ಭಾರತದ ವಾಲ್ಟ್ ಡಿಸ್ನಿ ಅನಂತ್ ಪೈ (ಅಂಕಲ್ ಪೈ)

ಭಾರತದಲ್ಲಿ ದಾಖಲೆಯನ್ನು ಮಾಡಿದ ‘ಅಮರ ಚಿತ್ರಕಥಾ’ ಸರಣಿ ರೂಪಿಸಿದ್ದು ಅವರು !

ಪ್ರತಿಯೊಬ್ಬರೂ ಬಾಲ್ಯದಲ್ಲಿ ಖಂಡಿತವಾಗಿ ಓದಿರುವ ಹಾಗೂ ಇಂದಿಗೂ ಓದಲು ಇಚ್ಛೆ ಪಡುವ ಎರಡು ಕಾಮಿಕ್ಸ್ ಪುಸ್ತಕಗಳ ಸರಣಿಗಳೆಂದರೆ ಅವು ಅಮರ ಚಿತ್ರಕಥಾ ಮತ್ತು ಟಿಂಕಲ್! ಬಣ್ಣ ಬಣ್ಣದ ಚಿತ್ರಗಳ ಜೊತೆಗೆ ಕಥೆ ಹೇಳುವ ಆಕರ್ಷಕ ಪುಸ್ತಕಗಳು ಅವು. ನಮ್ಮೆಲ್ಲರ ಮನಸ್ಸಿನಲ್ಲಿ ಅದ್ಭುತವಾದ ರಮ್ಯ ಕಲ್ಪನಾಲೋಕವನ್ನು ಸೃಷ್ಟಿಸಿದ ಸರಣಿ ಪುಸ್ತಕಗಳು! ಅವೆರಡೂ ಸರಣಿಗಳನ್ನು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದವರು ಅನಂತ್ ಪೈಯವರು. ತಮ್ಮನ್ನು ‘ಅಂಕಲ್ ಪೈ’ ಎಂದವರು ತುಂಬಾ ಪ್ರೀತಿಯಿಂದ ಕರೆದುಕೊಂಡರು. ಅವರು ನನ್ನೂರಾದ ಕಾರ್ಕಳದಲ್ಲಿ ಹುಟ್ಟಿದವರು ಮತ್ತು ಬಾಲ್ಯವನ್ನು ಕಳೆದವರು ಎನ್ನುವುದು ನನಗೆ ಹೆಮ್ಮೆ.ಅವರ ಮಾತೃಭಾಷೆಯು ಕೊಂಕಣಿ ಆಗಿತ್ತು.

ನತದೃಷ್ಟ ಬಾಲ್ಯ ಅವರದಾಗಿತ್ತು
ಹುಟ್ಟಿದ ಎರಡನೆಯ ವರ್ಷಕ್ಕೆ ಪೈ ಅವರು ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡರು. ಹಾಗೆ ಅವರ ಅಜ್ಜ ಅವರನ್ನು ಸಾಕುತ್ತಾರೆ. ಮುಂದೆ ಅವರು ಮುಂಬೈಗೆ ಬಂದು ಮಹೀಮ್ ನಗರದ ಒರಿಯೆಂಟ್ ಶಾಲೆಯಲ್ಲಿ ಓದುತ್ತಾರೆ. ಮುಂಬೈ ವಿವಿಯಿಂದ ವಿಜ್ಞಾನದಲ್ಲಿ ಎರಡು ಪದವಿ ಪಡೆಯುತ್ತಾರೆ. ನಂತರ ಸ್ವಲ್ಪ ದಿನ ‘ಮಾನವ್’ ಎಂಬ ಹೆಸರಿನ ಒಂದು ಮ್ಯಾಗಝೀನ್ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ. ಮುಂದೆ ಹೆಸರಾಂತ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಉನ್ನತ ಅಧಿಕಾರಿಯಾಗಿ ನೇಮಕ ಆಗುತ್ತಾರೆ. ಅದೇ ಸಂದರ್ಭದಲ್ಲಿ ‘ಇಂದ್ರಜಾಲ ಕಾಮಿಕ್ಸ್’ ಸರಣಿಯ ಎರಡು ಆಕರ್ಷಕವಾದ ಪುಸ್ತಕಗಳನ್ನು ಅವರು ಹೊರತರುತ್ತಾರೆ. ಅವುಗಳೆಂದರೆ ಫ್ಯಾಂಟಮ್ ಮತ್ತು ಮಾಂಡ್ರೆಕ್! ಅವುಗಳು ಭಾರೀ ಜನಪ್ರಿಯವಾಗಿ ಪೈ ಅವರಿಗೆ ತುಂಬಾನೆ ಹೆಸರು ಬಂತು. ಆಗ ಅವರ ಬದುಕಲ್ಲಿ………

