ಬೆಂಗಳೂರು : ಅಕ್ಷರ ಮಾಂತ್ರಿಕ ಎಸ್.ಎಲ್. ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರವೀಂದ್ರ ಕಲಾಮಂದಿರದಲ್ಲಿಂದು ಎಸ್.ಎಸ್ ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೈರಪ್ಪ ಅವರು ಹೆಚ್ಚು ಸಮಯ ಮೈಸೂರಿನಲ್ಲಿಯೇ ಇದ್ದರು. ಮೈಸೂರು ಅವರ ನೆಚ್ಚಿನ ಸ್ಥಳ. ಹೀಗಾಗಿ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಿಸಲಾಗುವುದು ಎಂದರು.
ಭೈರಪ್ಪನವರ ಕೆಲವು ಕೃತಿಗಳನ್ನು ನಾನು ಓದಿದ್ದೇನೆ. ನನ್ನ ನೆಚ್ಚಿನ ಬರಹಗಾರರು ಅವರು, ಅವರ ಕಾದಂಬರಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡದ ಯಾವ ಸಾಹಿತಿಯ ಯಾವ ಕೃತಿಗಳೂ ಇಷ್ಟು ಭಾಷೆಗೆ ಅನುವಾದಗೊಂಡಿಲ್ಲ. ಅವರಿಗೆ ಸರಸ್ವತಿ ಸಮ್ಮಾನ್, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಬಂದಿದ್ದವು. ಜ್ಞಾನಪೀಠ ಪ್ರಶಸ್ತಿಯೂ ಬರಬೇಕಿತ್ತು, ಅದಕ್ಕೆ ಅವರು ಅರ್ಹರಾಗಿದ್ದರು ಎಂದು ಅಭಿಪ್ರಾಯಪಟ್ಟರು.

ನಿನ್ನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸ್ವಾಸ್ಥ್ಯದಿಂದ ನಿಧನರಾದ ಭೈರಪ್ಪನವರ ಪಾರ್ಥಿವ ಶರೀರವನ್ನು ಇಂದು ಮುಂಜಾನೆ 8 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ 2 ಗಂಟೆಯವರೆಗೆ ಇಲ್ಲಿ ಅಂತಿಮ ದರ್ಶನ ಇರಲಿದ್ದು, ಬಳಿಕ ಭೈರಪ್ಪನವರ ಕಾಯಕದ ಕ್ಷೇತ್ರವಾದ ಮೈಸೂರಿಗೆ ಸಾಗಿಸಲಾಗುತ್ತದೆ. ಇಂದು ಸಂಜೆ ಹಾಗೂ ನಾಳೆ ಮೈಸೂರಿನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಇರಲಿದ್ದು, ನಾಳೆ ಮೈಸೂರು ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಎಲ್. ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಲಿದೆ.
























