ಕಾರ್ಕಳ : ಕಾಂಗ್ರೆಸ್ ಸರಕಾರ ವಿಶೇಷವಾಗಿ ಬಡವರು, ದೀನ ದಲಿತರು, ಯುವಕರು ಮತ್ತು ಮಹಿಳೆಯರಿಗಾಗಿ ಯೋಜನೆ ರೂಪಿಸುತ್ತದೆ. ಈ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಬಿಜೆಪಿಯವರು ಎಷ್ಟೇ ತಿಪ್ಪರ್ ಲಾಗ ಹಾಕಿದರೂ ನಾವು ಪಂಚ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಅವರು ಮಂಜುನಾಥ ಪೈ ಸಭಾಂಗಣದಲ್ಲಿ ಸೆ. 12ರಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಹಾಗೂ ಅದಾಲತ್ನ್ನು ಉದ್ಘಾಟಿಸಿ ಮಾತನಾಡಿದರು.

ಗೃಹಲಕ್ಷ್ಮೀ ಯೋಜನೆಯ ಮೂಲಕ 1 ಕೋಟಿ 24 ಲಕ್ಷ ಕುಟುಂಬಗಳ ಸೇವೆ ಮಾಡುವ ಅವಕಾಶ ನನಗೆ ಒದಗಿ ಬಂದಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ 79 ವರ್ಷಗಳಲ್ಲಿ ಜನಸಾಮಾನ್ಯರ ಪರವಾಗಿ ಕೆಲಸ ಮಾಡಿರುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಉಳುವವನೇ ಭೂಮಿಯ ಒಡೆಯ ಯೋಜನೆ ಮೂಲಕ ಜನರ ಜೀವನ ಸುಧಾರಣೆ, ದೇಶದ ತಾಂತ್ರಿಕ ಪ್ರಗತಿ, ಅಂಗನವಾಡಿ ಮೂಲಕ ಬಡ ಮಕ್ಕಳ ಆರೈಕೆ, ವೈಜ್ಞಾನಿಕ ಕ್ರಾಂತಿ, ಮಹಿಳಾ ಮೀಸಲಾತಿ, ಉದ್ಯೋಗ ಖಾತರಿ ಹೀಗೆ ನಮ್ಮ ಸರಕಾರ ತಮ್ಮ ಅಧಿಕಾರವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿ ಮಾಡುತ್ತಲೇ ಬಂದಿದೆ. ತನ್ಮೂಲಕ ಇಡೀ ವಿಶ್ವವೇ ನಮ್ಮ ದೇಶವನ್ನು ನೋಡುವಂತೆ ಮಾಡಿದೆ ಎಂದ ಅವರು ಬೇರೆಯವರನ್ನು ದೂರಲು ಹೋಗುವುದಿಲ್ಲ ಆದರೆ ನಮ್ಮ ಕೆಲಸದ ಬಗ್ಗೆ ನಮಗೆ ಹೆಮ್ಮೆಯಿದೆ ಎಂದರು.

ಶೀಘ್ರದಲ್ಲೇ ಹಣ ಬಿಡುಗಡೆ
ಕೆಲವೊಂದು ತಾಂತ್ರಿಕ ದೋಷದಿಂದ ಸುಮಾರು 2 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮೀ ಸೌಲಭ್ಯ ಸಿಗುತ್ತಿರಲಿಲ್ಲ. ಇದರಲ್ಲಿ ಈಗಾಗಲೇ 50 ಸಾವಿರ ಮಹಿಳೆಯರ ತಾಂತ್ರಿಕ ಸಮಸ್ಯೆ ನಿವಾರಿಸಲಾಗಿದೆ. ಮುಂದಿನ ತಿಂಗಳಿಂದ ಅವರಿಗೆ ಗೃಹಲಕ್ಷ್ಮೀ ಯೋಜನೆ ಸಿಗುತ್ತದೆ. ಇನ್ನೂ ಉಳಿದ ಒಂದೂವರೆ ಲಕ್ಷ ಮಹಿಳೆಯರ ತಾಂತ್ರಿಕ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಉದಯ್ ಶೆಟ್ಟಿ ಮುನಿಯಾಲು ಮಾತನಾಡಿ, ಮಹಿಳಾ ಶಕ್ತಿ ಪ್ರಧಾನವಾದ ದೇಶ ಭದ್ರವಾಗಿರುತ್ತದೆ. ಈ ನಿಟ್ಟಿನಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು. ಇದರಿಂದ ಮಹಿಳೆಯರ ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಿದೆ. ಗ್ಯಾರಂಟಿ ಯೋಜನೆಯಿಂದ ಜನರು ಸಂತೃಪ್ತರಾಗಿದ್ದು, ಸರಕಾರದ ಬಗ್ಗೆ ಧನ್ಯತಾ ಭಾವನೆಯಲ್ಲಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ರಾಜ್ಯ ಸರಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆ ಪ್ರತಿಯೋರ್ವನಿಗೂ ತಲುಪಿಸಬೇಕೆಂದು ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ಪ್ರಾರಂಭಿಸಿದ್ದು, ಈ ನಿಟ್ಟಿನಲ್ಲಿ ಕಾರ್ಕಳದಲ್ಲಿ ಸಮಿತಿ ಅರ್ಹ ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಾರ್ಕಳದಲ್ಲಿ 36,495 – ಗೃಹ ಲಕ್ಷ್ಮೀ, 36,676 – ಗೃಹ ಜ್ಯೋತಿ, 31,076 – ಅನ್ನಭಾಗ್ಯ ಮತ್ತು 532 ಮಂದಿ ಯುವ ನಿಧಿಯ ಫಲಾನುಭವಿಗಳಿದ್ದು, 222 ಕೋಟಿ 75 ಲಕ್ಷ 35 ಸಾವಿರ ರೂ. ಅನುದಾನ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಉಷಾ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಎಂ. ವಿ., ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ ಸೇರಿದಂತೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ಪ್ರದೀಪ್ ಆರ್. ಸ್ವಾಗತಿಸಿದರು. ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು.








