ಒಂದು ಮೇಜರ್ ಟರ್ನಿಂಗ್ ಪಾಯಿಂಟ್ ಬಂದೇ ಬಿಟ್ಟಿತು !
1967ರ ಒಂದು ದಿನ ಸಂಜೆ ಅವರು ದೂರದರ್ಶನದಲ್ಲಿ ಒಂದು ರಸಪ್ರಶ್ನೆಯ ಕಾರ್ಯಕ್ರಮವನ್ನು ಆಸಕ್ತಿಯಿಂದ ವೀಕ್ಷಣೆ ಮಾಡುತಿದ್ದರು. ಪ್ರೌಢಶಾಲೆಯ ಹಲವು ಮಕ್ಕಳು ಭಾಗವಹಿಸಿದ್ದ ಕಾರ್ಯಕ್ರಮ ಅದು. ಆ ಮಕ್ಕಳು ಗ್ರೀಕ್ ಪುರಾಣಗಳ ಪ್ರಶ್ನೆಗಳು ಬಂದಾಗ ತಟ್ಟನೆ ಉತ್ತರವನ್ನು ಹೇಳುತ್ತಿದ್ದರು. ರಾಮಾಯಣ, ಮಹಾಭಾರತದ ಪ್ರಶ್ನೆಗಳು ಬಂದಾಗ ಬಹಳ ಕಷ್ಟ ಪಡುತ್ತಿದ್ದರು. ‘ರಾಮನ ತಾಯಿ ಯಾರು?’ ಎಂಬ ಪ್ರಶ್ನೆಗೆ ಅವರಿಂದ ಉತ್ತರ ಬರಲೇ ಇಲ್ಲ!
ಆಗ ಅನಂತ ಪೈ ಅವರಿಗೆ ತಾನು ಏನು ಮಾಡಬೇಕಾಗಿದೆ ಎಂದು ತಕ್ಷಣ ಅರ್ಥವಾಯಿತು! ಅವರು ಟೈಮ್ಸ್ ನೌಕರಿಗೆ ರಾಜೀನಾಮೆ ಕೊಟ್ಟು ಹೊರನಡೆದರು!

ಆರಂಭ ಆಗಿಯೇ ಬಿಟ್ಟಿತು ಅಮರ ಚಿತ್ರಕಥಾ!
ಭಾರತದ ಅತ್ಯಂತ ಶ್ರೀಮಂತವಾದ ಪುರಾಣ, ಇತಿಹಾಸ, ಜನಪದ, ಸಂಸ್ಕೃತಿಗಳ ಕಥೆಗಳನ್ನು ಅಕ್ಷರಗಳ ಮೂಲಕ ಹೇಳುವುದಕ್ಕಿಂತ ಬಣ್ಣದ ಚಿತ್ರಗಳ ಮೂಲಕ ಹೇಳಿದರೆ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಅವರಿಗೆ ಗೊತ್ತಿತ್ತು. ಅದನ್ನು ಆಧಾರವಾಗಿ ಅವರು ಆರಂಭ ಮಾಡಿದ ಕಥಾ ಸರಣಿಯೇ ‘ಅಮರ ಚಿತ್ರಕಥಾ! ‘

ಆದರೆ ಅದಕ್ಕೆ ಪ್ರಕಾಶಕರನ್ನು ಹುಡುಕುವುದು ಬಹಳ ಕಷ್ಟ ಆಯಿತು. ಯಾಕೆಂದರೆ ಭಾರತದಲ್ಲಿ ಅಂತಹ ಸರಣಿಯು ಅದುವರೆಗೆ ಜನಪ್ರಿಯ ಆಗಿರಲಿಲ್ಲ. (ಕನ್ನಡದಲ್ಲಿ 1965ರ ಹೊತ್ತಿಗೆ ಅನಂತರಾಮು ಎಂಬವರು ಹತ್ತು ಶೀರ್ಷಿಕೆಯ ಅಮರ ಚಿತ್ರಕಥಾ ಪುಸ್ತಕಗಳನ್ನು ಪ್ರಕಾಶನ ಮಾಡಿದ್ದರು ಎಂದು ದಾಖಲೆಗಳು ಹೇಳುತ್ತವೆ). ಅದನ್ನು ಸ್ಫೂರ್ತಿಯಾಗಿ ಆಗಿಟ್ಕೊಂಡು ಪೈಯವರು ಅದನ್ನು ಇನ್ನಷ್ಟು ಅದ್ಭುತವಾಗಿ ಮಾಡಲು ಹೊರಟರು.

