ಹಿರಿಯ ನಾಗರಿಕರ ಆಸ್ತಿ ಮತ್ತು ಜೀವದ ರಕ್ಷಣೆ

ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಶ್ರೇಯೋಭಿವೃದ್ಧಿ ಅಧಿನಿಯಮ, 2007 ರಿಂದ ನಮ್ಮ ದೇಶದಲ್ಲಿ ಜಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಹಿರಿಯ ನಾಗರಿಕರ ಜೀವಕ್ಕೆ ಮತ್ತು ಸ್ವತ್ತಿಗೆ ರಕ್ಷಣೆ ಒದಗಿಸುವುದಕ್ಕಾಗಿ ಸರ್ಕಾರವು ಒಂದು ಸಮಗ್ರ ಕ್ರಿಯಾ ಯೋಜನೆಯನ್ನು ನಿರ್ದಿಷ್ಟ ಪಡಿಸಿ ಜಾರಿಗೊಳಿಸಿರುತ್ತದೆ.

ಈ ಪ್ರಕಾರ ತನ್ನ ಸ್ವಂತ ಗಳಿಕೆಯಿಂದ ಅಥವಾ ತನ್ನ ಒಡೆತನದ ಆಸ್ತಿಯಿಂದ ತನ್ನ ಪಾಲನೆ-ಪೋಷಣೆ ಮಾಡಿಕೊಳ್ಳಲು ಅಸಮರ್ಥರಾಗಿರುವ ಮತ್ತು ತಮ್ಮ ಮಕ್ಕಳಿಂದ ಅಥವಾ ಸಂಬಂಧಿಕರಿಂದ ನಿರ್ಲಕ್ಷಕ್ಕೊಳಗಾಗಿರುವ ತಂದೆ ತಾಯಿಯರು ಅಥವಾ ಹಿರಿಯ ನಾಗರಿಕರು ತಮ್ಮ ಪಾಲನೆ-ಪೋಷಣೆಗಾಗಿ ತಮ್ಮ ಮಕ್ಕಳಿಂದ ಅಥವಾ ಸಂಬಂಧಿಕರಿಂದ ಮಾಸಿಕ ಭತ್ಯೆಯನ್ನು ಕೋರಿ ಸೂಕ್ತ ಆದೇಶಕ್ಕಾಗಿ ಅರ್ಜಿ ಸಲ್ಲಿಬಹುದಾಗಿದೆ. ಈ ಉದ್ದೇಶಕ್ಕಾಗಿ ಸರ್ಕಾರವು ಪಾಲನೆ-ಪೋಷಣೆ ನ್ಯಾಯಾಧಿಕರಣವನ್ನು ರಚಿಸಿದ್ದು ಆಯಾ ಪ್ರದೇಶದ ಉಪ-ವಿಭಾಗಾಧಿಕಾರಿಗಳು ನ್ಯಾಯಾಧಿಕರಣದ ಅಧ್ಯಕ್ಷರಾಗಿರುತ್ತಾರೆ ಮತ್ತು ಸರ್ಕಾರದಿಂದ ನೇಮಿಸಲ್ಪಟ್ಟ ವಿಶೇಷ ಜ್ಞಾನ ಹೊಂದಿರುವ ವ್ಯಕ್ತಿಗಳು ನ್ಯಾಯಾಧಿಕರಣದ ಸದಸ್ಯರಾಗಿರುತ್ತಾರೆ.

