ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಿಬ್ಬಂದಿಯಿಂದ ಅಧ್ಯಕ್ಷರ ನಕಲಿ ಸಹಿ ಬಳಸಿ ಚೆಕ್ ನಗದೀಕರಣಕ್ಕೆ ಯತ್ನ

ಕಾರ್ಕಳ : ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರ ನಕಲಿ ಸಹಿ ಬಳಸಿ ಚೆಕ್‌ ನಗದೀಕರಣಕ್ಕೆ ಯತ್ನಿಸಿರುವ ಕುರಿತಾಗಿ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ದುರ್ಬಳಕೆ
ಎಣ್ಣೆಹೊಳೆ ಹಂಚಿಕಟ್ಟೆ ನಿವಾಸಿ ಅಕ್ಷಯ ದೇವಾಡಿಗ 2022ರ ಡಿಸೆಂಬರ್‌ನಿಂದ 2026 ಮೇ 7ರವರೆಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಾಟಾ ಎಂಟ್ರಿ ಆಪರೇಟರ್‌ ಆಗಿ ಕಾರ್ಯ ನಿರ್ವಹಿಸಿಕೊಂಡಿದ್ದ. ಇಲಾಖಾ ಲೆಕ್ಕ ಪರಿಶೋಧನೆಯ ಸಂದರ್ಭ ಅಕ್ಷಯ ದೇವಾಡಿಗ ಕರ್ತವ್ಯದಲ್ಲಿ ಲೋಪ ಮತ್ತು ಅಕ್ರಮ ಎಸಗಿರುವ ಕುರಿತು ಗಮನಕ್ಕೆ ಬಂದ ಹಿನ್ನೆಲೆ ಈ ಬಗ್ಗೆ ವಿವರಣೆಯನ್ನು ಕೇಳಿದಾಗ ಆತ ಯಾವುದೇ ಮಾಹಿತಿ ನೀಡದೆ ಮೇ 5ರಂದು ರಾಜಿನಾಮೆ ಪತ್ರ ನೀಡಿ ಕೆಲಸ ಬಿಟ್ಟಿದ್ದ.

ಚೆಕ್‌ ನಗದೀಕರಣಕ್ಕೆ ಯತ್ನ
ಆರೋಪಿಯು ಜೂ. 24ರಂದು ದೇವಸ್ಥಾನದ ಖಾತೆ ಇರುವ ಇಂಡಿಯನ್‌ ಓವರ್‌ ಸೀಸ್‌ ಬ್ಯಾಂಕ್‌ಗೆ ತೆರಳಿ ದೇವಸ್ಥಾನದ 2 ಅಕೌಂಟ್‌ ನಂಬರಿನ 6 ಚೆಕ್‌ ಲೀಪ್‌ಗಳನ್ನು ನಗದೀಕರಣಕ್ಕಾಗಿ ನೀಡಿದ್ದಾನೆ. ಈ ವೇಳೆ ಅನುಮಾನಗೊಂಡ ಬ್ಯಾಂಕ್‌ ಮ್ಯಾನೇಜರ್‌ ಮತ್ತು ಸಿಬ್ಬಂದಿ ಆತನಲ್ಲಿ ವಿಚಾರಿಸಿದಾಗ ಸರಿಯಾದ ವಿವರಣೆ ನೀಡದೆ ಇದ್ದರಿಂದ ನಗದೀಕರಣ ಮಾಡಿರುವುದಿಲ್ಲ. ಆರೋಪಿ ಅಕ್ಷಯ್‌ ದೇವಾಡಿಗ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಭಾಕರ ಬಂಗೇರ ಅವರ ಸಹಿಯನ್ನು ನಕಲಿ ಮಾಡಿ ಮೋಸ ಮಾಡಲು ಪ್ರಯತ್ನಿಸಿರುವುದಾಗಿ ಪ್ರಭಾಕರ ಬಂಗೇರ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.































error: Content is protected !!
Scroll to Top