ಕಾರ್ಕಳ ನಗರದಲ್ಲಿ ಬೀದಿ ನಾಯಿಗಳ ಆಟ – ಕಾಟ : ಸಾರ್ವಜನಿಕರಿಗೆ ಸಂಕಷ್ಟ

ಕಾರ್ಕಳ : ನಾಯಿ ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕುರಿತು ವರದಿಯಾಗುತ್ತಿದೆ. ಕಾರ್ಕಳ ನಗರದ ವಿವಿಧೆಡೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ. ಹಿಂಡು ಹಿಂಡಾಗಿ ನಾಯಿಗಳು ಅಡ್ಡಾದಿಡ್ಡಿ ಓಡಾಡುತ್ತಿರುವುದರಿಂದ ಪಾದಚಾರಿಗಳು, ದ್ವಿಚಕ್ರ ಸವಾರರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ನಾಯಿಗಳ ಕಾಟ, ಉಪಟಳದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ದ್ವಿಚಕ್ರ ಸವಾರರನ್ನು ಬೀದಿನಾಯಿಗಳು ಅಟ್ಟಿಸಿ ಸಾಗುತ್ತಿದೆ. ಹಲವು ಬಾರಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾದ ನಿದರ್ಶನಗಳಿವೆ. ಮಾತ್ರವಲ್ಲದೇ ನಾಯಿ ಕಡಿತ ಪ್ರಕರಣಗಳು ವಿಪರೀತವಾಗಿದೆ.

ವಿದ್ಯಾರ್ಥಿಗಳಲ್ಲಿ ಆತಂಕ
ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗುವಾಗ ನಾಯಿಗಳ ಗುಂಪು ಒಂದಕ್ಕೊಂದು ಕಚ್ಚಾಡುತ್ತಾ ಶರವೇಗದಿಂದ ಓಡಿ ಬರುತ್ತವೆ. ಇದರಿಂದ ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಓಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅನೇಕ ಮಂದಿ ವಿದ್ಯಾರ್ಥಿಗಳಿಗೆ ಬೀದಿನಾಯಿಗಳು ಕಚ್ಚಿರುತ್ತದೆ. ಹುಚ್ಚು ನಾಯಿಗಳು ಆಕ್ರಮಣ ಮಾಡಿದಲ್ಲಿ ಅದರ ಪರಿಣಾಮ ಗಂಭೀರವಾಗಿರಲಿದೆ. ಇನ್ನು ರಸ್ತೆಯುದ್ದಕ್ಕೂ ಬೀದಿ ನಾಯಿಗಳದ್ದೆ ಕಾಟವಿರುವುದರಿಂದ ಕೆಲ ಅಂಗಡಿಗಳಿಗೂ ಜನ ಬರಲು ಹಿಂದೇಟು ಹಾಕುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲೂ ಚರ್ಚೆ
ಬೀದಿ ನಾಯಿ ಕಡಿತ ಕುರಿತು ಸುಪ್ರೀಂ ಕೋರ್ಟ್‌ನಲ್ಲೂ ಭಾರಿ ಚರ್ಚೆಯಾಗಿದೆ. ಕೋರ್ಟ್‌ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಈ ಕುರಿತು ಎಚ್ಚರಿಕೆಯನ್ನೂ ನೀಡಿದೆ.

2025ರ ಒಂದೇ ವರ್ಷದಲ್ಲಿ ಕಾರ್ಕಳ ತಾಲೂಕಿನಲ್ಲಿ 800 ಮಂದಿ ನಾಯಿ ಕಡಿತಕ್ಕೊಳಗಾಗಿದ್ದಾರೆ. ಮುಖ್ಯವಾಗಿ ಹೆಣ್ಣು ನಾಯಿ ಮರಿಗಳನ್ನು ಸಾಕದೇ ಬೀದಿಗೆ ಬಿಡುವುದು ಹಾಗೂ ಫಾಸ್ಟ್‌ ಫುಡ್‌ ಅಂಗಡಿಗಳಿಂದ ಆಹಾರ ದೊರೆಯುವಂತಾಗುವುದು ಬೀದಿ ನಾಯಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಇಂಜೆಕ್ಷನ್‌ ಹಾಕಿಸಿಕೊಳ್ಳಿ
ನಾಯಿ ಕಚ್ಚಿದಾಗ ಅದನ್ನು ನಿರ್ಲಕ್ಷ್ಯಿಸದೇ ತಕ್ಷಣವೇ ಅಗತ್ಯ ಚಿಕಿತ್ಸೆ ಪಡೆಯಬೇಕು. ಬೀದಿ ನಾಯಿ ಇರಲಿ, ಸಾಕು ನಾಯಿಯೇ ಆಗಿರಲಿ, ಕಚ್ಚಿದರೆ ಚುಚ್ಚುಮದ್ದು ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಸಾಕು ನಾಯಿ ಕಚ್ಚಿದ್ದು, ತೊಂದರೆ ಇಲ್ಲ ಎಂದು ಭಾವಿಸಲೇಬಾರದು. ಏಕೆಂದರೆ, ಒಂದು ವೇಳೆ ಆ ನಾಯಿಗೆ ಯಾವುದಾದರೂ ಹುಚ್ಚು ನಾಯಿ ಕಚ್ಚಿದಲ್ಲಿ ಪರಿಸ್ಥಿತಿ ಏನಾಗಬಹುದು ?

