ಅಸಿಡಿಟಿ ತಡೆಗಟ್ಟುವ ಕ್ರಮ – ಆಹಾರ ಮತ್ತು ಜೀವನ ಶೈಲಿ

ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ “ನನಗೆ ಅಸಿಡಿಟಿ ಪ್ರಾಬ್ಲಮ್ ಇದೆ, ಗ್ಯಾಸ್ಟ್ರಿಕ್ ಆಗಿದೆ, ಹುಳಿ ತೇಗು ಬರುತ್ತೆ, ಎದೆ ಉರೀತಾ ಇದೆ” ಮುಂತಾದ ವಿವರಣೆಗಳನ್ನು ಹೆಚ್ಚಾಗಿ ನಮ್ಮ ಸುತ್ತಲಿನ ಜನರಿಂದ ಕೇಳುತ್ತಲೇ ಇರುತ್ತೇವೆ. ಇದರಲ್ಲಿ ಯುವ ಜನತೆಯ ಸಂಖ್ಯೆಯೇ ತುಂಬಾ ಹೆಚ್ಚಿನ ಪ್ರಮಾಣದಲ್ಲಿದೆ ಎನ್ನುವುದಂತೂ ಇನ್ನೂ ಕಳವಳಕಾರಿ ಸಂಗತಿ. ನಮ್ಮ ಯುವ ಜನರ ದೇಹ ನಿಜಕ್ಕೂ ಇಷ್ಟೊಂದು ದುರ್ಬಲವೇ ಎಂದು ಅನೇಕ ಬಾರಿ ಅನ್ನಿಸುವುದುಂಟು. ವಯಸ್ಸು ಮೂವತ್ತೂ ಆಗಿರುವುದಿಲ್ಲ, ಇಂಥಹ ತೊಂದರೆ ಅನುಭವಿಸುತ್ತಿರುತ್ತಾರೆ. ಅದೂ ಕೂಡ ಪದೇ ಪದೇ. ಯುವ ಜನರೇ ದೇಶದ ನಿಜವಾದ ದುಡಿಯುವ ಶಕ್ತಿಯಾಗಿರುವ ಸಂದರ್ಭದಲ್ಲಿ ಅವರು ಇಂತಹ ತೊಂದರೆಗಳಿಂದಾಗಿ ಹಲವು ಬಾರಿ ಕೆಲಸಕ್ಕೆ ಗೈರು ಹಾಜರಾಗುವುದು, ಕಾರ್ಯ ದಕ್ಷತೆ ಕಡಿಮೆಯಾಗುವುದು, ಕೆಲಸದಲ್ಲಿ ಏಕಾಗ್ರತೆ ಕೊರತೆ ಉಂಟಾಗುವುದು – ಇತ್ಯಾದಿಗಳು ದೇಶದ ಪ್ರಗತಿಯ ದೃಷ್ಟಿಯಿಂದ ಖಂಡಿತ ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

ಹಾಗಾದರೆ ಅಸಿಡಿಟಿ ಅಥವಾ ಅಮ್ಲಪಿತ್ತ ಎಂದರೇನು? ಎಂಬುದನ್ನು ತಿಳಿದುಕೊಳ್ಳೋಣ.

ನಮ್ಮ ಜಠರದ ಒಳ ಪದರದ ಚರ್ಮದಲ್ಲಿರುವ ವಿಶೇಷ ಬಗೆಯ ವಿವಿಧ ಜೀವಕೋಶಗಳಿಂದ ಉತ್ಪತ್ತಿಯಾಗುವ ಜಠರರಸವು (ಗ್ಯಾಸ್ಟ್ರಿಕ್ ಜ್ಯೂಸ್) ಬಹಳ ಪ್ರಬಲವಾದ ಆಮ್ಲ ರಸವಾಗಿದ್ದು (ಉದಾಹರಣೆಗೆ ಹೇಳುವುದಾದರೆ ಶೇವಿಂಗ್‌ಗೆ ಉಪಯೋಗಿಸುವ ಬ್ಲೇಡನ್ನು ಕೂಡ ಕರಗಿಸುವಷ್ಟು) ಅದು ಅನೇಕ ಬಗೆಯ ರಾಸಾಯನಿಕಗಳ ಮಿಶ್ರಣವಾಗಿದೆ. ಬಹು ಮುಖ್ಯವಾಗಿ ಹೈಡ್ರೋ ಕ್ಲೋರಿಕ್ ಆಸಿಡ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಇದು ಆಹಾರದ ಸಂಪರ್ಕಕ್ಕೆ ಬಂದ ಕೂಡಲೇ ಆಹಾರವನ್ನು ಜೀರ್ಣಿಸಲು ಶುರು ಮಾಡುತ್ತದೆ. ಆದರೆ ಅದು ಅಷ್ಟೊಂದು ತೀಕ್ಷ್ಣವಾದ ಆಸಿಡ್ ಆಗಿದ್ದರೂ ಜಠರದ ಚರ್ಮವು ಸುಡದೇ ಇರುವಂತೆ, ಹಾನಿಗೊಳಗಾಗದೇ ಇರುವಂತೆ ಮಾಡಲು ವಿಶೇಷವಾದ ದಪ್ಪ, ಲೋಳೆಯಂಥ ದ್ರವ ಪದಾರ್ಥವು ಜಠರದ ಒಳ ಚರ್ಮವನ್ನು ಆವರಿಸಿರುತ್ತದೆ. ಹಾಗಾಗಿ ಜಠರವು, ತಾನೇ ಉತ್ಪತ್ತಿ ಮಾಡುವ ಆಸಿಡ್ ನಿಂದ ಹಾನಿಗೊಳಗಾಗುವುದಿಲ್ಲ.