ಜಿ. ಎಲ್. ಮೀರ್ಚಾಂದಾನಿ ಎಂಬ ಪ್ರಕಾಶಕರು ಅವರಿಗೆ ನೆರವು ನೀಡಲು ಮುಂದೆ ಬಂದರು. ಆರಂಭದಲ್ಲಿ ಸ್ವತಃ ಅಂಕಲ್ ಪೈಯವರು ಕಥೆ ಮತ್ತು ಚಿತ್ರ ಎರಡನ್ನು ಕೂಡ ಬರೆಯಬೇಕಾಯಿತು. ಮುಂದೆ ಇತರ ಲೇಖಕರನ್ನು ಮತ್ತು ಚಿತ್ರ ಕಲಾವಿದರನ್ನು ಒಳಗೊಂಡು ‘ರಂಗ ರೇಲಾ’ ಎಂಬ ಸಿಂಡಿಕೇಟನ್ನು ಅವರು ಸ್ಥಾಪಿಸಿದರು.

ಭಾರತೀಯ ಪುರಾಣಗಳಿಗೆ ತಾರಾ ಸ್ಪರ್ಶ
ಭಾರತದ ಅತೀ ಶ್ರೇಷ್ಠ ಸಾಂಸ್ಕೃತಿಕ ಅಸ್ಮಿತೆಗಳಾದ ರಾಮಾಯಣ, ಮಹಾಭಾರತ, ಭಾಗವತ, ಹನುಮಾನ್, ಕೃಷ್ಣನ ಬಾಲಲೀಲೆಗಳು, ಪಂಚತಂತ್ರದ ಕಥೆಗಳು, ಶಿವಾಜಿ, ರಾಣಾ ಪ್ರತಾಪ, ತುಳಸಿದಾಸ, ತಾನಸೇನ, ಏಸು ಕ್ರಿಸ್ತ…. ಮೊದಲಾದವರ ಕಥೆಗಳನ್ನು ಬಣ್ಣದ ಚಿತ್ರಗಳ ಮೂಲಕ ಹೇಳಿದರೆ ಮಕ್ಕಳ ಖುಷಿ ಹೇಗಿರಬಹುದು! ಊಹೆ ಮಾಡಿ.

ಅಮರ ಚಿತ್ರಕಥಾ ನಮ್ಮ ಭಾರತದಲ್ಲಿ ಬಹು ದೊಡ್ಡ ಕ್ರಾಂತಿ ಮಾಡಿತು. ತಿಂಗಳಿಗೆ ಒಂದು, ಕೆಲವೊಮ್ಮೆ ಎರಡು, ಇನ್ನೂ ಕೆಲವೊಮ್ಮೆ ಮೂರು ‘ಅಮರ ಚಿತ್ರಕಥಾ’ ಸಂಚಿಕೆಗಳು ಹೊರಬರುತ್ತಿದ್ದವು. 70-90ರ ದಶಕದಲ್ಲಿ ಪ್ರತೀ ತಿಂಗಳು ಸರಾಸರಿ 7,00,000ರಷ್ಟು ಆ ಪುಸ್ತಕಗಳು ಮಾರಾಟ ಆಗುತ್ತಿದ್ದವು. ಇದು ಐತಿಹಾಸಿಕ ದಾಖಲೆ!
ಇದುವರೆಗೆ ಒಟ್ಟು 469 ಶೀರ್ಷಿಕೆಗಳ ಅಮರ ಚಿತ್ರಕಥಾ ಪುಸ್ತಕಗಳು ಹೊರಬಂದಿದ್ದು ಒಟ್ಟು 86 ಮಿಲಿಯನ್ ಓದುಗರನ್ನು ತಲುಪಿವೆ! ಅಮರ ಚಿತ್ರಕಥಾ ಸರಣಿಯು ಇಂಗ್ಲಿಷ್, ಹಿಂದಿ ಮತ್ತು ಭಾರತದ ಎಲ್ಲ ಭಾಷೆಗಳಲ್ಲಿಯೂ ಬರುತ್ತಿತ್ತು. ಸರಣಿಯ ಲೇಖಕರು, ಸಂಪಾದಕರು ಮತ್ತು ಪ್ರಕಾಶಕರು ಎಲ್ಲವೂ ಆಗಿ ಅಂಕಲ್ ಪೈ ಭಾರೀ ದೊಡ್ಡ ಜನಪ್ರಿಯತೆ ಪಡೆದರು.

