ತುಮಕೂರು : ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ರಾಜೀವಗಾಂಧಿ ಅವರು ಪ್ರಧಾನಮಂತ್ರಿ ಆಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ಸ್ಥಾನಮಾನಗಳನ್ನು ಕೊಡುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅವಕಾಶ ನೀಡಲಾಯಿತು. ಅದರಿಂದ ಇದೀಗ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಸಿಕ್ಕಿದೆ ಎಂದರು.
ನಂತರ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಇದ್ದಾಗ ಸಂಸತ್ತಿನಲ್ಲೂ ಶೇ.50 ಅವಕಾಶ ಕಲ್ಪಿಸುವ ಮಹಿಳಾ ಮಸೂದೆಯನ್ನು ಮಂಡಿಸಲಾಯಿತು. ಆ ದಿನಗಳಲ್ಲಿ ರಾಜ್ಯಸಭೆಯಲ್ಲಿ ಅದು ಅನುಮೋದನೆ ಆಗಲಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ಈ ಮಸೂದೆಯನ್ನು ಅನುಮೋದಿಸಿ ಮಹಿಳೆಗೆ ಶಕ್ತಿ ನೀಡಬೇಕು ಎಂದರು. ಇಡೀ ವಿಶ್ವದಲ್ಲಿ ಭಾರತದಲ್ಲಿಯೇ ಮಹಿಳೆಯರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿ ಸಬಲೀಕರಣಗೊಳಿಸಲಾಗಿದೆ. ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲೂ ಪುರುಷರನ್ನು ಹಿಂದಿಕ್ಕಿ ಸಾಧನೆ ಮಾಡುತ್ತಿದ್ದಾರೆ ಎಂದರು.









