ಈ ಜಠರ ರಸವು ಪ್ರತಿ ದಿನವೂ ನಿರ್ದಿಷ್ಟ ಸಮಯದಲ್ಲಿ, ನಮ್ಮೊಳಗಿನ ಜೈವಿಕ ಗಡಿಯಾರಕ್ಕೆ ಅನುಸಾರವಾಗಿ ಉತ್ಪತ್ತಿಯಾಗುತ್ತಿರುತ್ತದೆ. ಹಾಗಾಗಿಯೇ ನಮಗೆ ಸಮಯ ಸಮಯಕ್ಕೆ ಸರಿಯಾಗಿ ಹಸಿವೆಯ ಅನುಭವವಾಗುತ್ತದೆ. ಆದ್ದರಿಂದ ಆ ಸಮಯಕ್ಕೆ ಸರಿಯಾಗಿ ನಾವು ಆಹಾರ ತೆಗೆದುಕೊಳ್ಳದೇ ಹೋದರೆ, ಅದು ಕ್ರಮೇಣ ಮೊದಲಿಗೆ ಜಠರದ ಚರ್ಮದ ರಕ್ಷಾ ಕವಚದಂತಿರುವ ಲೋಳೆ ಪದಾರ್ಥವನ್ನು ದಾಟಿ ಜಠರದ ಚರ್ಮದ ಸಂಪರ್ಕಕ್ಕೆ ಬಂದು, ಅದರ ಉರಿಯೂತವನ್ನುಂಟು ಮಾಡುತ್ತದೆ ಆಗ ಹೊಟ್ಟೆಯಲ್ಲಿ ಉರಿಯಂಥ ಅನುಭವು ವ್ಯಕ್ತಿಯ ಗಮನಕ್ಕೆ ಬರಲು ಶುರುವಾಗುತ್ತದೆ. ಅದರೊಂದಿಗೆ ಇನ್ನು ಕೆಲವರಿಗೆ ಹೊಟ್ಟೆಯಲ್ಲಿ ನೋವು, ವಾಂತಿ ಆಗುವುದು, ತಲೆ ನೋಯುವುದು, ಆಲಸ್ಯ, ನಿಶ್ಯಕ್ತಿ ಉಂಟಾಗುವುದು ಮುಂತಾದ ತೊಂದರೆಗಳು ಒಟ್ಟಿಗೆ ಸೇರಿಕೊಳ್ಳುತ್ತವೆ. ಇದುವೇ ವೈದ್ಯಕೀಯ ಭಾಷೆಯಲ್ಲಿ ಗ್ಯಾಸ್ಟ್ರೈಟಿಸ್ ಅಥವಾ ಆಮ್ಲಪಿತ್ತ.