ಆದರೆ ತುಂಬಾ ಕ್ರಿಯಾಶೀಲರಾಗಿ ಯೋಚಿಸುವ ಅಂಕಲ್ ಪೈ ಅವರು ಸುಮ್ಮನೆ ಕೂರುವವರು ಅಲ್ಲವೇ ಅಲ್ಲವಲ್ಲ!

I am really astonished by the Creativity, Comic sense, Enthusiasm and Determination of Uncle Pai!

‘ಅಮರ ಚಿತ್ರಕಥಾ’ ಸರಣಿಯು ಜನಪ್ರಿಯತೆಯ ಶಿಖರದಲ್ಲಿ ಇದ್ದ ಸಂದರ್ಭದಲ್ಲಿಯೇ ಅವರು ಇನ್ನೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದರು.

TINKLE ಪತ್ರಿಕೆಯ ಆರಂಭ.
ಅವರು ಚಿಕ್ಕ ಮಕ್ಕಳು ಮತ್ತು ಹದಿಹರೆಯದ ಮಕ್ಕಳ ಮನೋವಿಕಾಸಕ್ಕಾಗಿ TINKLE BOOK ಎಂಬ ಪಾಕ್ಷಿಕ (Fort Night) ಪತ್ರಿಕೆಯನ್ನು ಆರಂಭ ಮಾಡಿದರು. ಚಿಕ್ಕ ಮಕ್ಕಳಿಗೆ ಇಷ್ಟವಾಗುವ ವಿಶೇಷ ಆಟಗಳ ಜೊತೆಗೆ ಪದಬಂಧ, ಸುಡೊಕು, ಕಾಲ್ಪನಿಕ ಕಥೆಗಳು, ಸಾಮಾನ್ಯ ಜ್ಞಾನ, ಕ್ವಿಜ್, ಮಾಯಾ ಚೌಕ, ಅತ್ಯಾಕರ್ಷಕ ಬಣ್ಣದ ಚಿತ್ರಗಳಿಂದ TINKLE ಪತ್ರಿಕೆಯ ಸಂಚಿಕೆಗಳು ಅತ್ಯಂತ ಶ್ರೀಮಂತವಾಗಿ ಹೊರಬಂದು ಮಕ್ಕಳ ಕೈ ಸೇರಿದವು.

ನನ್ನ ಬಾಲ್ಯ ಮತ್ತು ಯೌವ್ವನದ ದಿನಗಳಲ್ಲಿ ಒಂದು ಸಂಚಿಕೆ ಕೂಡ ಬಿಡದೆ ನಾನು ಓದಿ ಮುಗಿಸಿದ ಪುಸ್ತಕ ಎಂದರೆ ಈ TINKLE ! ಆ ಪುಸ್ತಕವು ಈಗಲೂ ಜನಪ್ರಿಯವಾಗಿದ್ದು ಮೂರು ಲಕ್ಷ ಓದುಗರನ್ನು ತಲುಪುತ್ತಿದೆ! ಇದುವರೆಗೆ 1000 ಸಂಚಿಕೆಗಳನ್ನು ಪೂರೈಸಿದೆ! ಇದು ಇನ್ನೊಂದು ಐತಿಹಾಸಿಕ ದಾಖಲೆ!

ಚಿಂಪು, ಕಪೀಶ, ರಾಮು ಮತ್ತು ಶಾಮು, ಲಿಟಲ್ ರಾಜಿ ಇತ್ಯಾದಿ…
ಮುಂದೆ ಭಾರತದ ಎಲ್ಲ ಭಾಷೆಗಳ ಪತ್ರಿಕೆಗಳಲ್ಲಿ ಚಿಂಪು ಕಾಮಿಕ್ಸ್, ರಾಮು ಮತ್ತು ಶಾಮು, ಕಪೀಶ, ಲಿಟಲ್ ರಾಜಿ, ಫ್ಯಾಕ್ಟ್ ಫ್ಯಾಕ್ಟರಿ….ಹೀಗೆ ನೂರಾರು ಕಾಮಿಕ್ಸ್ ಸರಣಿಯನ್ನು ಅವರು ಕ್ರಿಯೇಟ್ ಮಾಡಿದರು.ಇವುಗಳ ಒಂದಲ್ಲ ಒಂದು ಸರಣಿಯನ್ನು ನೀವು ಗಮನಿಸಿರುತ್ತೀರಿ ಎನ್ನುವುದು ನನ್ನ ನಂಬಿಕೆ.

