ಕಾರ್ಕಳ : ಕರ್ನಾಟಕ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ವಿಭಾಗ ಉಡುಪಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರಕಾರಿ ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್, ಇಂಡಿಯನ್ ರೆಡ್ ಕ್ರಾಸ್ ಸೊಸೖಟಿ ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಹಾಗೂ ಎನ್.ಸಿ.ಸಿ, ಎನ್.ಎಸ್.ಎಸ್., ರೆಡ್ ಕ್ರಾಸ್, ರೋವರ್ಸ್ ರೇಂಜರ್ಸ್‌ನ ಸಹಯೋಗದೊಂದಿಗೆ ಡಿ.4ರಂದು ವಿಶ್ವ ಏಡ್ಸ್ ದಿನಾಚರಣೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆ ಅಧ್ಯಕ್ಷ ಕೆ. ಆರ್. ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಏಡ್ಸ್ ಹರಡುವಿಕೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ, ಏಡ್ಸ್ ಕಾಯಿಲೆಯು ಅಸುರಕ್ಷತಾ ವಿಧಾನದಿಂದ ಹರಡುತ್ತದೆ. ನಮ್ಮ ನಿರ್ಲಕ್ಷ್ಯವೇ ಈ ಅಪಾಯಕ್ಕೆ ಕಾರಣವಾಗಿರುತ್ತದೆ. ಸರಕಾರ ಇದಕ್ಕೆ ಸಂಬಂಧಪಟ್ಟಂತೆ ಅನೇಕ ರೀತಿಯ ಮುಂಜಾಗ್ರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದ ಅವರು ಯುವ ಸಮಾಜ ಜಾಗರೂಕರಾಗಿರುವುದೇ ಇದಕ್ಕೆ ಪರಿಹಾರ ಎಂದು ಹೇಳಿದರು.
ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್. ಮಾತನಾಡಿ, ಮನುಷ್ಯನು ಅಂಗಾಂಗ ದಾನ ಮಾಡುವ ಮೂಲಕ ತನ್ನ ಬದುಕನ್ನು ಸಾರ್ಥಕವಾಗಿಸಬಹುದು. ಈ ನಿಟ್ಟಿನಲ್ಲಿ ಆರೋಗ್ಯಯುತವಾದ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಮಾತನಾಡಿ, ಯುವಜನಾಂಗ ತಪ್ಪು ದಾರಿಯತ್ತ ಹೆಜ್ಜೆಯಿಡದಿರಲು ಇಂತಹ ಕಾರ್ಯಕ್ರಮಗಳು ಸಹಕಾರಿ. ವಿದ್ಯಾರ್ಥಿಗಳು ಕಾರ್ಯಕ್ರಮದ ಹಿಂದಿರುವ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್ ಮಾತನಾಡಿ, ಏಡ್ಸ್‌ನಿಂದ ಬದುಕು ದುಸ್ತರವಾಗುತ್ತದೆ. ಅಂತಿಮ ಹಂತವಾಗಿ ಸಾವು ಸಂಭವಿಸುತ್ತದೆ. ಇದರಿಂದ ಪಾರಾಗುವ ಬದಲಿಗೆ ಬರದಂತೆ ತಡೆಗಟ್ಟುವುದೇ ಇದಕ್ಕಿರುವ ದಾರಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಿಶಾ ದಿವಾಕರ್ ಏಡ್ಸ್ ಕುರಿತಾಗಿ ಸವಿಸ್ತಾರವಾದ ಮಾಹಿತಿ ನೀಡಿದರು.
ಕಾರ್ಕಳ ತಾಲೂಕಿನ ಸೀನಿಯರ್ ಹೆಲ್ತ್ ಆಫೀಸರ್ ವಸಂತ ಶೆಟ್ಟಿ ಸ್ವಾಗತಿಸಿದರು. ಕಾರ್ಕಳ ತಾಲೂಕು ಹೆಲ್ತ್ ಎಜುಕೇಟೆಡ್ ಆಫೀಸರ್ ಸುಶೀಲ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶಂಕರ್ ಕುಡ್ವ ವಂದಿಸಿದರು.














































