ಕಾರ್ಕಳ ನಗರದ ರಸ್ತೆಯಲ್ಲಿ ಹೊಂಡ

ಕಾರ್ಕಳ : ಪುರಸಭಾ ವ್ಯಾಪ್ತಿಯ ಅನಂತಶಯನ ದೇವಸ್ಥಾನದ ಸಮೀಪ ಕಾರ್ಕಳದಿಂದ ಮಂಗಳೂರು ಸಾಗುವ ರಸ್ತೆಯ ಬದಿಯಲ್ಲಿ ಹೊಂಡವಿದ್ದು ವಾಹನ ಸವಾರರಿಗೆ, ಪಾದಾಚಾರಿಗಳಿಗೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಈ ಬಗ್ಗೆ ಪುರಸಭೆ ಆಡಳಿತ ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶಗೊಂಡಿರುವ ಪುರಸಭಾ ಮಾಜಿ ಸದಸ್ಯ ಪ್ರಕಾಶ್‌ ರಾವ್‌ ಅವರು ಮೇ 29ರಂದು ಹೊಂಡದಿಂದ ಮೀನು ಹಿಡಿಯುವ ರೀತಿಯಲ್ಲಿ ಪುರಸಭೆಯನ್ನು ಅಣಕಿಸಿದ್ದಾರೆ.

ಕೇಬಲ್‌ ನೆಟ್‌ವೆರ್ಕ್‌ ಚೆಂಬರ್‌ ಇದಾಗಿದ್ದು ಕಳಪೆ ಕಾಮಗಾರಿಯಿಂದಾಗಿ ಕಳೆದ 15 ದಿನಗಳ ಹಿಂದೆ ಚೇಂಬರ್‌ನ ಮೇಲ್ಭಾಗ ಕುಸಿದು ಹೊಂಡ ನಿರ್ಮಾಣವಾಗಿದೆ. ಈ ಬಗ್ಗೆ ಹತ್ತು ದಿನಗಳ ಹಿಂದೆ ಪ್ರಕಾಶ್‌ ರಾವ್‌ ಅವರು ಪುರಸಭೆಯ ಗಮನಕ್ಕೆ ತಂದಿದ್ದು ಅಲ್ಲದೆ, ಹೊಂಡದ ಸಮೀಪ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆಯ ಸೂಚನಾ ಫಲಕ ಹಾಕಿದ್ದರು.

ಈ ರಸ್ತೆಯಲ್ಲಿ ದಿನನಿತ್ಯ ವಾಹನ ಸವಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಓಡಾಡುತ್ತಾರೆ. ಒಂದು ವೇಳೆ ಹೊಂಡಕ್ಕೆ ವಾಹನದ ಚಕ್ರಗಳು ಸಿಲುಕಿದ್ದಲ್ಲಿ ಅಥವಾ ಪಾದಾಚಾರಿಗಳು ಬಿದ್ದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಅದಲ್ಲದೆ ಈ ಹೊಂಡದಲ್ಲಿ ನೀರು ನಿಂತಿದ್ದು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಆದರೂ ಈ ಬಗ್ಗೆ ಪುರಸಭೆ ಸ್ಪಂದಿಸದಿರುವ ಕುರಿತು ಆಕ್ರೋಶಗೊಂಡಿರುವ ಪ್ರಕಾಶ್‌ ರಾವ್‌ ಇಂದು ಹೊಂಡದಿಂದ ಮೀನು ತೆಗೆಯುವಂತೆ ಪುರಸಭೆಯ ನಿರ್ಲಕ್ಷ್ಯವನ್ನು ಅಣಕಿಸಿ ಪ್ರತಿಭಟನೆ ಮಾಡಿದ್ದಾರೆ. ಈ ಸಂದರ್ಭ ಸ್ಥಳೀಯ ರಿಕ್ಷಾ ಚಾಲಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಪ್ರತಿಭಟನೆಗೆ ಬೆಂಬಲ ನೀಡಿದರು.

















































error: Content is protected !!
Scroll to Top