ಸಂವಿಧಾನದಿಂದ ಸಾಮರಸ್ಯದ ಜೀವನ – ಕೊಂಡಳ್ಳಿ ಪ್ರಭಾಕರ್ ಶೆಟ್ಟಿ
ಕಾರ್ಕಳ : ಜಗತ್ತಿನ ಬೇರೆ ಬೇರೆ ಸಂವಿಧಾನಗಳನ್ನು ಕ್ರೋಡೀಕರಿಸಿ ನಮ್ಮ ದೇಶಕ್ಕೆ ಒಗ್ಗುವಂತಹ ಬೃಹತ್ ಸಂವಿಧಾನವನ್ನು ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿದ್ದಾರೆ. ವಿವಿಧತೆಯಲ್ಲಿ ಏಕತೆಯುಳ್ಳ ಭಾರತದ ಅಖಂಡತೆಯನ್ನು ಕಾಪಾಡುವಲ್ಲಿ ಸಂವಿಧಾನದ ಪಾತ್ರ ಮಹತ್ತರ. ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಂವಿಧಾನವನ್ನು ಗೌರವಿಸೋಣ ಎಂದು ತಹಶೀಲ್ದಾರ್ ಪ್ರದೀಪ್ ಆರ್. ಹೇಳಿದರು.
ಅವರು ಕಾರ್ಕಳ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಂಘಟನೆಯ ಸಹಯೋಗದಲ್ಲಿ ನ. 26ರಂದು ತಾ. ಪಂ. ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.

ಸಂವಿಧಾನ ದಿನಾಚರಣೆ ಕುರಿತು ಉಪನ್ಯಾಸ ನೀಡಿದ ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಇಂದು ಭಾರತೀಯರೆಲ್ಲರೂ ಸಾಮರಸ್ಯದ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಪ್ರಮುಖ ಕಾರಣ ಭಾರತೀಯ ಸಂವಿಧಾನ. ಸಂವಿಧಾನ ರಚನೆಯ ಹಿನ್ನೆಲೆ, ಅದಕ್ಕಾಗಿ ಅಂಬೇಡ್ಕರ್ ಅವರು ಪಟ್ಟ ಶ್ರಮವನ್ನು ಅರ್ಥೈಸಿಕೊಂಡಾಗ ಮಾತ್ರ ಸಂವಿಧಾನದ ಮಹತ್ವತೆ ತಿಳಿಯುತ್ತದೆ ಎಂದ ಅವರು ಭಾರತೀಯತೆಕ್ಕಿಂತ ಮಿಗಿಲಾದ ಧರ್ಮ, ಸಂವಿಧಾನಕ್ಕಿಂತ ಶ್ರೇಷ್ಠ ಗ್ರಂಥ ಬೇರೊಂದಿಲ್ಲ. ಇಂತಹ ಸಂವಿಧಾನವನ್ನು ಗೌರವಿಸುವುದು ಮತ್ತು ಅದರಲ್ಲಿ ಉಲ್ಲೇಖಿಸಿರುವ ಬಹುವಿಧದ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಜಾಥಾ
ಸಭಾ ಕಾರ್ಯಕ್ರಮಕ್ಕೂ ಮೊದಲು ಬಂಡೀಮಠ ಬಸ್ ನಿಲ್ದಾಣದಿಂದ ಅಂಬೇಡ್ಕರ್ ಸರ್ಕಲ್ ಆಗಿ ತಾಲೂಕು ಕಚೇರಿ ಮುಂಭಾಗದಿಂದ ಸಾಗಿ ಸರ್ವಜ್ಞ ಸರ್ಕಲ್ ಮೂಲಕ ತಾ.ಪಂ.ವರೆಗೆ ಸಂವಿಧಾನ ಜಾಗೃತಿ ಜಾಥಾ ನಡೆಯಿತು.

ವೇದಿಕೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಎಂ.ವಿ., ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉಪಸ್ಥಿತರಿದ್ದರು. ವಿವಿಧ ಇಲಾಖಾ ಅಧಿಕಾರಿಗಳು, ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬಿ. ನಾಯ್ಕ ಸಂವಿಧಾನ ಪೀಠಿಕೆ ವಾಚಿಸಿ, ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕಿ ಚೇತನಾ ವಿಜಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





































