ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಿವೃತ್ತ ಯೋಧನಿಗೆ ಅವಮಾನ : ವ್ಯಾಪಕ ಆಕ್ರೋಶ

ಉಡುಪಿ : ಸಾಸ್ತಾನ ಟೋಲ್ ಪ್ಲಾಝಾದಲ್ಲಿ ರವಿವಾರ ರಾತ್ರಿ ನಿವೃತ್ತ ಯೋಧನಿಗೆ ಅವಮಾನ ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಯೋಧ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಸರಗೋಡು ಜಿಲ್ಲೆಯ ಶ್ಯಾಮರಾಜ್ ಇವಿ 21ನೇ ಪ್ಯಾರಾ ಸ್ಪೇಶಲ್ ಫೋರ್ಸ್‌ನ ಪ್ಯಾರಾಟ್ರೂಪರ್ ಆಗಿದ್ದು, ಇವರು ಸಾಸ್ತಾನದ ಟೋಲ್ ಮೂಲಕ ಸಾಗುತ್ತಿದ್ದರು. ಅವರಲ್ಲಿ ಟೋಲ್ ವಿನಾಯಿತಿ ಬಗ್ಗೆ ಪತ್ರವಿದ್ದರೂ, ಟೋಲ್ ವಿನಾಯಿತಿ ನೀಡುವುದಕ್ಕೆ ಟೋಲ್ ಪ್ಲಾಝಾ ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಶ್ಯಾಮರಾಜ್ ಅವರ ಪತ್ನಿ ಕೂಡ ಮಿಲಿಟರಿ ನರ್ಸಿಂಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಪೋಸ್ಟಿಂಗ್‌ಗಾಗಿ ಸಾಸ್ತಾನ ಮೂಲಕ ತೆರಳುತ್ತಿದ್ದರು.

ಈ ಬಗ್ಗೆ ಸ್ವತಃ ಶ್ಯಾಮರಾಜ್ ಅವರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ದೇಶದ ಎಲ್ಲಾ ಟೋಲ್‌ಗಳಲ್ಲಿ ವಿನಾಯಿತಿ ನೀಡಿದರೂ ಸಾಸ್ತಾನ ಟೋಲ್‌ನಲ್ಲಿ ವಿನಾಯಿತಿ ಪತ್ರವಿದ್ದರೂ ವಿನಾಯಿತಿ ನೀಡಿಲ್ಲ ಎಂದು ದೂರಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಶ್ಯಾಮರಾಜ್ ಆಪರೇಶನ್ ಪರಾಕ್ರಮ್ ವೇಳೆ ಉಗ್ರರ ವಿರುದ್ಧ ಜಯ ಸಾಧಿಸಿ ವಾಪಸ್ ಬರುತ್ತಿದ್ದ ವೇಳೆ ಇವರ ವಾಹನ ಲ್ಯಾಂಡ್ ಮೈನ್ಸ್ ಮೇಲೆ ಹರಿದ ಪರಿಣಾಮ, ಲ್ಯಾಂಡ್ ಮೈನ್ಸ್ ಸ್ಫೋಟಗೊಂಡಿದ್ದರಿಂದ ವಾಹನ ಜಖಂಗೊಂಡಿತ್ತು. ಈ ಘಟನೆಯಲ್ಲಿ 15 ಸೈನಿಕರು ಹುತಾತ್ಮರಾಗಿ, ಇಬ್ಬರು ಸೈನಿಕರು ಬದುಕುಳಿದಿದ್ದರು. ಬದುಕುಳಿದ ಸೈನಿಕರಲ್ಲಿ ಶ್ಯಾಮರಾಜ್ ಕೂಡ ಒಬ್ಬರು. 15 ದಿನಗಳ ಕಾಲ ಕೋಮಾದಲ್ಲಿ ನಂತರ ಯಥಾಸ್ಥಿತಿಗೆ ಬಂದರೂ ಬೆನ್ನುಹುರಿಗೆ ಗಂಭೀರ ಗಾಯವಾಗಿದ್ದರಿಂದ ಶ್ಯಾಮರಾಜ್ ಸಂಪೂರ್ಣ ವಿಕಲಾಂಗರಾಗಿದ್ದಾರೆ.





























































































error: Content is protected !!
Scroll to Top