ಅಣ್ಣಾಮಲೈ – ಹಗ್ಗದ ಮೇಲಿನ ನಡಿಗೆ

ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ಇದೀಗ ಉಸಿರುಗಟ್ಟುವ ವಾತಾವರಣದಿಂದ ಹೊರಬರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಕಳೆದ ಆರು ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ತಮಿಳುನಾಡು ರಾಜ್ಯದ ಅಧ್ಯಕ್ಷರಾಗಿ ಪಕ್ಷವನ್ನು ತಳಮಟ್ಟದಲ್ಲಿ ಬೆಳೆಸಲು ಏನೆಲ್ಲ ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದ ಸಿಂಗಮ್ ಇದೀಗ ತನ್ನ ಮಾತಿಗೆ ಬೆಲೆ ಇಲ್ಲ ಮತ್ತು ತನ್ನ ಪಕ್ಷಕ್ಕೆ ತಮಿಳು ರಾಜ್ಯದಲ್ಲಿ ಭವಿಷ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದ ಹಾಗಿದೆ. ಆ ಕಾರಣಕ್ಕೆ ಒಂದೆರಡು ದಿನಗಳಲ್ಲಿ ಅವರು ಪಕ್ಷದಿಂದ ಹೊರಬಂದು ಹೊಸ ರಾಜಕೀಯ ಪಕ್ಷ ಕಟ್ಟುವ ಯೋಜನೆಗೆ ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮೋದಿಯವರ ಪ್ರಭಾವದಿಂದ ಬಿಜೆಪಿಗೆ ಪ್ರವೇಶ
ಅಣ್ಣಾಮಲೈ ಅವರು ಲಕ್ನೋ ಐಐಎಂ ಪದವಿ ಪೂರೈಸಿ ಐಪಿಎಸ್ ಆಗಿ ಕಾರ್ಕಳ ಉಪವಿಭಾಗದ ಎಎಸ್‌ಪಿಯಾಗಿ ಅಧಿಕಾರ ವಹಿಸಿದ್ದರು. ಈ ವೇಳೆ ಅಣ್ಣಾಮಲೈ ಭಾರೀ ಜನಪ್ರಿಯತೆ ಗಳಿಸಿದ್ದರು. ಮುಂದೆ ಉಡುಪಿ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಜನಸಂಪರ್ಕ ಮತ್ತು ಜನಾನುರಾಗಿ ಕೆಲಸಗಳಿಂದ ಎಲ್ಲರ ಮನಗೆದ್ದರು. 2020ರಲ್ಲಿ ಪ್ರಧಾನಿ ಮೋದಿ ಅವರ ಪ್ರಭಾವದಿಂದ ಆಕರ್ಷಿತರಾಗಿ ಐಪಿಎಸ್ ಹುದ್ದೆ ತೊರೆದು ಬಿಜೆಪಿಗೆ ಸೇರಿದ್ದರು. ಅಣ್ಣಾಮಲೈ ಅವರಿಗೆ ಪಕ್ಷವು ತಮಿಳುನಾಡು ರಾಜ್ಯದ ಜವಾಬ್ದಾರಿ ಕೊಟ್ಟಿತ್ತು. ಅನಂತರ ಅವರು ತ್ರಿಕರಣಪೂರ್ವಕವಾಗಿ ಪಕ್ಷದ ಕೆಲಸ ಮಾಡಿದ್ದರು. ಎಲ್ಲ ಕಡೆಗಳಲ್ಲಿಯೂ ರ‍್ಯಾಲಿ, ವಾಕಥಾನ್, ರಾಜಕೀಯ ಸಭೆ ನಡೆದು ಅಣ್ಣಾಮಲೈ ತಮಿಳುನಾಡಿನ ಸ್ಟಾರ್ ಕಾಂಪೇನರ್ ಆದರು. ಮೋದಿಯವರ ಆಪ್ತರಾದರು. ತಮಿಳುನಾಡಿನಲ್ಲಿ ಬಿಜೆಪಿ ಸದ್ಯದಲ್ಲಿಯೇ ಅಧಿಕಾರಕ್ಕೆ ಬರಲಿದೆ, ಅಣ್ಣಾಮಲೈ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಾತಾವರಣ ಅಲ್ಲಿ ಮೂಡಿತ್ತು.

ಇದನ್ನೂ ಓದಿ : https://newskarkala.com/2020/08/01/exclusive-interview-with-annamalai/

