ಯಕ್ಷ ದಶಾವತಾರಿ – ಯಕ್ಷಗುರು ನಿರ್ಗಮನ !

ಯಕ್ಷಗಾನದ ಮೇರು ಕಲಾವಿದ ಸೂರಿಕುಮೇರು ಗೋವಿಂದ ಭಟ್ ಅಸ್ತಂಗತರಾದ ಆಘಾತಕಾರಿ ಸುದ್ದಿ ಇಂದು ಯಕ್ಷಪ್ರೇಮಿಗಳಿಗೆ ಅಪ್ಪಳಿಸಿದೆ. ನಿರಂತರ 70 ವರ್ಷಗಳ ಕಾಲ ಕಿರೀಟದ ವೇಷಧಾರಿಯಾಗಿ ಮೆರೆದದ್ದು ಸಣ್ಣ ಸಾಧನೆಯಲ್ಲ. ಅದರಲ್ಲಿಯೂ ಧರ್ಮಸ್ಥಳ ಮೇಳದಲ್ಲಿ ಅವರು 54 ವರ್ಷ ಯಕ್ಷ ಯಾತ್ರೆ ಮಾಡಿದ್ದಾರೆ. ಉಳಿದಂತೆ ಮುಲ್ಕಿ, ಸುರತ್ಕಲ್, ಕೂಡ್ಲು ಮತ್ತು ಕುಂಡಾವು ಮೇಳಗಳಲ್ಲಿ ಪಾತ್ರಗಳನ್ನು ಮಾಡಿದ್ದಾರೆ. ಅವರಿಗೆ 86 ವರ್ಷ ಪ್ರಾಯ ಆಗಿತ್ತು.

ಯಕ್ಷ ದಶಾವತಾರಿ ಕೆ.ಗೋವಿಂದ ಭಟ್ಟರು
ಯಕ್ಷಗಾನದ ಸೌಂದರ್ಯವನ್ನು ಹೆಚ್ಚಿಸಲು ಅವರು ಕಥಕ್ಕಳಿ ಮೊದಲಾದ ಕಲಾಪ್ರಕಾರಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಅವರು ಮಾಡದೇ ಇರುವ ಪಾತ್ರವೇ ಇರಲಿಲ್ಲ. ಹಾಗೆಯೇ ಅವರು ಒಂದು ಪಾತ್ರವನ್ನು ಮಾಡಿದರು ಅಂತಾದರೆ ಮುಂದೆ ಯಾವ ಕಲಾವಿದರೂ ಆ ಪಾತ್ರವನ್ನು ಅವರಿಗಿಂತ ಚೆನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬಂತಿತ್ತು. ನಾನು ಅವರ ನೂರಾರು ಯಕ್ಷಗಾನದ ವೇಷಗಳನ್ನು ನೋಡಿದ್ದೇನೆ ಮತ್ತು ಬೆರಗಾಗಿದ್ದೇನೆ. ಪರಿಪೂರ್ಣವಾದ ಪಾತ್ರ ಚಿತ್ರಣ, ಹಿತಮಿತ ಆದರೆ ಚಂದವಾದ ನೃತ್ಯ, ಆಳವಾದ ಅಥವಾ ಸ್ಪಷ್ಟತೆ, ಪುರಾಣಗಳ ವಿಸ್ತಾರ ಪರಿಚಯ, ಯಾವುದೇ ಯಕ್ಷ ಪಾತ್ರಗಳನ್ನು ವರ್ತಮಾನದ ಸ್ಥಿತಿಗೆ ಹೋಲಿಸುವ ಜಾಣ್ಮೆ, ಪ್ರೇಕ್ಷಕರನ್ನು ಭಾವಸ್ಪರ್ಶಕ್ಕೆ ಕೊಂಡೊಯ್ಯುವ ಮೃದುವಾದ ಧ್ವನಿ ಹೀಗೆ ಗೋವಿಂದ ಭಟ್ಟರು ಯಕ್ಷ ದಶಾವತಾರಿ ಎಂದೇ ಕರೆಸಿಕೊಂಡಿದ್ದರು.

ಯಕ್ಷಗಾನದ ಎಲ್ಲ ಅಂಗಗಳ ಸ್ಪಷ್ಟ ಪರಿಚಯ ಮತ್ತು ಮಾಹಿತಿ ಅವರಿಗಿತ್ತು. ಮಣಿ ಮೇಖಲೇ ಮೊದಲಾದ ಅನೇಕ ಯಕ್ಷ ಪ್ರಸಂಗಗಳನ್ನು ರಚನೆ ಕೂಡ ಮಾಡಿದ್ದಾರೆ. ತೆಂಕು, ಬಡಗು ಎರಡೂ ತಿಟ್ಟುಗಳಲ್ಲಿ ಅವರು ವ್ಯವಸಾಯ ಮಾಡಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿಯೂ ಅವರು ಯಕ್ಷಗಾನದ ವೇಷ ಮಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರ ಮುಂದೆ ಕೂಡ ಅವರು ವೇಷ ಮಾಡಿರುವುದು ಅವರ ಹಿರಿಮೆ. ಅವರ ಬಗ್ಗೆ ಹಿರಣ್ಯ ವೆಂಕಟೇಶ್ ಭಟ್ ಬರೆದಿರುವ ‘ಎಪ್ಪತ್ತು ತಿರುಗಾಟಗಳು – ಸೂರಿ ಕುಮೇರು ಕೆ. ಗೋವಿಂದ್ ಭಟ್‌ʼ ಪುಸ್ತಕವು ಇತ್ತೀಚೆಗೆ ಸಂಪಾಜೆ ಯಕ್ಷೋತ್ಸವದಲ್ಲಿ ಲೋಕಾರ್ಪಣೆಗೊಂಡು ಜನಪ್ರಿಯತೆಯನ್ನು ಪಡೆದಿತ್ತು. ಅವರಿಗೆ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಜಾನಪದ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ ಸಂದಿವೆ.

ನಿಜಾರ್ಥದಲ್ಲಿ ಯಕ್ಷ ಗುರು
ಇಂದಿನ ನೂರಾರು ಕಲಾವಿದರು ಗೋವಿಂದ ಭಟ್ಟರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಗುರುವಾಗಿ ಸ್ವೀಕಾರ ಮಾಡಿಕೊಂಡ ಕಾರಣ ಅವರು ನಿಜಾರ್ಥದಲ್ಲಿ ಯಕ್ಷಗುರು ಎಂದು ಕರೆಸಿಕೊಂಡವರು. ಯಕ್ಷಗಾನದ ಯಾವ ವಿಭಾಗದ ಪ್ರಶ್ನೆ ಮತ್ತು ಜಿಜ್ಞಾಸೆಗಳಿಗೆ ಅವರು ಯಾವ ಇಗೋ ಇಲ್ಲದೇ ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಸೂಡಾ ಎಂಬ ಗ್ರಾಮದಲ್ಲಿ ನಡೆದ ಯಕ್ಷಗಾನದ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ಗೋವಿಂದ ಭಟ್ಟರಿಗೆ ನಾನು ಅಭಿನಂದನಾ ಭಾಷಣವನ್ನು ಮಾಡಿದ್ದು ನನಗೆ ಇಂದಿಗೂ ಸ್ಮರಣೀಯವಾದ ಕ್ಷಣವೇ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ.

















































































error: Content is protected !!
Scroll to Top