ನೀರೆ ಮಾದರಿ ಗ್ರಾಮ ಪಂಚಾಯತ್ – ಕೋಟ
ಕರಾವಳಿ ಜಿಲ್ಲೆಗಳಿಗಾಗಿ ಪ್ರತ್ಯೇಕ ನಿಯಮ ರೂಪಿಸಿ – ಸುನಿಲ್ ಕುಮಾರ್
ಉಡುಪಿ : ಕರಾವಳಿ ಭಾಗದಲ್ಲಿ ಸಮಸ್ಯೆಯಾಗಿರುವ 9/11 ಕುರಿತಾದ ತೊಡಕನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅವರು ಸೆ. 12ರಂದು ನೂತನವಾಗಿ ನಿರ್ಮಾಣಗೊಂಡಿರುವ ನೀರೆ ಗ್ರಾ. ಪಂ. ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಈ ಬಾರಿಯ ಮಳೆಯ ಅವಾಂತರಕ್ಕೆ ಕರಾವಳಿಯ ರಸ್ತೆಗಳು ತೀರ ಹದಗೆಟ್ಟಿದೆ. ರಸ್ತೆ ದುರಸ್ತಿಗಾಗಿ ಶಾಸಕರಿಗೆ 25 ಕೋಟಿ ರೂ. ಅನುದಾನ ಸರಕಾರದಿಂದ ದೊರೆಯಲಿದೆ. ರಸ್ತೆಯ ಗುಂಡಿ ಮುಚ್ಚುವ ಕಾರ್ಯದೊಂದಿಗೆ ರಸ್ತೆ ಅಭಿವೃದ್ಧಿಗಾಗಿ ಈ ಅನುದಾನವನ್ನು ಶಾಸಕರು ಬಳಕೆ ಮಾಡಬಹುದಾಗಿದೆ ಎಂದರು.
ಅಭಿಮಾನವಿದೆ
ಉಡುಪಿ ಜನತೆ ಹೃದಯ ವೈಶಾಲ್ಯತೆ ಹೊಂದಿದವರು. ಇಲ್ಲಿನ ಜನತೆಯ ಚಿಂತನೆ ಬಗ್ಗೆ ಹೆಮ್ಮೆಯಿದೆ. ಉಡುಪಿ ಬಗ್ಗೆ ನನಗೆ ಬಹಳ ಅಭಿಮಾನವಿದೆ ಎಂದರು.
ನೀರೆ ಗ್ರಾಮ ಪಂಚಾಯತ್ ಕಟ್ಟಡ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ. ನೂತನ ಕಟ್ಟಡದ ಮೂಲಕ ಜನತೆಗೆ ಉತ್ತಮ ಸೇವೆ ಒದಗಿಸುವಂತಾಗಲಿ ಎಂದ ಸಚಿವರು ಗ್ರಾ.ಪಂ. ಮಟ್ಟದಿಂದಲೇ ಭ್ರಷ್ಟಾಚಾರವನ್ನು ಕಿತ್ತೊಗೆದು ವಿಧಾನ ಮಂಡಲದವರೆಗೆ ಹರಡಿರುವ ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು. ಈ ಮೂಲಕ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕೆಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನಪರ ನಿಲುವನ್ನು ಹೊಂದಿದ್ದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಸಾಕಾರಗೊಳ್ಳಲು ಸಾಧ್ಯ. ನಿಷ್ಠೆ, ಶ್ರದ್ಧೆ, ನಂಬಿಕೆ, ಪ್ರಾಮಾಣಿಕತೆಯಿದ್ದಾಗ ಮಾತ್ರ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳಾಗಲಿದೆ. ನೀರೆ ಗ್ರಾಮ ಪಂಚಾಯತ್ ರಾಜ್ಯದಲ್ಲೇ ಮಾದರಿ ಗ್ರಾ.ಪಂ. ಆಗಿ ಮೂಡಿಬಂದಿದೆ ಎಂದು ಹೇಳಿದರು.
