ಸಿನೆಮಾ ಮಂದಿಗೆ ವಿವಾದವೇ ಮನೆ ದೇವರಾಗಿಬಿಟ್ಟಿದೆ !
ಪ್ರೇಮ್, ನಿಮ್ಮ ಅಕ್ಷರ ಹಾದರಕ್ಕೆ (ಇದು ರವಿ ಬೆಳಗೆರೆ ಅವರು ಸೃಷ್ಟಿ ಮಾಡಿದ ಶಬ್ದ) ಸಾಹಿತ್ಯ ಎಂಬ ಶಬ್ದ ಬಳಸಬೇಡಿ. ಏನು ಬರೆದರೂ ಸಿನೆಮಾ ಪ್ರೇಮಿಗಳು ಬಾಯಿ ಚಪ್ಪರಿಸಿ ಸ್ವೀಕರಿಸುತ್ತಾರೆ ಎಂಬ ಹೀನ ಮನಸ್ಥಿತಿಯಿಂದ ಮೊದಲು ಹೊರಗೆ ಬನ್ನಿ. ಅದಕ್ಕೆ ಪುನಃ ನೀವು, ನಿಮ್ಮ ಹೆಂಡತಿ ಮಾಡುವ ಸಮರ್ಥನೆಗಳು ನಿಮ್ಮ ಬಹು ಕೆಟ್ಟ ಸಂಸ್ಕೃತಿಯನ್ನು ತೋರಿಸುತ್ತವೆ. ಈ ರೀಲ್ಸ್ ಕಾಲದಲ್ಲಿ ಯುವಜನತೆ ನಿಮ್ಮ ಹಾಡನ್ನು ಹಿಡಿದುಕೊಂಡು ಸಾಲು ಸಾಲು ರೀಲ್ಸ್ ಮಾಡಲು ಹೊರಟರೆ ಆಗುವ ಪರಿಣಾಮಗಳ ಬಗ್ಗೆ ಮೊದಲು ಯೋಚಿಸಿ.
ಬಾಟಲಿ, ಉಪ್ಪಿನಕಾಯಿ
ಇವುಗಳನ್ನು ಇಟ್ಟುಕೊಂಡು ನೀವು ಬರೆದ ಈ ‘ಅದ್ಭುತ’ ಹಾಡಿಗೆ ಜ್ಞಾನಪೀಠವನ್ನು ಕೊಟ್ಟರೂ ಕಡಿಮೆಯೇ ! ನನಗೆ ಆ ಹಾಡಿನ ಅರ್ಥವೇ ಗೊತ್ತಿರಲಿಲ್ಲ ಎಂದ ನೋರಾ ಫತೆಹೀ ಮಾತನ್ನು ನಂಬಲು ಸಾಧ್ಯವೇ ಇಲ್ಲ ! ನಾನು ಒಂದು ನೃತ್ಯಕ್ಕೆ ಅವಳಿಗೆ 4 ಕೋಟಿ ರೂ. ಕೊಟ್ಟಿದ್ದೇನೆ ಎಂದು ಸಿನೆಮಾ ನಿರ್ಮಾಪಕರು ಹೇಳಿದ ಹಸಿ ಸುಳ್ಳನ್ನು ಯಾರೂ ನಂಬಲು ಸಾಧ್ಯವೇ ಇಲ್ಲ!

ಈ ಹಿಂದೆ ಕೂಡ ಇದೇ ರೀತಿಯ ಅಶ್ಲೀಲ ಅಥವಾ ಡಬ್ಬಲ್ ಮೀನಿಂಗ್ ಹಾಡುಗಳು ಎಲ್ಲ ಭಾಷೆಗಳಲ್ಲಿಯೂ ಬಂದಿವೆ. ಕನ್ನಡದಲ್ಲಿ ಹಂಸಲೇಖ ಇಂತಹ ಹಲವು ಹಾಡುಗಳನ್ನು ಬರೆದ ಅಪಕೀರ್ತಿಯನ್ನು ಹೊಂದಿದ್ದಾರೆ. ಶೃಂಗಾರದ ಹೆಸರಿನಲ್ಲಿ ರವಿಚಂದ್ರನ್ ಮತ್ತು ಹಂಸಲೇಖಾ ಕಾಂಬಿನೇಶನ್ನಲ್ಲಿ ಇಂತಹ ಹಲವು ಹಾಡುಗಳು ಬಂದಿವೆ. ಹಿಂದಿನ ಹೆಚ್ಚಿನ ಸಿನೆಮಾಗಳಲ್ಲಿ ಕ್ಯಾಬರೆ ದೃಶ್ಯಗಳು ಇರುತ್ತಿದ್ದವು. ಅದಕ್ಕೆ ಪೂರಕವಾಗಿ ಹಾಡುಗಳೂ ಇರುತ್ತಿದ್ದವು. ಆದರೆ, ಸಾಮಾಜಿಕ ಜಾಲತಾಣಗಳು ಅಷ್ಟೊಂದು ಆಕ್ಟಿವ್ ಇಲ್ಲದ ಕಾಲ ಅದು. ಹಾಡುಗಳನ್ನು ಸಿನೆಮಾದಲ್ಲಿ ನೋಡಿ ಬಾಯಿ ಚಪ್ಪರಿಸುವ ಒಂದಷ್ಟು ಪ್ರೇಕ್ಷಕರು ಇದ್ದರು. ಈ ಹಾಡುಗಳಿಂದ ನಿರ್ಮಾಪಕರ ಥೈಲಿ ಒಂದಷ್ಟು ತುಂಬುತ್ತಿತ್ತು. ಎಷ್ಟೋ ಬಾರಿ ನಿರ್ಮಾಪಕರೇ ದುಂಬಾಲು ಬಿದ್ದು ಇಂತಹ ಹಾಡುಗಳನ್ನು ಬರೆಸುತ್ತಿದ್ದರು. ಉಲಾಲಾ ಊಲಾಲಾ, ಚೆಲ್ಲಿತೋ ಚೆಲ್ಲಿತೋ, ಚೋಲಿ ಕೆ ಪೀಚೇ, ತಬಲಾ ತಬಲಾ… ಮೊದಲಾದ ಹಾಡುಗಳು ಹುಟ್ಟಿದ್ದು ಹಾಗೆ! ಅವುಗಳು ಇಲ್ಲದಿದ್ದರೂ ಸಿನೆಮಾಕ್ಕೆ ಏನೂ ತೊಂದರೆ ಆಗುತ್ತಿರಲಿಲ್ಲ. ಆದರೆ, ಕೆಲವು ನಿರ್ಮಾಪಕರಿಗೆ ಅವುಗಳು ಬೇಕು. ಕೆಲವು ನಿರ್ದೇಶಕರೂ ಅಂತಹ ಹಾಡುಗಳು ಸಿನೆಮಾವನ್ನು ಗೆಲ್ಲಿಸುತ್ತವೆ ಎಂದು ಇಂದಿಗೂ ನಂಬಿದ್ದಾರೆ. ಪರಿಣಾಮವಾಗಿ ಪ್ರೇಮ್ ಅಂತವರು ಇಂತಹ ಅಕ್ಷರ ಹಾದರಕ್ಕೆ ಇಳಿಯುತ್ತಾರೆ. ಮುಂದೆಯೂ ಇಂತಹ ಅನೇಕರು ಬರುತ್ತಾರೆ.
ಶೃಂಗಾರ ಬೇರೆ, ಹಾದರ ಬೇರೆ!
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನೆಮಾಗಳ ಸಕ್ಷಸ್ ರೇಟ್ ತುಂಬಾ ಕಡಿಮೆ ಆಗಿದೆ. 2025ರಲ್ಲಿ ಬಿಡುಗಡೆಯಾದ ಅಷ್ಟೊಂದು ಸಿನೆಮಾಗಳಲ್ಲಿ ದುಡ್ಡು ಮಾಡಿದ್ದು ಸೂ ಫ್ರಮ್ ಸೋ ಮತ್ತು ಕಾಂತಾರ ಭಾಗ -1 ಮಾತ್ರ. ಶುದ್ಧ ಮನರಂಜನೆಯ ಮತ್ತು ಇಡೀ ಕುಟುಂಬ ಕುಳಿತು ನೋಡಲು ಸಾಧ್ಯವಾಗುವ ಸಿನೆಮಾ ಬಂದರೆ ಈಗಲೂ ಕನ್ನಡದಲ್ಲಿ ಸದಭಿರುಚಿಯ ಪ್ರೇಕ್ಷಕರು ಇದ್ದಾರೆ. ಹಾಗೆಯೇ ಒಂದಷ್ಟು ಪ್ರಯೋಗಾತ್ಮಕ ಸಿನಿಮಾಗಳೂ ಕನ್ನಡದಲ್ಲಿ ಬರುತ್ತಿವೆ. ಮಾರ್ಕೆಟಿಂಗ್ ಕೊರತೆಯಿಂದ ಇಂದು ಅಂತಹ ಸಿನೆಮಾಗಳು ಪ್ರೇಕ್ಷಕರನ್ನು ತಲುಪುತ್ತಿಲ್ಲ ಅಷ್ಟೇ. ಅದಕ್ಕೆ ಪ್ರೇಮ್ ಅಂತವರು ಇಂದು ಆರಿಸಿಕೊಂಡ ಅಡ್ಡ ದಾರಿ ಅಂದರೆ ಈ ಅಶ್ಲೀಲ ಸಾಹಿತ್ಯದ ಹಾದಿ!
ಕಾಂಟ್ರಾವರ್ಸಿಯಿಂದ ಸಿನೆಮಾ ಗೆಲ್ಲಬಹುದೇ ?