ಅಂಕಲ್ ಪೈ ಅಂದರೆ ಅಷ್ಟೇ ಅಲ್ಲ!
ಇವುಗಳ ಜೊತೆಗೆ ಹಲವು ಶ್ರೇಷ್ಠ ವಿಕಸನದ ಪುಸ್ತಕಗಳು, ನೂರಾರು ವಿಡಿಯೋ ಫಿಲಂಗಳು, ಅನಿಮೇಟೆಡ್ ಫಿಲಂ ಮತ್ತು ಆಡಿಯೋ ಪುಸ್ತಕಗಳನ್ನು ಅವರು ಹೊರತಂದು ಮಕ್ಕಳ ಮನೋವಿಕಾಸಕ್ಕೆ ಅದ್ಭುತವಾದ ಕೊಡುಗೆಗಳನ್ನು ನೀಡಿದರು. 82 ವರ್ಷ ಬದುಕಿದ್ದ ಅಂಕಲ್ ಪೈ ಅವರು ನಿಧನರಾದಾಗ (2011) ಗೂಗಲ್ ಸಂಸ್ಥೆಯು ಕಾಮಿಕ್ಸ್ ಡೂಡಲ್ ಮೂಲಕ ಅವರಿಗೆ ಶ್ರದ್ಧಾಂಜಲಿ ನೀಡಿತು.

ಭರತ ವಾಕ್ಯ..
ತಮ್ಮ ಜೀವಿತಾವಧಿಯಲ್ಲಿ ಇಷ್ಟೊಂದು ಅದ್ಭುತವಾದ ಕೆಲಸಗಳನ್ನು ಮುಗಿಸಲು ಅವರಿಗೆ ಹೇಗೆ ಸಾಧ್ಯವಾಯಿತು ಎನ್ನುವುದು ನನಗೆ ಬಹಳ ಆಶ್ಚರ್ಯದ ಸಂಗತಿ!

1997ರಲ್ಲೀ ಡಾಕ್ಟರ್ ಟಿ. ಎಂ. ಎ. ಪೈ ಸಂಸ್ಮರಣಾ ಪ್ರಶಸ್ತಿ ಸ್ವೀಕರಿಸಲು ಅಂಕಲ್ ಪೈ ಮಾಮ್ ಅವರು ಮಣಿಪಾಲಕ್ಕೆ ಬಂದಿದ್ದರು. ಅಂದು ‘ಮಕ್ಕಳಿಗೆ ಇಷ್ಟೊಂದು ಪ್ರೀತಿಯನ್ನು ಕೊಡಲು ನಿಮಗೆ ಹೇಗೆ ಸರ್ ಸಾಧ್ಯವಾಯಿತು?’ ಎಂದು ಯಾರೋ ಪ್ರಶ್ನೆ ಮಾಡಿದಾಗ ಅವರು ಕೊಟ್ಟ ಉತ್ತರವು ಅತ್ಯಂತ ಮಾರ್ಮಿಕವಾಗಿತ್ತು. “ನನಗೆ ಮಕ್ಕಳಿರಲಿಲ್ಲ. ಆ ನೋವುಗಳೇ ನನ್ನಿಂದ ಇಷ್ಟೆಲ್ಲ ಕೆಲಸಗಳನ್ನು ಮಾಡಿಸಿತು”ಎಂದಿದ್ದರು!

‘ಅಂಕಲ್ ಪೈ’ ಅವರು ಭಾರತದ ಕಾಮಿಕ್ಸ್ ಪ್ರಪಂಚದ ನಿಜ ಧ್ರುವತಾರೆ ಎಂದು ನನಗೆ ಅನ್ನಿಸುತ್ತದೆ. ಅವರು ನಮ್ಮೂರು ಕಾರ್ಕಳದವರು ಎಂಬ ಹೆಮ್ಮೆಯು ನಮಗೆಲ್ಲರಿಗೂ ಇರಲಿ.































































































error: Content is protected !!
Scroll to Top