಂಪ್‌ ಆಯೋಜಿಸಲಾಗುತ್ತಿದೆ.
ಡಾ. ವೀಣಾ
ಅಜ್ಜರಕಾಡು ರಕ್ತನಿಧಿ ಕೇಂದ್ರ

ರಾಮಚಂದ್ರ ಬರೆಪ್ಪಾಡಿ































error: Content is protected !!
Scroll to Top