ಕಾರ್ಕಳ : ಆಧಾರ್ ಕಾರ್ಡ್ ಪೌರತ್ವ ಆಧಾರವಲ್ಲ ಅದು ಕೇವಲ ಮೊಬೈಲ್‌ಗೆ ಸಿಮ್ ಕಾರ್ಡ್ ಖರೀದಿಸಲು ಇರುವ ಆಧಾರ ಅಷ್ಟೆ. ಪಾಸ್ ಪೋರ್ಟ್ ವಿದೇಶ ಸಂಚಾರಕ್ಕೆ ಉಪಯೋಗವಾಗುವ ಸಾಧನವಷ್ಟೇ ಹೊರತು ಅದೂ ಕೂಡ ಪೌರತ್ವ ಆಧಾರವಲ್ಲ. ರೇಶನ್ ಕಾರ್ಡ್ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಪಡೆಯಲಷ್ಟೇ ಹೊರತು ಅದು ಪೌರತ್ವ ಆಧಾರವಲ್ಲ. ವೋಟರ್ ಐಡಿ ಮತ ಹಾಕಲು ಮಾತ್ರವೇ ಹೊರತು ಅದು ಪೌರತ್ವ ಆಧಾರವಲ್ಲ. ಜನನ ಸರ್ಟಿಫಿಕೇಟ್ ಶಾಲೆಗೆ ಸೇರಿಸಲು ಉಪಯುಕ್ತವೇ ಹೊರತು ದೇಶದ ಪೌರತ್ವ ಆಧಾರವಲ್ಲ. ಹಾಗಾದರೆ ಪೌರತ್ವ ಆಧಾರ ಯಾವುದು ? ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.
ಒಬ್ಬ ಭಾರತೀಯ ಪ್ರಜೆಯು ಭಾರತದಲ್ಲಿ ಜನಿಸಿದ ತಕ್ಷಣ ಆತ ಭಾರತದ ಪೌರನಾಗುವುದಿಲ್ಲ. ಭಾರತದಲ್ಲಿ ಆಧಾರ್ ಕಾರ್ಡ್, ರೇಶನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಜನನ ಸರ್ಟಿಫಿಕೇಟ್ ಪಡೆದ ತಕ್ಷಣ ಒಬ್ಬ ಭಾರತೀಯ ಪ್ರಜೆ ಪೌರತ್ವ ಪಡೆದಂತಾಗುವುದಿಲ್ಲ. ಹಾಗಾದರೆ ಭಾರತೀಯ ಪೌರತ್ವ ಪಡೆಯಲು ಏನು ಮಾಡಬೇಕು ಎಂದು ಕೇಂದ್ರ ಸರಕಾರ ಈ ವರೆಗೆ ಹೇಳಲಿಲ್ಲ. ಇಂತಹ ಒಂದು ಮೂರ್ಖ ಸರಕಾರವನ್ನು ಪಡೆದ ಭಾರತೀಯರು ಧನ್ಯರಾದೆವು ಎಂದು ಶುಭದರಾವ್ ಪ್ರಕಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.











