ಫೆ. 19-21 : ಮುನಿಯಾಲಿನ ಗೋಧಾಮದಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲ

ಕಾರ್ಕಳ : ನಾಗನ ಆರಾಧನೆ ಅನಂತ ಕಾಲದಿಂದ ಬಂದಿದೆ. ನಾಗ ಸೇವೆಯಿಂದ ನೆಮ್ಮದಿ ಲಭಿಸುವುದರೊಂದಿಗೆ ಕಾರ್ಯಸಿದ್ಧಿಯಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು.
ಅವರು ಫೆ. 19ರಿಂದ 21ರವರೆಗೆ ಮುನಿಯಾಲು ಗೋಧಾಮದಲ್ಲಿ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲದ ಕಚೇರಿ ಉದ್ಘಾಟನೆ ಹಾಗೂ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ರಾಮಕೃಷ್ಣ ಆಚಾರ್ಯರು ಪ್ರಕೃತಿ, ವಿಜ್ಞಾನ, ಕೃಷಿ, ಮತ್ತು ಆಧ್ಯಾತ್ಮ ಎಲ್ಲವನ್ನು ಒಳಗೊಂಡಂತೆ ಅತ್ಯಂತ ವಿಶೇಷವಾಗಿ, ಅರ್ಥಪೂರ್ಣವಾಗಿ ನಾಗಮಂಡಲ ಆಯೋಜಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಆಶೀರ್ವದಿಸಿದರು.

ಪ್ರಕೃತಿ ಆರಾಧನೆ ಸಂದೇಶ
ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ರಾಮಕೃಷ್ಣ ಆಚಾರ್ಯರು ಉದ್ಯಮದಲ್ಲಿ ಯಶಸ್ಸು ಕಂಡು ಇದೀಗ ಸಾವಯವ ಕೃಷಿಯಲ್ಲಿ ನೆಮ್ಮದಿ ಕಾಣುತ್ತಿದ್ದಾರೆ. ಕೃಷಿ ಕಾರ್ಯಕ್ಕೆ ಉತ್ತೇಜನದೊಂದಿಗೆ ವಿದ್ಯಾರ್ಥಿಗಳು ಕೃಷಿ ಕ್ಷೇತ್ರದತ್ತ ಆಸಕ್ತಿ ಹೊಂದುವಂತೆ ಮಾಡುತ್ತಿದ್ದಾರೆ. ರೈತ ಪೀಠ ಪ್ರಶಸ್ತಿ ನೀಡುತ್ತಿದ್ದಾರೆ. ಇಲ್ಲಿ ನಡೆಯುವ ನಾಗಮಂಡಲದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.

ತಾಪಮಾನ ವೈಪರಿತ್ಯ
ಸಂಜೀವಿನಿ ಫಾರ್ಮ್ ಸಂಸ್ಥಾಪಕ ಡಾ.ಜಿ. ರಾಮಕೃಷ್ಣ ಆಚಾರ್ಯ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ನಾವೆಲ್ಲರು ಹಣದ ಹಿಂದೆ ಹೋಗುತ್ತಿದ್ದೇವೆ. ಪ್ರಕೃತಿ ನಾಶದಿಂದ ತಾಪಮಾನದಲ್ಲಿ ವೈಪರಿತ್ಯವಾಗುತ್ತಿದೆ. ಪೃಕೃತಿಯೇ ದೇವರು ಎಂಬುದನ್ನು ನಾವು ಮರೆಯಬಾರದು. ನಮ್ಮ ಮಕ್ಕಳಿಗೆ ಪೃಕೃತಿಯನ್ನು ಬೆಳೆಸುವ, ಆರಾಧಿಸುವ ಬಗ್ಗೆ ತಿಳಿ ಹೇಳಬೇಕು ಎಂದರು. ಪ್ರಕೃತಿ, ನಾಗನ ಆರಾಧನೆಯ ಭಾಗವಾಗಿ ಕೊರಂಗ್ರಪಾಡಿಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿಗಳ ಮಾರ್ಗದರ್ಶನದಲ್ಲಿ ಏಕಪವಿತ್ರ ನಾಗ ಮಂಡಲ ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.

ರಾಜೇಶ್ವರಿ ಕಾಲೇಜು ಸಂಚಾಲಕ, ಗಮಂಡಲೋತ್ಸವ ಸಮಿತಿ ಅಧ್ಯಕ್ಷ ಸಾಣೂರುಗುತ್ತು ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ಆದ್ಯಾತ್ಮ ಸಂಕಲ್ಪದೊಂದಿಗೆ ಕೃಷಿ ಪೂರಕ ಯೋಜನೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಡೀ ಸಮಾಜ ಒಗ್ಗೂಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ವೇದಿಕೆಯಲ್ಲಿ ಶ್ರೀಮತಿ ಸವಿತಾ ರಾಮಕೃಷ್ಣ ಆಚಾರ್, ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಶೆಟ್ಟಿ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್ ಉಪಸ್ಥಿತರಿದ್ದರು. ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿ, ಪುರೋಹಿತ್ ದಾಮೋದರ ಶರ್ಮಾ ನಿರೂಪಿಸಿದರು.





























































































error: Content is protected !!
Scroll to Top