ಇದಕ್ಕೆ ನೀರು ಕುಡಿಯುವುದಾಗಲೀ, ಮಾರುಕಟ್ಟೆಯಲ್ಲಿ ದೊರೆಯುವ ಅಂಟಾಸಿಡ್ ‌ಮಾತ್ರೆಗಳಾಗಲೀ ಶಾಶ್ವತ ಪರಿಹಾರವಲ್ಲ. ಯಾಕೆಂದರೆ ಅವು ಜಠರ ರಸದ ಉತ್ಪತ್ತಿಯನ್ನೇ ಕಡಿಮೆ ಮಾಡಿ ಬಿಡುತ್ತದೆ. ಹಾಗಾಗಿ ಅದನ್ನೇ ರೂಢಿಸಿಕೊಂಡರೆ ಮುಂದೆ ತಿಂದ ಆಹಾರವೇ ಜೀರ್ಣವಾಗದಿರುವ ಪರಿಸ್ಥಿತಿ ಅಂದರೆ ಅಜೀರ್ಣತೆ ಉಂಟಾಗಿ ಮತ್ತೊಂದು ಹೊಸ ಸಮಸ್ಯೆ ಶುರುವಾಗಬಹುದು. ಅಸಿಡಿಟಿಯ ಸಮಸ್ಯೆ ಇದ್ದರೂ, ಸಮಯಕ್ಕೆ ಸರಿಯಾಗಿ ಆಹಾರ ತೆಗೆದು ಕೊಳ್ಳದೇ ಇರುವ ಅಭ್ಯಾಸವು ಮತ್ತೂ ಮುಂದುವರೆದಲ್ಲಿ ಅದು ಕ್ರಮೇಣ ಜಠರದ ಚರ್ಮವನ್ನು ಹಾನಿ ಮಾಡಿ ಅಲ್ಲಿ ಗಾಯವಾಗಿ ಹುಣ್ಣಿನ ಉತ್ಪತ್ತಿಯಾಗುತ್ತದೆ. ಆಗ ವಿಪರೀತ ಎನಿಸುವಷ್ಟು ನೋವು, ಉರಿ, ವಾಂತಿ ಮುಂತಾದ ಸಮಸ್ಯೆ ಶುರುವಾಗಬಹುದು. ಇದುವೇ ಗ್ಯಾಸ್ಟ್ರಿಕ್ ಅಲ್ಸರ್.

ತಡೆಗಟ್ಟಲು ಇರುವ ಕ್ರಮಗಳಾವುವು?

ಅದು ನಾವು ಸೇವಿಸುವ ಆಹಾರ ಮತ್ತು ನಮ್ಮ ಜೀವನ ಶೈಲಿ ಎರಡನ್ನೂ ಅವಲಂಬಿಸಿದೆ.

ಸಮಯಕ್ಕೆ ಸರಿಯಾಗಿ ಆಹಾರದ ಸೇವನೆ, ಉಪ್ಪು, ಹುಳಿ, ಖಾರದ ಪದಾರ್ಥಗಳ ಮಿತ ಬಳಕೆ, ಹಸಿ ಮತ್ತು ಬೇಯಿಸಿದ ತರಕಾರಿಗಳ ಸೇವನೆ, ಮಾಂಸಾಹಾರದ ಮಿತ ಬಳಕೆ, ಹಸಿ ಮೆಣಸಿನ ಬದಲು ಒಳ್ಳೆ ಮೆಣಸಿನ ಬಳಕೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಅತಿಯಾಗಿ ತಿನ್ನದಿರುವುದು, ಆಹಾರದ ಜೊತೆ ತುಪ್ಪ ಮತ್ತು ಬೆಣ್ಣೆಗಳ ನಿಯಮಿತ ಸೇವನೆ, ಹಿಂದಿನ ದಿನದ ಆಹಾರದ ಬಳಕೆ ಮಾಡದೇ ಇರುವುದು, ಊಟ ಮಾಡುವಾಗ ನಡುವೆ ನಿಯಮಿತವಾಗಿ ನೀರು ಕುಡಿಯುವುದು, ಅತಿ ಬಿಸಿಯಾದ ಆಹಾರಗಳನ್ನು ಸೇವಿಸದಿರುವುದು ಇತ್ಯಾದಿಗಳೆಲ್ಲ ನಾವು ಸೇವಿಸುವ ಆಹಾರ ಶೈಲಿಗೆ ಸಂಬಂಧಪಟ್ಟವಾದರೆ, ಇನ್ನು ಜೀವನ ಶೈಲಿಯಲ್ಲಿ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದು, ಧ್ಯಾನ/ ಮೆಡಿಟೇಶನ್ ಮಾಡುವುದು, ಮಾನಸಿಕ ಒತ್ತಡ, ಉದ್ವೇಗ, ಖಿನ್ನತೆ ಮುಂತಾದ ತೊಂದರೆಗಳಿದ್ದರೆ ಅವನ್ನು ಸರಿ ಮಾಡಿಕೊಳ್ಳುವುದು, ದಿನಾಲೂ ರಾತ್ರಿ ಊಟದ ನಂತರ ಸ್ವಲ್ಪ ದೂರ ನಡೆಯುವುದು, ಪದೇ ಪದೇ ಮಲಬದ್ಧತೆ ಆಗದಂತೆ ನೋಡಿಕೊಳ್ಳುವುದು ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

