ದಾಖಲೆ ಇದ್ದಲ್ಲಿ 45 ದಿನದೊಳಗೆ ಮತ್ತೆ ಬಿಪಿಎಲ್ ಪಡೆಯಲು ಅವಕಾಶ
ಬೆಂಗಳೂರು : ಅನರ್ಹ ಬಿಪಿಎಲ್ ಕಾರ್ಡ್ಗಳ ರದ್ದತಿ ಪ್ರಕ್ರಿಯೆ ಮಧ್ಯೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಎಪಿಎಲ್ಗೆ ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ನೀಡಿದೆ.
45 ದಿನಗಳೊಳಗೆ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರ ಆಹಾರ ಇಲಾಖೆಗೆ ಗಡುವು ನೀಡಿದೆ. ಎಪಿಎಲ್ಗೆ ಬದಲಾದವರಲ್ಲಿ ಪೂರಕ ದಾಖಲೆ ಇದ್ದರೆ ಮತ್ತೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಒಂದು ಕಡೆ ಅನರ್ಹ ಬಿಪಿಎಲ್ ಕಾರ್ಡ್ದಾರರನ್ನು ಪತ್ತೆ ಮಾಡಿ ಎಪಿಎಲ್ ಕಾರ್ಡ್ ನೀಡಲು ಆಹಾರ ಇಲಾಖೆ ಮುಂದಾಗಿದೆ. ಇನ್ನೊಂದು ಕಡೆ ಅರ್ಹ ಬಿಪಿಎಲ್ ಕಾರ್ಡ್ದಾರರು ಎಪಿಎಲ್ಗೆ ಬದಲಾಗಿದ್ದರೆ ಅಂಥವರಿಗೆ ನ್ಯಾಯ ಕೊಡಲು ಮುಂದಾಗಿದೆ.

7,76,206 ಪಡಿತರ ಚೀಟಿಗಳು ರಾಜ್ಯದಲ್ಲಿ ಅನರ್ಹವೆಂದು ಕೇಂದ್ರ ಸರ್ಕಾರ ಗುರುತು ಮಾಡಿದೆ. ಆದರೆ, ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳಿವೆ. ಇಂತಹ ಅನರ್ಹ ಚೀಟಿಗಳನ್ನು ಬಿಪಿಎಲ್ ಬದಲಿಗೆ ಎಪಿಎಲ್ ಆಗಿ ಪರಿವರ್ತಿಸುವ ಕೆಲಸ ನಡೆಯುತ್ತದೆ. ಇದರ ಮಧ್ಯೆ ಒಂದು ವೇಳೆ ಅರ್ಹರ ಕಾರ್ಡ್ ಎಪಿಎಲ್ಗೆ ಬದಲಾಗಿದ್ದಲ್ಲಿ ಅಂಥವರು 45 ದಿನದೊಳಗೆ ಅಗತ್ಯ ದಾಖಲೆ ಸಹಿತ ತಹಶೀಲ್ದಾರ್ಗೆ ಮನವಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಿ ಅರ್ಹರಿದ್ದಲ್ಲಿ ಅಂಥವರಿಗೆ ಬಿಪಿಎಲ್ ಕಾರ್ಡ್ ನೀಡಲು ಸರಕಾರ ಸೂಚನೆ ಕೊಟ್ಟಿದೆ.
ಹೊಸದಾಗಿ ಪಡಿತರ ಚೀಟಿಗೆ ಈಗಾಗಲೇ 2.96 ಲಕ್ಷ ಅರ್ಜಿ ಸಲ್ಲಿಕೆ ಆಗಿವೆ. ಈ ಅರ್ಜಿಗಳ ವಿಲೇವಾರಿ ಮಾಡುವವರೆಗೆ ಬಿಪಿಎಲ್ಗೆ ಹೊಸದಾಗಿ ಅರ್ಜಿ ಆಹ್ವಾನಿಸಬಾರದು ಎಂದು ಸರಕಾರ ನಿರ್ದೇಶಿಸಿದೆ. ಸದ್ಯದಲ್ಲೇ ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆಗೂ ಕ್ರಮದ ಭರವಸೆ ಕೊಡಲಾಗಿದೆ.





