ನಾಯಿ ಕಚ್ಚಿದ ಕೂಡಲೇ ಇಂಜೆಕ್ಷನ್‌ ತೆಗೆದುಕೊಳ್ಳುವುದು ಅತಿ ಅಗತ್ಯ. ಆ್ಯಂಟಿ ರೇಬಿಸ್‌ ಇಂಜೆಕ್ಷನ್‌ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಭ್ಯ. ನಾಯಿ ಕಚ್ಚಿದ ಸಮಯದಲ್ಲಿ ಮೊದಲ ಇಂಜೆಕ್ಷನ್‌ ತೆಗೆದುಕೊಂಡರೆ ಆ ಬಳಿಕ ನಾಲ್ಕು ಇಂಜೆಕ್ಷನ್‌ (3,7,14 ಹಾಗೂ 28 ದಿನಗಳಿಗೆ) ತೆಗೆದುಕೊಳ್ಳಬೇಕು. ಒಂದು ವೇಳೆ ಕಚ್ಚಿದ ನಾಯಿಯ ಆರೋಗ್ಯ ಸ್ಥಿತಿ ತಿಳಿಯದೇ ಹೋಗಿದ್ದರೆ ಅಂದರೆ ಆ ನಾಯಿ ಪತ್ತೆಯಾಗದಿದ್ದರೆ 60 ಹಾಗೂ 90ನೇ ದಿನ ಕೂಡ ಚುಚ್ಚುಮದ್ದು ಪಡೆಯಬೇಕು. ಕೆಲವೊಂದು ಸಮಯದಲ್ಲಿ ಕಚ್ಚಿದ ಗಾಯ ತೀವ್ರವಾಗಿದ್ದರೆ ಆ್ಯಂಟಿ ರೇಬಿಸ್‌ ಜತೆಗೆ ಹೀಮಿನೋಗ್ಲೋಬಿನ್ಸ್‌ ಇಂಜೆಕ್ಷನ್‌ನ್ನು ಗಾಯದ ಜಾಗದಲ್ಲಿ ನೀಡುವ ಮೂಲಕ ವೈರಸ್‌ ತಡೆಗಟ್ಟಬಹುದು.

ನಾಯಿ ಮಾತ್ರವಲ್ಲ ಯಾವುದೇ ಪ್ರಾಣಿಗಳು ಕಚ್ಚಿದಲ್ಲಿ ಅಥವಾ ಪರಚಿದಲ್ಲಿ ಅವಶ್ಯವಾಗಿ ಇಂಜೆಕ್ಷನ್‌ ಹಾಕಿಸಿಕೊಳ್ಳಲೇಬೇಕು. ಏಕೆಂದರೆ ರೇಬಿಸ್‌ ಕೇವಲ ನಾಯಿಯಿಂದ ಮಾತ್ರವಲ್ಲ ಇತರೇ ಯಾವುದೇ ಪ್ರಾಣಿಗಳಿಂದಲೂ ಹರಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಸುತ್ತಿದ್ದೇವೆ.
ಶಶಿಕಲಾ
ಆಡಳಿತ ವೈದ್ಯಾಧಿಕಾರಿ, ಸರಕಾರಿ ಆಸ್ಪತ್ರೆ ಕಾರ್ಕಳ

ರಾಜ್ಯ ಸರಕಾರಕ್ಕೆ ಭಾರಿ ದಂಡ- ಸುಪ್ರೀಂಕೋರ್ಟ್ ಎಚ್ಚರಿಕೆ
ಸರ್ವೋಚ್ಛ ನ್ಯಾಯಾಲಯವು ಇತ್ತೀಚೆಗೆ ಬೀದಿ ನಾಯಿಗಳ ಪ್ರಕರಣದ ವಿಚಾರಣೆ ನಡೆಸುವಾಗ ಪ್ರತಿ ನಾಯಿ ಕಡಿತ ಮತ್ತು ಪ್ರತಿ ಸಾವಿಗೆ ರಾಜ್ಯಗಳಿಗೆ ಭಾರೀ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ನಾಯಿಗಳಿಗೆ ಆಹಾರ ನೀಡುವವರನ್ನೂ ಸಹ ಜೀವಮಾನ ಪೂರ್ತಿ ಪರಿಣಾಮ ಬೀರುವಂತಹ ದಾಳಿಗಳಿಗೆ ಹೊಣೆಗಾರರನ್ನಾಗಿ ಮಾಡುವುದಾಗಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ನಾಯಿ ಕಡಿತದಿಂದ ಪ್ರಾಣ ಕಳೆದುಕೊಂಡ ಪ್ರತಿ ವ್ಯಕ್ತಿಗೆ ಪರಿಹಾರ ನೀಡಬೇಕೆಂದು ಅಭಿಪ್ರಾಯಪಟ್ಟಿದೆ.

ಆಶ್ರಯ ತಾಣದ ಆಸರೆ
ಸುಪ್ರೀಂ ಕೋರ್ಟ್‌ ಆದೇಶದಂತೆ ತಾಲೂಕಿನ ಪುರಸಭಾ ವ್ಯಾಪ್ತಿ ಹಾಗೂ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಾಯಿಗಳ ಆಶ್ರಯ ತಾಣ ನಿರ್ಮಾಣಕ್ಕೆ ಜಾಗ ಕಾಯ್ದಿರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಪ್ರದೀಪ್‌ ಆರ್.
ತಹಶೀಲ್ದಾರರು, ಕಾರ್ಕಳ

ಪುರಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ತಡೆಯುವುದಕ್ಕಾಗಿ ಅವುಗಳನ್ನು ಕೂಡಿ ಹಾಕಲು ಆಶ್ರಯ ತಾಣಗಳ ನಿರ್ಮಾಣಕ್ಕೆ ಎರಡೂವರೆ ಎಕರೆ ಜಾಗ ಕಾಯ್ದಿರಿಸುವಂತೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಲೀನಾ ಬ್ರಿಟ್ಟೋ
ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ

ವರದಿ : ನಳಿನಿ ಎಸ್‌. ಸುವರ್ಣ

















































error: Content is protected !!
Scroll to Top