ಆಗ ಆಟಕ್ಕೆ ಮೂರು, ಲೆಕ್ಕಕ್ಕೆ ಎರಡು ಪಕ್ಷ ಎಂಬ ಗೊಂದಲ ನಿವಾರಣೆ – ಡಿಕೆಶಿ
ಬೆಂಗಳೂರು : ಕುಮಾರಸ್ವಾಮಿ ಅವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನವಾಗುವ ಸಾಧ್ಯತೆ ಇದೆ. ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ 2 ಪಕ್ಷ ಎಂಬ ಗೊಂದಲ ಇರುವುದಿಲ್ಲ ಎಂದು ಡಿಸಿಎಂ ಡಿಕೆಶಿ ವ್ಯಂಗ್ಯವಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜ್ ಅವರ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದರು. ರಾಜಕೀಯದಲ್ಲಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚಿನ ಅನುಭವ ಇದೆ. ನಾನು ಸಿಎಂ ಆಗದೇ ಇರಬಹುದು. ಆದರೆ ಆಡಳಿತ ವಿಚಾರದಲ್ಲಿ ಅವರಿಗಿಂತ ಅನುಭವ ಹೊಂದಿದ್ದೇನೆ. ಡಳಿತ ಹೇಗೆ ಮಾಡಬೇಕು? ಯಾರ ಜೊತೆ ಸಭೆ ಮಾಡಬೇಕು? ಮಾಡಬಾರದು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅವರಿಂದ ಕಲಿಯುವ ಅಗತ್ಯ ನನಗಿಲ್ಲ ಎಂದು ತಿರುಗೇಟು ನೀಡಿದರು.

ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಗೋವಿಂದರಾಜ್ ಹಾಗೂ ಅವರ ಧರ್ಮಪತ್ನಿ ಗೌರಮ್ಮ, ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಸೇರಿದಂತೆ ನೂರಾರು ಮುಖಂಡರನ್ನ ಸ್ವಾಗತಿಸುತ್ತೇನೆ. ಗೋವಿಂದರಾಜು ಅವರು ಕುಟುಂಬ ಸ್ನೇಹಿತರು, ನನಗೆ ಮೊದಲಿನಿಂದಲೂ ಪರಿಚಯಸ್ಥರು. ಅವರು ಜೆಡಿಎಸ್ ಪಕ್ಷ ಸಂಘಟಿಸಿ ಅಭ್ಯರ್ಥಿಯೂ ಆಗಿದ್ದರು. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ಮಾಡಿಕೊಂಡಿರುವ ಹೊಂದಾಣಿಕೆ ಒಪ್ಪಿಕೊಳ್ಳಲು ಸಾಧ್ಯವಾಗದೇ ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದರು.
ನಮ್ಮದು ಜಾತ್ಯಾತೀತ ಸಿದ್ಧಾಂತ. ಹೀಗಾಗಿ ಜಮೀರ್ ಅಹ್ಮದ್ ಖಾನ್ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಳ್ಳಲು ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಬಿಜೆಪಿ, ಜೆಡಿಎಸ್ ಬೇಗ ವಿಲೀನವಾದಷ್ಟೂ ನಮಗೇ ಒಳ್ಳೆಯದು. ಅವರು ಬೇಗ ತೀರ್ಮಾನ ಮಾಡಿದರೆ ನಾವು ನಮ್ಮ ತೀರ್ಮಾನ ಮಾಡಿಕೊಳ್ಳಬಹುದು. ಈಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರೇ ಹೇಳುತ್ತಿದ್ದಾರೆ ಎಂದರು.
















































