ಕಾರ್ಕಳ : ಎಳ್ಳಾರೆ ಗ್ರಾಮದ ಮುಳ್ಕಾಡು ಎಂಬಲ್ಲಿ ಸೆ. 9ರಂದು ಮನೆಯಂಗದಲ್ಲಿ ಕುಳಿತಿದ್ದ ಕುಮುದಾ ಶೆಟ್ಟಿ (80) ಎಂಬವರಿಗೆ ಯಾರೋ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ 1,75,000 ರೂ. ಮೌಲ್ಯದ 25 ಗ್ರಾಂ ತೂಕದ ರೋಪ್ ಚೈನ್ ಅನ್ನು ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷಾ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್ ಅವರ ನೇತೃತ್ವದಲ್ಲಿ ರಚನೆಯಾದ ತನಿಖಾ ತಂಡ ಪ್ರಕರಣದ ಬೆನ್ನಟ್ಟಿ ಕಳ್ಳ ಬೆಳಗಾವಿ ಜಿಲ್ಲೆಯ ಸುನೀಲ್ ರಮೇಶ್ ಲಮಾಣಿಯನ್ನು ಸೆ. 12ರಂದು ಕುಕ್ಕುಂದೂರು ಗ್ರಾಮದ ಜೋಡುರಸ್ತೆಯಲ್ಲಿ ವಶಕ್ಕೆ ಪಡೆದು, ಆತನಲ್ಲಿದ್ದ 2,00,000 ರೂ. ಮೌಲ್ಯದ 4.20 ಗ್ರಾಂ ಮತ್ತು 18.80 ಗ್ರಾಂ ತೂಕದ 2 ತುಂಡಾದ ರೋಪ್ ಚೈನ್, ಕೃತ್ಯಕ್ಕೆ ಬಳಸಿದ್ದ KA-20-ED-5326 ಮೋಟಾರ್ ಸೈಕಲ್ ಮತ್ತು ಮೊಬೈಲ್ನ್ನು ಸ್ವಾದೀನಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಜೆಕಾರು ಪೊಲೀಸ್ ಠಾಣಾ ಪಿ.ಎಸ್.ಐ ಮಹೇಶ್ ಟಿ.ಎಂ, ಸಿಬ್ಬಂದಿ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಕೆ., ಪಡುಬಿದ್ರೆ ಠಾಣಾ ಸಿಬ್ಬಂದಿ ಕೃಷ್ಣ ಪ್ರಸಾದ, ಸಹಾಯಕ ಪೊಲೀಸ್ ಅಧೀಕ್ಷಕರ ಕಛೇರಿಯ ಶಿವಾನಂದ, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿಯ ವಿಶ್ವನಾಥ ಮತ್ತು ಶಶಿಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ತಾಂತ್ರಿಕ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ಪಾಲ್ಗೊಂಡಿದ್ದರು. ಆರೋಪಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ಅಭಿನಂದಿಸಿದ್ದಾರೆ.








