ಇನ್ನು ಈ ಮೊದಲೇ ಅಸಿಡಿಟಿಯಿಂದ ಬಳಲುತ್ತಿರುವ ರೋಗಿಗಳಿಗೆ ಮನೆಯಲ್ಲೇ ಮಾಡಿ ಕೊಳ್ಳಬಹುದಾದ ಕೆಲ ಬಗೆಯ ಪರಿಹಾರಗಳನ್ನು ನೋಡೋಣ.

ಮಣ್ಣಿನ ಮಡಿಕೆಯ ನೀರು ಕುಡಿಯುವುದು, ದೇಹದ ಪಿತ್ತವನ್ನು ಕಡಿಮೆ ಮಾಡುತ್ತದೆ.

ಬಾಳೆ ಎಲೆಯ ಮೇಲೆ ಊಟ ಮಾಡುವುದು(ಬಾಳೆ ಎಲೆಯ ಮೇಲ್ಪದರದ ಮೇಲೆ ಎಪಿಗ್ಯಾಲೋ ಕೆಟಾಚಿನ್ ಗ್ಯಾಲೇಟ್/EGCG ಎನ್ನುವ ಅಂಶ ವಿದ್ದು ಇದು ಹೊಟ್ಟೆಯ ಹುಣ್ಣು, ಕರುಳಿನ ಹುಣ್ಣು, ಅಸಿಡಿಟಿ, ಕರುಳಿನ ಕ್ಯಾನ್ಸರ್ ಮುಂತಾದ ತೊಂದರೆಗಳಿಗೆ ಉತ್ತಮ ಪ್ರತಿರೋಧ ತೋರುತ್ತದೆ ಮಾತ್ರವಲ್ಲದೆ ದೇಹದ ತೂಕ ಕಡಿಮೆ ಮಾಡಲು ಕೂಡ ಸಹಕಾರಿ ಮತ್ತು ಹೃದಯದ, ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು)

ಪಡುವಲಕಾಯಿ ಬಳ್ಳಿಯ ಎಲೆ ಮತ್ತು ಕಹಿ ಬೇವಿನ ಎಲೆಯ ಕಷಾಯ ಕುಡಿಯುವುದು.

ಧನಿಯಾ, ಜೀರಿಗೆ ನೀರು ಕುಡಿಯುವುದು, ನನ್ನಾರಿ ಬೇರು ಅಥವಾ ಲಾಮಂಚ ಹಾಕಿ ಕುದಿಸಿದ ನೀರು ಕುಡಿಯುವುದು, ಒಂದೆಲಗ ಎಲೆಯ ಚಟ್ನಿ, ತಂಬುಳಿ ಮಾಡಿ ಸೇವಿಸುವುದು.

ಸಿಹಿಗುಂಬಳದ ಪದಾರ್ಥ ಸೇವನೆ. ಚೆನ್ನಾಗಿ ಬೇಯಿಸಿದ ಆಹಾರ ಸೇವನೆ.

ಹೆಚ್ಚು ಹೊತ್ತು ಹೊಟ್ಟೆ ಖಾಲಿ ಬಿಡದೆ, ಆಗಾಗ ಚಿಕ್ಕ ಪ್ರಮಾಣದಲ್ಲಿ ಆಹಾರ ಅಥವಾ ಸಿಹಿ ಹಣ್ಣುಗಳ ಸೇವನೆ. ಮುಂತಾದ ಕ್ರಮಗಳನ್ನು ಅನುಸರಿಸಬೇಕು. ಮತ್ತು ಆಯುರ್ವೇದದಲ್ಲಿ ಆಮ್ಲಪಿತ್ತಕ್ಕೆ, ಅದರಿಂದ ಉಂಟಾಗಬಹುದಾದ ತಲೆನೋವು, ವಾಂತಿ, ಮಲಬದ್ಧತೆ ಮುಂತಾದ ತೊಂದರೆಗಳಿಗೆ ಅತ್ಯುತ್ತಮ ಪರಿಹಾರ ಲಭ್ಯವಿದ್ದು ಅಗತ್ಯವಿದ್ದಲ್ಲಿ ಆಯುರ್ವೇದ ವೈದ್ಯರ ಸಲಹೆಯನ್ನೂ ಪಡೆಯಬಹುದು.



































































































error: Content is protected !!
Scroll to Top