ಕಾರ್ಕಳ : ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಭಾಗವಾಗಿ ಆರೋಗ್ಯ ಸೇವೆಗಳನ್ನು ಗ್ರಾಮೀಣ ಭಾಗಗಳ ಜನರಿಗೆ ತಲುಪಿಸುವ ಕೊಂಡಿಯಾಗಿ ಆಶಾ ಕಾರ್ಯರ್ತೆಯರು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸರಕಾರ ವೇತನವನ್ನು ನೀಡುತ್ತಿದ್ದು ಅಲ್ಪ ಸಮಯದ ವಿಳಂಬ ಆಗುವುದು ಸಾಮಾನ್ಯ. ಸಹಜ ಪ್ರಕ್ರಿಯೆಯಂತೆ ಆಶಾ ಕಾರ್ಯಕರ್ತರಿಗೆ ಈ ಬಾರಿಯೂ ಸರಕಾರ ವೇತನ ನೀಡಿರುತ್ತದೆ. ಇದರಲ್ಲಿ ಕಾರ್ಕಳ ಶಾಸಕರ ಯಾವುದೇ ಪಾತ್ರ ಇಲ್ಲ. ಇದೊಂದು ನೌಕರರಿಗೆ ವೇತನ ನೀಡುವ ಸರಕಾರದ ಸಹಜ ಪ್ರಕ್ರಿಯೆ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಬಾಸ್ಕರ್ ಪೂಜಾರಿ ಹೇಳಿದ್ದಾರೆ.
ದೇಶದ ಗ್ರಾಮೀಣ ಭಾಗದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಡಾ. ಮನಮೋಹನ ಸಿಂಗ್ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಆಶಾ ಕಾರ್ಯಕರ್ತರು ಎನ್ನುವ ಹುದ್ದೆಯನ್ನು ಹುಟ್ಟು ಹಾಕಿ ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಕೊಡುಗೆ ನೀಡಿದೆ. ಪ್ರಾಮಾಣಿಕವಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ಪುರಸ್ಕರಿಸಿ ಮಾನ್ಯ ಮುಖ್ಯಮಂತ್ರಿಗಳು ಈ ಹಿಂದೆಯೇ ವೇತನವನ್ನು ಹೆಚ್ಚಳ ಮಾಡಿರುವುದು ಗಮನಾರ್ಹ. ಆದರೆ, ಕಾಂಗ್ರೆಸ್ ಸರ್ಕಾರಗಳಿಗೆ ಇರುವಂತಹ ದೂರದೃಷ್ಟಿ ಚಿಂತನೆಗಳು, ಮಹಿಳಾ ಮತ್ತು ಮಕ್ಕಳ ಪರವಾದ ಯೋಜನೆ ಸೇರಿದಂತೆ ಮುಂತಾದ ಯಾವುದೇ ಜನಪರ ಕಲ್ಪನೆಯೂ ಇಲ್ಲದ ಕಾರ್ಕಳ ಶಾಸಕರು ಕೇವಲ ಪ್ರಚಾರಕ್ಕಾಗಿ ಆಶಾ ಕಾರ್ಯಕರ್ತೆಯರನ್ನು ತನ್ನ ಕಚೇರಿಗೆ ಕರೆಸಿಕೊಂಡು ಫೋಟೋ ಶೂಟ್ ಮಾಡಿಸಿ ನಾನೇ ಸಂಬಳ ಬಿಡುಗಡೆ ಮಾಡಿಸಿದೆ ಎಂದು ಪ್ರಚಾರ ಪಡೆಯುತ್ತಿರುವುದು ಅವರ ಪ್ರಚಾರದ ಹಪಾಪಿಯನ್ನು ಸೂಚಿಸುತ್ತದೆ ಮತ್ತು ಇದು ತೀರಾ ಹಾಸ್ಯಾಸ್ಪದವಾಗಿದೆ ಎಂದು ಭಾನು ಭಾಸ್ಕರ್ ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರ ವೇತನವು ಕೇವಲ ಕಾರ್ಕಳ ತಾಲೂಕಿಗೆ ಮಾತ್ರ ಬಿಡುಗಡೆಯಾಗಿದ್ದಲ್ಲ. ಉಡುಪಿ ಜಿಲ್ಲೆ ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ವೇತನವನ್ನು ಬಿಡುಗಡೆ ಮಾಡಿದೆ. ಹಾಗಾದರೆ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆಗೆ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಕಾರಣರಾಗುತ್ತಾರೆಯೆ ? ಅವರೇನು ಈ ರಾಜ್ಯದ ಮುಖ್ಯಮಂತ್ರಿಯೆ? ಅಥವಾ ಹಣಕಾಸು ಮಂತ್ರಿಯೆ ? ಎಂದು ಭಾನು ಭಾಸ್ಕರ್ ಪ್ರಶ್ನಿಸಿದ್ದಾರೆ.

ಬಡ ಅಮಾಯಕ ಮುಗ್ಧ ಆಶಾ ಕಾರ್ಯಕರ್ತೆಯರ ಮುಂದೆ ಈ ರೀತಿ ಸುಳ್ಳು ಹೇಳಿ ಪ್ರಚಾರ ಪಡೆಯಲು ಯತ್ನಿಸುವ ಸುನಿಲ್ ಕುಮಾರ್ ಅವರಿಗೆ ಇದು ಶೋಭೆ ತರುವುದಿಲ್ಲ. ಸರ್ಕಾರ ಯಾರನ್ನೂ ಕೂಡ ಬಿಟ್ಟಿಯಾಗಿ ದುಡಿಸಿಕೊಳ್ಳುವುದಿಲ್ಲ, ಕಾಲ ಕಾಲಕ್ಕೆ ಅನುಗುಣವಾಗಿ ಅವರಿಗೆ ವೇತನವನ್ನು ನೀಡುತ್ತದೆ. ವೇತನ ನೀಡದಿದ್ದರೆ ಸರ್ಕಾರದ ಆಡಳಿತ ಯಂತ್ರ ನಡೆಯಲು ಸಾಧ್ಯವಿಲ್ಲ. ಎಲ್ಲದರಲ್ಲೂ ಪ್ರಚಾರ ಪಡೆಯಲು ಹವಣಿಸುವ, ಅಮಾಯಕರನ್ನು ಕಚೇರಿಗೆ ಕರೆಸಿ ಫೋಟೊ ಶೂಟ್ ಮಾಡಿಸುವ ಶಾಸಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಭಾನು ಬಾಸ್ಕರ್ ಪೂಜಾರಿ ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.























































































