ಬೆಂಗಳೂರು : ಕಲಬುರಗಿಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದಾರೆ. ಮಹಾಂತೇಶ್ ಬೀಳಗಿ ನಿನ್ನೆ ಕುಟುಂಬಸ್ಥರ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಲಬರುಗಿಯ ಜೇವರ್ಗಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದೀಗ ಅವರ ಮೃತದೇಹವನ್ನು ಕಲಬುರಗಿಯಿಂದ ಬೆಳಗಾವಿಯ ರಾಮದುರ್ಗಕ್ಕೆ ತಲುಪಿಸಲಾಗಿದ್ದು, ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ದಕ್ಷ ಐಎಎಸ್ ಅಧಿಕಾರಿ ಎಂದೇ ಖ್ಯಾತಿ ಹೊಂದಿದ್ದ ಮಹಾಂತೇಶ್ ಬೀಳಗಿ ಬಡತನದ ನಡುವೆಯೂ ಅಧ್ಯಯನದ ಬಗ್ಗೆ ಇದ್ದ ಅಗಾಧ ಆಸಕ್ತಿಯ ಬಗ್ಗೆ ಪಿಯುಸಿ ಮತ್ತು ಡಿಗ್ರಿಯಲ್ಲಿ ಬೀಳಗಿ ಅವರೊಂದಿಗೆ ಓದಿದ್ದ ಸ್ನೇಹಿತರು ವಿವರಿಸಿದ್ದಾರೆ. ಆರಂಭದಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದರೂ, 10ನೇ ತರಗತಿಯ ನಂತರ ಓದಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ನಂತರದ ದಿನಗಳಲ್ಲಿ ಪ್ರತಿ ತರಗತಿಯಲ್ಲೂ ಪ್ರಥಮ ರ್ಯಾಂಕ್ ಗಳಿಸಿ ಎಲ್ಲರ ಗಮನ ಸೆಳೆದರು. ಬಸವೇಶ್ವರ ಕಾಲೇಜಿನಲ್ಲಿ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಅವರು, ಸಿ ಎಸ್ ಬೆಂಬಳಗಿ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು ಎಂದು ಸ್ನೇಹಿತರು ನೆನಪಿಸಿಕೊಂಡಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಮಹಾಂತೇಶ್
ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರು ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದರು. ಧಾರವಾಡದಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿಸಿದ್ದರು. ಇಷ್ಟೆಲ್ಲಾ ಉನ್ನತ ಹುದ್ದೆಯಲ್ಲಿದ್ದರೂ, ಮಹಾಂತೇಶ್ ಬೀಳಗಿ ಅವರು ರಾಮದುರ್ಗದ ತಮ್ಮ ಸ್ನೇಹಿತರನ್ನು ಎಂದಿಗೂ ಮರೆಯಲಿಲ್ಲ. ಅವರನ್ನು ಹೆಸರಿನಿಂದಲೇ ಕರೆದು, ಯಾವುದೇ ಔಪಚಾರಿಕತೆ ತೋರದೆ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರೊಂದಿಗೆ ಬೀದಿಗಳಲ್ಲಿ ಚಹಾ ಕುಡಿಯುತ್ತಾ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು ಎಂದು ಮತ್ತೊಬ್ಬರು ಸ್ನೇಹಿತ ನೆನಪಿಸಿಕೊಂಡಿದ್ದಾರೆ.






