ಟ್ಯಾಕ್ಸಿಕ್ ಸಿನೆಮಾದ ಟೀಸರ್ನಲ್ಲಿ ಕಂಡದ್ದೂ ಇದೇ ರೀತಿಯ ಹಸಿ ಹಸಿ ದೃಶ್ಯಗಳು! ಅದರ ನಿರ್ಮಾಪಕರು ಅದು ಅಂತಾರಾಷ್ಟ್ರೀಯ ಮಟ್ಟದ ಸಿನೆಮಾ ಎಂದು ಆ ದೃಶ್ಯವನ್ನು ಸಮರ್ಥನೆ ಕೂಡ ಮಾಡಿಕೊಂಡರು. ಈ ರೀತಿಯ ಗಿಮಿಕ್ಗಳು ಒಮ್ಮೆ ಒಂದಷ್ಟು ಪಡ್ಡೆಗಳನ್ನು ಥಿಯೇಟರ್ ಬಾಗಿಲಿಗೆ ತಂದು ಬಿಡಬಹುದು. ಆದರೆ, ನೂರಾರು ಕೋಟಿ ಬಜೆಟ್ನ ಅಂತಹ ಸಿನೆಮಾ ಉಳಿಸಿಕೊಳ್ಳಲು ಸಶಕ್ತವಾದ ಕಥೆ ಬೇಕು. ಈ ರೀತಿಯ ಚೀಪ್ ಗಿಮಿಕ್ಗಳು ದೀರ್ಘಾವಧಿಯಲ್ಲಿ ಸಕ್ಸಸ್ ತಂದು ಕೊಡಲು ಸಾಧ್ಯವೇ ಇಲ್ಲ. ಕೇವಲ ಕಾಂಟ್ರೋವರ್ಸಿಗಳಿಂದ ಒಂದು ಸಿನೆಮಾ ಗೆಲ್ಲಲು ಸಾಧ್ಯವೇ?
ಇವರೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಅಂಶ ಅಂದರೆ ಶೃಂಗಾರ ಬೇರೆ, ವ್ಯಭಿಚಾರ ಬೇರೆ ಎಂಬುದನ್ನು! ಯಾವ ಶೃಂಗಾರದ ದೃಶ್ಯವನ್ನು ಸಹನೀಯವಾಗಿ ಪ್ರೇಕ್ಷಕರಿಗೆ ತೋರಿಸಲು ಸಾಧ್ಯ ಎಂದು ಲೆಜೆಂಡ್ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಭಾರ್ಗವ, ಸೋಮಶೇಖರ್ ಅಂತವರು ತೋರಿಸಿಕೊಟ್ಟಿದ್ದಾರೆ. ಸೆನ್ಸಾರ್ ಮಂಡಳಿಯಲ್ಲಿ ಕನ್ನಡ ತಿಳಿದವರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಒಬ್ಬ ನಿರ್ದೇಶಕರು ಹೇಳಿದ್ದು ನನಗೆ ನೆನಪಿದೆ. ಆದ್ದರಿಂದ ಅಶ್ಲೀಲ ಸಂಭಾಷಣೆಗಳು, ಅಶ್ಲೀಲ ಸಾಹಿತ್ಯ ನೇರವಾಗಿ ಕತ್ತರಿ ಪ್ರಯೋಗಕ್ಕೆ ಒಳಗಾಗದೆ ಪ್ರೇಕ್ಷಕರನ್ನು ತಲುಪುತ್ತವೆ.
ನನಗಿರುವ ಆತಂಕ ಎಂದರೆ ಇದು ರೀಲ್ಸ್ ಜಗತ್ತಿನಲ್ಲಿ ಮುಳುಗಿರುವ ನಮ್ಮ ಯುವಜನತೆ ಇಂತಹ ಹಾಡುಗಳನ್ನು ಯಥಾವತ್ತು ಕಾಪಿ ಮಾಡಿ ಪ್ರದರ್ಶನಕ್ಕೆ ಹೊರಟರೆ ನಮ್ಮ ದೇಶೀಯ ಸಂಸ್ಕೃತಿ ಎಲ್ಲಿಗೆ ಮುಟ್ಟಬಹುದು ? ಸ್ತ್ರೀಯರನ್ನು ಆಗೌರವಿಸುವ ಇಂತಹ ಹಾಡುಗಳು ಸಾರ್ವಜನಿಕ ವೇದಿಕೆಯಲ್ಲಿ, ಕಾಲೇಜು ವೇದಿಕೆಯಲ್ಲಿ ಬರಲು ಆರಂಭವಾದರೆ ಅದರ ಹೊಣೆಯನ್ನು ಪ್ರೇಮ್ ಹೊರಲು ರೆಡಿ ಇದ್ದಾರಾ? ನಾನಂತೂ ಪ್ರೇಮ್ ಅವರನ್ನು ಕ್ಷಮಿಸುವ ಮಾತೆ ಇಲ್ಲ ! ಥೂ!











































