ಲಕ್ನೋ : ಶ್ರೀರಾಮನಗರಿ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸರಯೂ ನದಿಯ ತಟದಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಅಯೋಧ್ಯೆಯ ಪವಿತ್ರ ಸರಯು ನದಿಯ ತೀರದಲ್ಲಿ 26,11,101 ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ.
ರಾಮ ಕಿ ಪೌಡಿ ಸೇರಿದಂತೆ 56 ಘಾಟ್‌ಗಳಲ್ಲಿ ದೀಪಗಳು ಪ್ರಜ್ವಲಿಸಿವೆ. 2017ರಲ್ಲಿ ಈ ಉತ್ಸವ ಆರಂಭವಾದಾಗ ಕೇವಲ 1.71 ಲಕ್ಷ ದೀಪಗಳನ್ನು ಬೆಳಗಿಸಲಾಗಿತ್ತು. ಕಳೆದ ವರ್ಷ 25.12 ಲಕ್ಷ ದೀಪಗಳನ್ನ ಹಚ್ಚಲಾಗಿತ್ತು.

ಅಯೋಧ್ಯೆಯಲ್ಲಿ ದೀಪೋತ್ಸವ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ದೀಪಗಳು ಮತ್ತು ಮೇಣದ ಬತ್ತಿಗಳಿಗಾಗಿ ಯೋಗಿ ಸರ್ಕಾರದ ವೆಚ್ಚವನ್ನು ಪ್ರಶ್ನಿಸಿದ್ದಾರೆ. ಆಯೋಧ್ಯೆ ದೀಪೋತ್ಸವಕ್ಕಾಗಿ ಪ್ರತಿ ವರ್ಷ ಖರ್ಚು ಮಾಡುತ್ತಿದ್ದಾರೆ. ದೀಪೋತ್ಸವಕ್ಕೆ ಹಣತೆ ಖರ್ಚು ಯಾಕೆ? ನೀವು ಕ್ರೈಸ್ತರ ಕ್ರಿಸ್ಮಸ್ ಆಚರಣೆ ನೋಡಿ, ಅವರು ಕ್ರಿಸ್ಮಸ್ ವೇಳೆ ಒಂದು ತಿಂಗಳು ಎಲ್ಲಾ ನಗರಗಳನ್ನು ಲೈಟ್ ಮೂಲಕ ಸಿಂಗರಿಸುತ್ತಾರೆ. ನೀವು ಹಣತೆ ಖರೀದಿಸುತ್ತಾ ಖರ್ಚು ಮಾಡುತ್ತಿದ್ದೀರಿ ಎಂದು ಅಖಿಲೇಶ್ ಯಾದವ್ ವಿವಾದಿತ ಹೇಳಿಕೆ ನೀಡಿದ್ದಾರೆ.

ಅಖಿಲೇಶ್ ಹೇಳಿಕೆಯನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ತೀವ್ರವಾಗಿ ಟೀಕಿಸಿವೆ. ವ್ಯಾಟಿಕನ್ ಸಿಟಿಗೆ ಹೋಗಿ ಕ್ರಿಸ್‌ಮಸ್ ಆಚರಿಸಿ ಎಂದು ವಿಎಚ್‌ಪಿ ಹೇಳಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ, ವರ್ಷಗಳ ಕಾಲ ಅಯೋಧ್ಯೆಯನ್ನು ಕತ್ತಲಲ್ಲಿ ಇರಿಸಿದ ಮತ್ತು ರಾಮ ಭಕ್ತರ ಮೇಲೆ ದಾಳಿ ಮಾಡಿದ್ದಕ್ಕೆ ಹೆಮ್ಮೆ ಪಟ್ಟ ಪಕ್ಷವು ಈಗ ದೀಪೋತ್ಸವಕ್ಕಾಗಿ ನಗರದ ಅಲಂಕಾರವನ್ನು ವಿರೋಧಿಸುತ್ತಿದೆ ಎಂದಿದ್ದಾರೆ.






