ಮತ್ತೆ ಪಂಚಾಯತ್ ಅಧಿಕಾರಕ್ಕೆ ನೀಡಿ
ಗ್ರಾ.ಪಂ. ನಲ್ಲಿನ 9/11 ಅಧಿಕಾರವನ್ನು ಜಿಲ್ಲಾ ಯೋಜನಾ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲಾಗಿದ್ದು, ಇದರಿಂದ ಜನರಿಗೆ ತುಂಬಾನೆ ಸಮಸ್ಯೆಯಾಗಿದೆ. ಈ ಅಧಿಕಾರವನ್ನು ಮತ್ತೆ ಪಂಚಾಯತ್‌ಗೆ ನೀಡಬೇಕಾಗಿದೆ. ಈ ಮುಖಾಂತರ ಪಂಚಾಯತ್‌ನ ಶಕ್ತಿ ಮತ್ತಷ್ಟು ಬಲಗೊಳ್ಳುವಂತೆ ಮಾಡಬೇಕಿದೆ ಎಂದು ಕೋಟ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್, ಜನ ಸಾಮಾನ್ಯರು ಸರಕಾರ ಸೌಲಭ್ಯ ಮತ್ತು ತಮ್ಮ ಸಮಸ್ಯೆ ತೋಡಿಕೊಂಡು ಪಂಚಾಯತ್‌ಗೆ ಬಂದಾಗ ಪರಿಹಾರ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾ. ಪಂ.ಗಳು ಕಾರ್ಯನಿರ್ವಹಿಸಬೇಕೆಂದರು. ದಾನಿಗಳು, ಜನತೆಯ ಸಹಕಾರದಿಂದಲೇ ಕರಾವಳಿಯ ಜಿಲ್ಲೆಯ ಗ್ರಾಮಗಳು ಅಭಿವೃದ್ಧಿಪಥದಲ್ಲಿ ಸಾಗಿದೆ ಎಂದರು.
ಪ್ರತ್ಯೇಕ ನಿಯಮ ರೂಪಿಸಿ
ಬೆಂಗಳೂರನ್ನು ಕೇಂದ್ರವನ್ನಾಗಿಟ್ಟುಕೊಂಡು ರೂಪಿಸಿದ 9/11 ಸಮಸ್ಯೆ ನಿವಾರಣೆಯಾಗದ ಹೊರತು ನಮ್ಮ ಭಾಗದ ಜನತೆ ಮನೆ ಕಟ್ಟಿಕೊಳ್ಳದಂತಾಗಿದೆ. ಹೀಗಾಗಿ ಕರಾವಳಿಯ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ನಿಯಮ ರೂಪಿಸುವ ಅಗತ್ಯವಿದೆ. ಉಡುಪಿ, ದ.ಕ. ಜಿಲ್ಲೆಯಲ್ಲಿನ ಕೆಂಪು ಕಲ್ಲು, ಮರಳಿನ ವಿಚಾರದಲ್ಲಿ ಕಾನೂನನ್ನು ಸರಳೀಕರಣಗೊಳಿಸುವುದು ಹೆಚ್ಚು ಸೂಕ್ತ. ಅತಿಯಾದ ಮಳೆಯಿಂದಾಗಿ ರಸ್ತೆಗಳು ಹಾನಿಗೀಡಾಗಿದ್ದು, ರಸ್ತೆ ದುರಸ್ತಿಗೆ ಅನುದಾನ ಬರುತ್ತಿಲ್ಲ. ಕನಿಷ್ಠ ಪಕ್ಷ ರಸ್ತೆಯ ಗುಂಡಿ ಮುಚ್ಚಲಾದರೂ ಅನುದಾನ ಕೊಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸುನಿಲ್ ಕುಮಾರ್ ಮನವಿ ಮಾಡಿಕೊಂಡರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ನೀರೆ ಪಂಚಾಯತ್ ಹಾಗೂ ಪಂಚಾಯತ್ ಅಧ್ಯಕ್ಷರ ಕಾರ್ಯವನ್ನು ಕೊಂಡಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾ. ಪಂ. ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ, ಜನತೆಗೆ ಸರಕಾರದ ಸೌಲಭ್ಯಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸುವ ನಿಟ್ಟಿನಲ್ಲಿ ಸದೃಢ ಗ್ರಾಮ ಪಂಚಾಯತ್ ಕಟ್ಟಡದ ನಿರ್ಮಾಣದ ನಮ್ಮ ಕನಸು ಇಂದು ಸಾಕಾರಗೊಂಡಿದೆ. ಇದಕ್ಕೆ ಸರಕಾರದ ಅನುದಾನದೊಂದಿಗೆ ಬೋಳಾಸ್, ಎಂಎಆರ್‌ಪಿಎಲ್, ಗ್ರಾಮದ ಧಾರ್ಮಿಕ ಕೇಂದ್ರಗಳು, ದಾನಿಗಳು ಸೇರಿದಂತೆ ಖಾಸಗಿ ಸಹಭಾಗಿತ್ವ ಬಹಳಷ್ಟಿದೆ. ನಮ್ಮ ಪಂಚಾಯತ್ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಸನ್ಮಾನ
