ಕರ್ತವ್ಯದಲ್ಲೂ ಮಾನವೀಯತೆ ತೋರಿದವರು ನಾಸಿರ್ – ಮಂಜಪ್ಪ ಡಿ. ಆರ್.‌

ಕಾರ್ಕಳ : ಪೊಲೀಸ್‌ ಅಧಿಕಾರಿಯಾಗಿ‌ ಜಾತಿ, ಧರ್ಮ ಮೀರಿ ಕಾನೂನಿನೊಂದಿಗೆ ಮಾನವೀಯತೆಯಲ್ಲೇ ಕಾರ್ಯನಿರ್ವಹಿಸಿರುವ ನಾಸಿರ್‌ ಹುಸೇನ್‌ ಅವರು ಜನರ ವಿಶ್ವಾಸ ಗಳಿಸಿದ್ದರು. ಜನರ ಪ್ರೀತಿಯೇ ಅವರು ಪಡೆದಿದ್ದ ದೊಡ್ಡ ಸಂಪತ್ತು ಎಂದು ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್.‌ ಅಭಿಪ್ರಾಯಪಟ್ಟರು.
ಮಾ. 10ರಂದು ಜೆಸಿಐ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ನಿಧನರಾದ ಪೊಲೀಸ್ ಅಧಿಕಾರಿ ನಾಸಿರ್ ಹುಸೇನ್ ಅವರಿಗೆ ಕಿಸಾನ್‌ ಸಭಾಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ವೃತ್ತಿ ಬದ್ಧತೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ನಾಸೀರ್‌ ಹುಸೇನ್‌ ಅವರ ಕರ್ತವ್ಯ ಪ್ರಜ್ಞೆ ಸದಾ ಸ್ಮರಣೀಯ. ಅವರ ಅಕಾಲಿಕ ಮರಣ ಸಮಾಜಕ್ಕೆ ಬಹುದೊಡ್ಡ ನಷ್ಟ ಎಂದು ಬಣ್ಣಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಮಾತನಾಡಿ, ಕೋವಿಡ್‌ ಸಂಕಷ್ಟ ಕಾಲದಲ್ಲಿ ನಾಸಿರ್‌ ಹುಸೇನ್‌ ಅವರ ಕರ್ತವ್ಯ ನಿಷ್ಠೆ, ಕಾರ್ಯತತ್ಪರತೆ ಸಾರ್ವಜನಿಕವಾಗಿ ಅನಾವರಣಗೊಂಡಿತ್ತು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವಲ್ಲಿ ಶ್ರಮಿಸಿದ ಅವರು ಆದರ್ಶಪ್ರಾಯರು ಎಂದರು.

ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಉಪನಿರೀಕ್ಷಕ ಪ್ರಸನ್ನ ಎಂ.ಎಸ್.‌ ಮಾತನಾಡಿ, ನಾಸಿರ್‌ ಹುಸೇನ್‌ ಅವರು ನಮ್ಮ ಇಲಾಖೆಯಲ್ಲಿ ಯಂಗ್‌ ಬಾಯ್‌ ಅಂತಿದ್ದರು. ಪ್ರತಿ ಕಾರ್ಯಕ್ರಮದಲ್ಲೂ ಕ್ರೀಯಾಶೀಲರಾಗಿ ಭಾಗವಹಿಸುತ್ತಿದ್ದರು. ಚಿಕ್ಕಮಗಳೂರಿನ ದತ್ತಜಯಂತಿ ವೇಳೆ 10 ಸಾವಿರ ಮಂದಿ ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ ಪರಿ ಕರ್ತವ್ಯಪರತೆಗೆ ಸಾಕ್ಷಿ ಎಂಬಂತ್ತಿತ್ತು ಎಂದರು.

ಕಾರ್ಕಳ ಜೇಸಿಐ ಅಧ್ಯಕ್ಷ ಅವಿನಾಶ್‌ ಶೆಟ್ಟಿ ಹಾಗೂ ರೋಟರಿ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ಮಾತನಾಡಿ, ನಾಸೀರ್‌ ಹುಸೇನ್‌ ಅವರು ಜನರೊಂದಿಗೆ ಸ್ನೇಹಿತರಂತೆ ಬೆರೆತವರು. ನಾಸಿರ್‌ ಅವರು ಕಾರ್ಕಳದ ಜನರ ಮನಸ್ಸಲ್ಲಿ ಸದಾ ಸ್ಮರಣೀಯರಾಗಿರುತ್ತಾರೆ ಎಂದರು.

ಮೌಲನಾ ಸೈಯಿದ್‌ ರಝಾ ಜಲ್ವಾ ಎ ನೂರ್‌ ಅವರು ಇಸ್ಲಾಂ ಧರ್ಮದಂತೆ ಪ್ರಾರ್ಥಿಸಿ ನುಡಿನಮನ ಸಲ್ಲಿಸಿದರು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅಜಿತ್‌ ಹೆಗ್ಡೆ ಮಾಳ, ಪುರಸಭಾ ಮಾಜಿ ಸದಸ್ಯ ಅಶ್ಫಕ್ ಅಹ್ಮದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್‌, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶೇಖ್‌ ಶಬ್ಬೀರ್‌, ಉದ್ಯಮಿ ಶೋಧನ್‌ ಹೆಗ್ಡೆ, ಉದಯ ಕುಮಾರ್‌ ಹೆರ್ಮುಂಡೆ ಮಾತನಾಡಿದರು,
ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.





























































































error: Content is protected !!
Scroll to Top