ಸಮಾಜದ ಪ್ರತಿಯೊಬ್ಬ ವ್ಯಕ್ತಿ ತನ್ನ ತಂದೆ ತಾಯಿ ಮತ್ತು ಹಿರಿಯ ನಾಗರಿಕರನ್ನು ಗೌರವದಿಂದ ಕಂಡು ಅವರಿಗೆ ಯಾವುದೇ ರೀತಿಯಲ್ಲಿ ಮಾನಸಿಕವಾಗಿ ಅಥವಾ ದೈಹಿಕವಾಗಿ ಹಿಂಸೆ ಅಥವಾ ಕಿರುಕುಳವನ್ನು ನೀಡದೆ ಅವರು ತಮ್ಮ ಜೀವಿತಾವಧಿಯ ಅಂತಿಮ ಹಂತದ ಜೀವನವನ್ನು ನೆಮ್ಮದಿಯಿಂದ ಸಾಗಿಸುವಂತೆ ನೋಡಿಕೊಳ್ಳುವುದು ಆತನ ಆದ್ಯ ಕರ್ತವ್ಯವಾಗಿರುತ್ತದೆ. ತಮ್ಮ ಮಕ್ಕಳಿಂದ, ಸಂಬಂಧಿಕರಿಂದ ಅಥವಾ ಇತರರಿಂದ ಬಾಧೆಗೀಡಾದ ನೊಂದ ತಂದೆ ತಾಯಿ ಮತ್ತು ಹಿರಿಯ ನಾಗರಿಕರು ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಲಿಖಿತವಾದ ದೂರನ್ನು ನೇರವಾಗಿ ಅಥವಾ ಯಾವುದೇ ನೊಂದಾಯಿತ ಸಂಘ ಸಂಸ್ಥೆಗಳ ಮೂಲಕ ನ್ಯಾಯಾಧಿಕರಣಕ್ಕೆ ಸಲ್ಲಿಸಿದಾಗ ನ್ಯಾಯಾಧಿಕರಣವು ದೂರಿಗೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಸಮನ್ಸ್ ನೀಡಿ ದೂರನ್ನು ತನಿಖೆ ಮಾಡಬೇಕಾಗುತ್ತದೆ. ತನಿಖೆಯ ಸಂದರ್ಭದಲ್ಲಿ ದೂರಿನಲ್ಲಿ ಹೆಸರಿಸಿರುವ ವ್ಯಕ್ತಿಯ ವಿರುದ್ಧದ ಆಪಾದನೆಗಳು ರುಜುವಾತಾದಲ್ಲಿ ಮತ್ತು ದೂರು ನೀಡಿದ ವ್ಯಕ್ತಿಗೆ ಆತನ ಪಾಲನೆ-ಪೋಷಣೆ ಬಗ್ಗೆ ಮಾಸಿಕ ಭತ್ಯೆ ಕುರಿತು ಸೂಕ್ತ ದರದ ಆರ್ಥಿಕ ಪರಿಹಾರದ ಅಗತ್ಯವಿದೆ ಎಂದು ನ್ಯಾಯಾಧಿಕರಣಕ್ಕೆ ಮನದಟ್ಟಾದಲ್ಲಿ ನ್ಯಾಯಾಧಿಕರಣವು ಸಂಬಂಧಪಟ್ಟ ಎದ್ರಿದಾರರು ಅಂದರೆ ಮಕ್ಕಳು ಅಥವಾ ಇತರರ ವಿರುದ್ದ ಸೂಕ್ತ ಆದೇಶವನ್ನು ಹೊರಡಿಸಬಹುದಾಗಿದೆ ಮತ್ತು ಈ ರೀತಿಯಾಗಿ ಆದೇಶಿಸಿರುವ ಮೊತ್ತವನ್ನು ಠೇವಣಿ ಇಡುವಂತೆ ಸಹಾ ಆದೇಶ ಮಾಡಬಹುದಾಗಿದೆ. ಆದೇಶವನ್ನು ಪರಿಪಾಲಿಸಬೇಕಾಗಿರುವ ಯಾವುದೇ ಮಕ್ಕಳು ಅಥವಾ ಸಂಬಂಧಿಕರು ಆದೇಶದಲ್ಲಿ ತಿಳಿಸಿರುವ ಮೊತ್ತವನ್ನು ಅವರ ತಂದೆ ತಾಯಿಯರಿಗೆ ಅಥವಾ ಸಂಬಂಧಪಟ್ಟ ಹಿರಿಯ ನಾಗರಿಕರಿಗೆ ನೀಡಲು ವಿಫಲರಾದಲ್ಲಿ ಅಂತಹವರನ್ನು ನ್ಯಾಯಾಧಿಕರಣವು ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಈ ರೀತಿಯಾಗಿ ನೀಡುವ ನ್ಯಾಯಾಧಿಕರಣದ ಆದೇಶದ ವಿರುದ್ದ ಯಾವುದೇ ತಡೆಯಾಜ್ಞೆಯನ್ನು ನೀಡುವ ಅಧಿಕಾರವನ್ನು ಸಿವಿಲ್ ನ್ಯಾಯಾಲಯವು ಹೊಂದಿರುವುದಿಲ್ಲ, ಮಾತ್ರವಲ್ಲದೆ ಈ ಮೇಲ್ಕಾಣಿಸಿದ ಕಾನೂನಿಗೆ ಸಂಬಂಧಪಟ್ಟ ಯಾವುದೇ ವಿಚಾರದ ಕುರಿತು ತನಿಖೆ ಮಾಡುವ ಅಧಿಕಾರವನ್ನು ಸಹ ಸಿವಿಲ್ ನ್ಯಾಯಾಲಯವು ಹೊಂದಿರುವುದಿಲ್ಲ. ತಮ್ಮ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟ, ಮನೆಯಿಂದ ಹೊರಗೆ ಹಾಕಲ್ಪಟ್ಟ, ಪರಿತ್ಯಜಿಸಲ್ಪಟ್ಟ ಅಥವಾ ಮೋಸದಿಂದ ಅಥವಾ ಯಾವುದೇ ಬಲಾತ್ಕಾರ ಅಥವಾ ಒತ್ತಾಯಪೂರ್ವಕವಾಗಿ ತಮ್ಮ ಇಚ್ಛೆಗೆ ವಿರುದ್ಧವಾಗಿ ತಮ್ಮ ಆಸ್ತಿಯನ್ನು ಕಳಕೊಂಡ ತಂದೆ ತಾಯಿಯರು ಮತ್ತು ಹಿರಿಯ ನಾಗರಿಕರು ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಸಂಬಂಧಪಟ್ಟ ನ್ಯಾಯಾಧಿಕರಣಕ್ಕೆ ದೂರನ್ನು ಸಲ್ಲಿಸಿ ಸಂದರ್ಭಕ್ಕೆ ಅನುಗುಣವಾಗಿ ನ್ಯಾಯೋಚಿತವಾದ ಸೂಕ್ತ ಆದೇಶವನ್ನು ಪಡೆಯಬಹುದಾಗಿದೆ.















































































error: Content is protected !!
Scroll to Top