ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕಾರದಿಂದ ಕೆಳಗೆ ಇಳಿದಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ತೀವ್ರ ಕುತೂಹಲ ಮತ್ತು ಹೈಡ್ರಾಮಾಗೆ ಕೊನೆಗೂ ಭಾವುಕ ತೆರೆ ಬಿದ್ದಿದೆ.

ರಾಜೀನಾಮೆ ಸಲ್ಲಿಕೆಗೂ ಮುನ್ನ ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರ ಕೊನೆಯ ‘ಬ್ರೇಕ್‌ಫಾಸ್ಟ್‌ ಮೀಟಿಂಗ್’ ನಡೆದಿದ್ದು, ಹೈಕಮಾಂಡ್​​ ಸೂಚನೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಬಗ್ಗೆ ಸಚಿವರಿಗೆ ಖುದ್ದಾಗಿ ಸಿದ್ದರಾಮಯ್ಯ ತಿಳಿಸಿದ್ದರು. ಈ ವೇಳೆ ಭಾವುಕರಾದ ಅವರು ಕಣ್ಣೀರು ಹಾಕಿದ ಪ್ರಸಂಗವೂ ನಡೆದಿತ್ತು. ನಾನು ಮಾಡಿರುವ ಕೆಲಸಗಳ ಬಗ್ಗೆ ನನಗೆ ಸಮಾಧಾನ ಇದೆ. ಎಲ್ಲಾ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮುಂದೆ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗಿ. ಜನರಿಗೆ ಒಳ್ಳೆಯ ಯೋಜನೆಗಳನ್ನು ನೀಡಿ ಎಂದು ಸಿದ್ದರಾಮಯ್ಯ ಈ ವೇಳೆ ಸಲಹೆ ಕೂಡ ನೀಡಿದ್ದರು.
ಸಭೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಮಂತ್ರಿಗಳು ಮತ್ತು ಆಪ್ತ ನಾಯಕರು ಸಿದ್ದರಾಮಯ್ಯ ಅವರ ಸುದೀರ್ಘ ಹೋರಾಟದ ಪಯಣವನ್ನು ನೆನೆದು ಭಾವುಕರಾದರು. ಹಲವು ಸಚಿವರ ಕಣ್ಣಾಲಿಗಳು ತೇವಗೊಂಡಿದ್ದವು. ಸಹೋದ್ಯೋಗಿ ಮಂತ್ರಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ ಮಧ್ಯಾಹ್ನ ಭೋಜನ ಬಳಿಕ ರಾಜೀನಾಮೆ ಪತ್ರ ಹಿಡಿದು ಕಾರಿನಲ್ಲಿ ಲೋಕಭವನದತ್ತ ಸಾಗಿದರು.

ರಾಜ್ಯಪಾಲರು ಪ್ರಸ್ತುತ ರಾಜಧಾನಿಯಲ್ಲಿ ಇಲ್ಲದ ಕಾರಣ, ಅವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು.















































































error: Content is protected !!
Scroll to Top