ಬಂದೇ ಬಿಟ್ಟಿತು 2026ರ ಚುನಾವಣೆ
ಈ ಚುನಾವಣೆಯಲ್ಲಿ ಡಿಎಂಕೆ ಪಕ್ಷವು ಅಧಿಕಾರ ಕಳೆದುಕೊಳ್ಳುತ್ತದೆ ಎಂಬ ಅಭಿಪ್ರಾಯಗಳು ಇದ್ದವು. ಇನ್ನೊಂದೆಡೆ ಸಿನೆಮಾ ಸ್ಟಾರ್ ವಿಜಯ್ ಹೊಸ ರಾಜಕೀಯ ಪಕ್ಷವನ್ನು ಕಟ್ಟಿ ತಮಿಳು ತಂಬಿಗಳ ಮನೆಮಾತಾಗಿದ್ದರು. ಆಗ ಅಣ್ಣಾಮಲೈ ಅವರು ಬಿಜೆಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಲಾಭ ಪಡೆಯಬಹುದು ಎಂದು ಗಟ್ಟಿಯಾಗಿ ನಂಬಿದ್ದರು. ಅದನ್ನವರು ಹೈಕಮಾಂಡ್ ಗಮನಕ್ಕೆ ತಂದಿದ್ದರು ಕೂಡ. ಆದರೆ, ಪಕ್ಷದ ವರಿಷ್ಠರು ತಮ್ಮ ಹಳೆಯ ಒಡನಾಡಿಗಳಾದ ಎಐಡಿಎಂಕೆ ಜೊತೆಯಾಗಿ ಚುನಾವಣೆಗೆ ಹೋಗೋಣ ಎಂಬ ತೀರ್ಮಾನಕ್ಕೆ ಬಂದಿದ್ದರು. ಜಯಲಲಿತಾ ಕಾಲದಲ್ಲಿ ಭ್ರಷ್ಟಾಚಾರದ ಕಳಂಕ ಹೊತ್ತಿದ್ದ ಪಕ್ಷವದು. ಅಣ್ಣಾಮಲೈ ಆ ಒಡನಾಟವನ್ನು ಒಪ್ಪಲಿಲ್ಲ. ಪರಿಣಾಮವಾಗಿ ಬಿಜೆಪಿ ವರಿಷ್ಠರು ಅಣ್ಣಾಮಲೈ ಅವರ ರಾಜೀನಾಮೆ ಪಡೆದುಕೊಂಡರು. ಅಣ್ಣಾಮಲೈ ಒಂದು ಮಾತೂ ಹೇಳದೆ ತಟಸ್ಥವಾಗಿ ನಿಂತರು. ಚುನಾವಣಾ ಪ್ರಚಾರಕ್ಕೆ ಬರಲಿಲ್ಲ. ಅದರಿಂದ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿತು. ಪಕ್ಷಕ್ಕೆ ದೊರೆತದ್ದು ಒಂದೇ ಸೀಟು! ಇದೀಗ ಅಣ್ಣಾಮಲೈ ಪಕ್ಷದ ನಿಲುವುಗಳಿಂದ ಸಿಟ್ಟಾಗಿದ್ದಾರೆ. ಕೇಂದ್ರ ಸರಕಾರ ತ್ರಿಭಾಷಾ ಸೂತ್ರವನ್ನು ಪ್ರಕಟಿಸಿದಾಗ ಅಣ್ಣಾಮಲೈ ಅದನ್ನು ಬಹಿರಂಗವಾಗಿ ಪ್ರತಿಭಟಿಸಿ ಹೇಳಿಕೆ ನೀಡಿದರು. ಪಕ್ಷದಲ್ಲಿ ತನಗೆ ಭವಿಷ್ಯವಿಲ್ಲ ಎಂದು ಅವರು ಮನಗಂಡ ಹಾಗಿದೆ. ಪಕ್ಷವು ತನಗೆ ಕೊಡುಗೆ ನೀಡಿದ ರಾಜ್ಯಸಭಾ ಸ್ಥಾನವನ್ನು ಅವರು ನಿರಾಕರಿಸಿದ್ದಾರೆ.

ಮುಂದೆ
ಜೂನ್ 4 ಅಣ್ಣಾಮಲೈ ಹುಟ್ಟಿದ ಹಬ್ಬ. ಆ ದಿನ ಅವರು ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸುವ ಇಚ್ಛೆ ಹೊಂದಿದ್ದಾರೆ. ಸಾರ್ವಜನಿಕ ಅಭಿಯಾನದ ಮೂಲಕ ಹೊಸ ಪಕ್ಷ ಕಟ್ಟುವ ಇರಾದೆ ಇದ್ದಂತಿದೆ. ಅವರೇ ಸ್ಥಾಪಿಸಿರುವ ‘ ವಿ ದ ಲೀಡರ್ಸ್ ‘ ಎಂಬ ಸ್ವಯಂಸೇವಾ ಸಂಸ್ಥೆಯ ಮೂಲಕ ತಮಿಳುನಾಡಿನಲ್ಲಿ ಒಂದು ಬೃಹತ್ ಆಂದೋಲನವನ್ನು ಹುಟ್ಟುಹಾಕುವ ಕನಸು ಅವರಿಗೆ ಇದೆ. ಮುಂದೆ ಬಿಜೆಪಿ ಅವರನ್ನು ಹೇಗೆ ನಡೆಸಿಕೊಳ್ಳಲಿದೆ ? ಅಣ್ಣಾಮಲೈ ಹೊಸ ಪಕ್ಷ ಸ್ಥಾಪನೆ ಮಾಡಿ ಯಶಸ್ವೀ ಆಗಬಹುದೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕಾಲವೇ ನೀಡಲಿದೆ.





























































































error: Content is protected !!
Scroll to Top