ಕಾರ್ಕಳವನ್ನು ಪ್ರೀತಿಸುವವನು ಕಾರ್ಕಳದ ಪ್ರವಾಸೋದ್ಯಮವನ್ನು ಬೆಳೆಸುತ್ತಾನೆಯೇ ಹೊರತು ತನ್ನ ರಾಜಕೀಯದ ಚಟಕ್ಕಾಗಿ ಬಲಿ ಕೊಡುವುದಿಲ್ಲ

ಕಾರ್ಕಳ : ಕಾರ್ಕಳದ ಪ್ರವಾಸೋದ್ಯಮಕ್ಕೆ ಕಿರೀಟ ಪ್ರಾಯವಾಗಬೇಕಾಗಿದ್ದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗಿದ್ದ ಪರಶುರಾಮ ಥೀಮ್ ಪಾರ್ಕ್ ಇವತ್ತಿಗೆ ನಿರ್ಜನ ಪ್ರದೇಶವಾಗಿ ಬದಲಾಗಿದ್ದು ಕಳ್ಳಕಾಕರ, ಅನೈತಿಕ ಚಟುವಟಿಕೆಗಳ ತಾಣವಾಗುವ ಭೀತಿ ಸೃಷ್ಟಿಯಾಗಿದೆ. ಕಾರ್ಕಳದ ನಕಲಿ ಕಾಂಗ್ರೆಸ್ಸಿಗರ ಷಡ್ಯಂತ್ರದಿಂದ ಹಾಗೂ ಅವರ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿಯ ಕುಕೃತ್ಯದಿಂದ ಪರಶುರಾಮ ಥೀಮ್ ಪಾರ್ಕ್ ಈ ಸ್ಥಿತಿಗೆ ಬಂದಿರುವುದು ಕಾರ್ಕಳ ಜನತೆಗೆ ಗೊತ್ತಿರುವಂತಹ ಸತ್ಯ ಸಂಗತಿ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್‌ ಶೆಟ್ಟಿ ಕುಕ್ಕುಂದೂರು ತಿಳಿಸಿದ್ದಾರೆ.

ಮಾನ್ಯ ಉದಯ ಶೆಟ್ಟಿಯವರೇ ಒಂದು ಯೋಜನೆಯನ್ನು ಹಳ್ಳ ಹಿಡಿಸುವುದು ಸಾಧನೆಯಲ್ಲ ಹಾಗೂ ಇದು ರಾಜಕಾರಣಿಗೆ ಶೋಭೆಯೂ ತರುವುದಿಲ್ಲ. ಕಾರ್ಕಳಕ್ಕೆ ಹೊಸ ಯೋಜನೆಯನ್ನು ತಂದು ಪ್ರವಾಸೋದ್ಯಮವನ್ನು ಬೆಳೆಸಿ ಕಾರ್ಕಳದ ಹೆಸರನ್ನು ಬೆಳಗಿಸುತ್ತಿದ್ದರೆ ಅದೊಂದು ಸಾಧನೆ ಎಂದಿರುವ ರಾಕೇಶ್‌ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಇಂತಹ ಮತ್ತೊಂದು ಯೋಜನೆಯನ್ನು ಕಾರ್ಕಳಕ್ಕೆ ತಂದು ಪರಶುರಾಮ ಥೀಮ್ ಪಾರ್ಕಿಗಿಂತಲೂ ಮಿಗಿಲಾದ ವಿಜ್ರಂಭಣೆಯ ಕಾರ್ಯಕ್ರಮವನ್ನು ಆಯೋಜಿಸಲಿ. ಇದೆಲ್ಲವನ್ನೂ ಬಿಟ್ಟು ಕಾರ್ಕಳದ ಜನರಿಗೆ ಅನುಕೂಲಕರವಾಗಬೇಕಾಗಿದ್ದ ಯೋಜನೆಯನ್ನು ಕಾರ್ಕಳದ ಕೀರ್ತಿಯನ್ನು ಎತ್ತಿ ಹಿಡಿಯುವಂತಹ ಕ್ಷೇತ್ರವನ್ನು ಷಡ್ಯಂತ್ರದ ಮೂಲಕ ಬರಡು ಭೂಮಿಯಯಾಗಿ ಪರಿವರ್ತಿಸಿ ಈಗ ತಮ್ಮ ತಪ್ಪು ಅರಿವಾದಾಗ ರಾಜಕೀಯದ ಸಭ್ಯತೆ ಮೀರಿ ಅಸಂಬದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಕಾರ್ಕಳವನ್ನು ಪ್ರೀತಿಸುವವನು ಕಾರ್ಕಳದ ಪ್ರವಾಸೋದ್ಯಮವನ್ನು ಬೆಳೆಸುತ್ತಾನೆಯೇ ಹೊರತು ತನ್ನ ರಾಜಕೀಯದ ಚಟಕ್ಕೆ ಪ್ರವಾಸೋದ್ಯಮವನ್ನು ಬಲಿಕೊಡುವುದಲ್ಲ. ಮುನಿಯಾಲು ಉದಯ ಶೆಟ್ಟಿಯವರೇ ನಿಮ್ಮ ರಾಜಕೀಯ ಹಪಾಹಪಿಗೆ ಕಾರ್ಕಳದ ಅಭಿವೃದ್ಧಿಗೆ ಕಲ್ಲು ಹಾಕಬೇಡಿ. ಸಾಧ್ಯವಾದರೇ ಜನರಿಗೆ ಉಪಯೋಗವಾಗುವ ಕೆಲಸ ಮಾಡಿ. ಆಗದಿದ್ದರೆ ಆ ಕೆಲಸ ಮಾಡುವವರಿಗೆ ಅಡ್ಡಕಾಲು ಹಾಕಬೇಡಿ ಎಂದು ರಾಕೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









error: Content is protected !!
Scroll to Top