ಕಟ್ಟಡ ನಿರ್ಮಾಣಕ್ಕೆ ಸಿಎಸ್ಆರ್ ನಿಧಿಯಡಿ 22 ಲಕ್ಷ ರೂ. ಅನುದಾನ ಒದಗಿಸಿದ ಬೋಳಾಸ್ ಆಗ್ರೋ ಪ್ರೈ. ಲಿ. ಆಡಳಿತ ನಿರ್ದೇಶಕ ಬೋಳ ದಾಮೋದರ ಕಾಮತ್, ದಾನಿಗಳಾದ ಗೀತಾಂಜಲಿ ಸಿಲ್ಕ್ಸ್ ಮತ್ತು ಶಾಂತಿ ಸಾಗರ ಹೊಟೇಲ್ ಮಾಲಕ ಸಂತೋಷ್ ವಾಗ್ಲೆ, ಪಂಚಾಯತ್ ಕಟ್ಟಡದ ಕೆಲಸ ನಿರ್ವಹಿಸಿದ ಗುತ್ತಿಗೆದಾರ ಉದಯ್ ಕುಮಾರ್ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಹಾಗೂ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು, ತಾ. ಪಂ. ಮಾಜಿ ಅಧ್ಯಕ್ಷರಾದ ವಿಕ್ರಂ ಹೆಗ್ಡೆ, ಮಾಲಿನಿ ಜೆ. ಶೆಟ್ಟಿ, ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನೀರೆ ರವೀಂದ್ರ ನಾಯಕ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭ ಪೋಷಣ ಅಭಿಯಾನ ಯೋಜನೆಯಡಿ ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಕಳ ಇದರ ವತಿಯಿಂದ ನೀರೆ ಕಣಜಾರು ಅಂಗನವಾಡಿ ವ್ಯಾಪ್ತಿಯ ಐದು ಮಂದಿ ಗರ್ಭಿಣಿಯರಿಗೆ ವೇದಿಕೆಯಲ್ಲಿ ಸೀಮಂತ ನಡೆಸಲಾಯಿತು.
ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಎಸ್. ಪ್ರಭು ಮಾತನಾಡಿ, ಪಂಚಾಯತಿಯ ಅಭಿವೃದ್ಧಿಗೆ ಹಾಗೂ ಭವ್ಯವಾದ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸರಕಾರ, ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು, ದಾನಿಗಳು, ಉದ್ಯಮಿಗಳು, ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಾರಿಯಾಗಿದ್ದೇವೆ ಎಂದರು.
ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, 7 ಗ್ರಾಮಗಳನ್ನೊಳಗೊಂಡ ಈ ಪ್ರದೇಶಕ್ಕೆ ಸಮುದಾಯದ ಭವನದ ಅಗತ್ಯತೆಯಿದ್ದು, ಇದಕ್ಕಾಗಿ ಅನುದಾನ ಒದಗಿಸಿಕೊಡಬೇಕಾಗಿ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು.
ಕಣಂಜಾರು ಲೂರ್ಡ್ಸ್ ಚರ್ಚ್ ಧರ್ಮಗುರು ರೆ. ಫಾ. ಹೆರಾಲ್ಡ್ ಪಿರೇರಾ ಮಾತನಾಡಿ, ಸರಕಾರದ ಸವಲತ್ತುಗಳನ್ನು ಜನತೆಗೆ ತಲುಪಿಸುವ ಪಂಚಾಯತ್‌ನ ಕೆಲಸದಲ್ಲಿ ನಾವೆಲ್ಲರೂ ಸಹಕರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ., ಎಸ್ಪಿ ಹರಿರಾಂ ಶಂಕರ್, ತಹಶೀಲ್ದಾರ್ ಪ್ರದೀಪ್ ಆರ್., ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಎಂ. ವಿ., ತಾ ಪಂ. ಆಡಳಿತ ಅಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ, ಎಂ.ಆರ್. ಪಿ. ಆರ್. ಮಂಗಳೂರು ಇದರ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯ್ಯಾರು, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಕಾರ್ಕಳ ಇದರ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ, ಅಡಪಾಡಿ ಪಳ್ಳಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್, ಗೀತಾಂಜಲಿ ಸಿಲ್ಕ್ಸ್ ಮಾಲಕ ಸಂತೋಷ್ ವಾಗ್ಲೆ , ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಸಿಎ ಚಂದನ್ ಶೆಟ್ಟಿ, ರಮೇಶ್ ನಾಯಕ್, ಮೊಹಮ್ಮದ್ ನಿಜಾಮುದ್ದೀನ್ ಬಾಖದಿ, ದಿನೇಶ್ಚಂದ್ರ ಹೆಗ್ಡೆ ನೀರೆ, ಸುಮಿತ್ ಶೆಟ್ಟಿ ಕೌಡೂರು, ಹರಿಶ್ಚಂದ್ರ ಶೆಟ್ಟಿ ಕೌಡೂರು, ಪ್ರಶಾಂತ್ ಶೆಟ್ಟಿ ಬೈಲೂರು, ರಾಮಕೃಷ್ಣ ಶೆಟ್ಟಿ, ದಿಲೀಪ್ ಸಂಜೀವ ಶೆಟ್ಟಿ, ವಕೀಲ ಸದಾನಂದ ಸಾಲಿಯಾನ್ ಸೇರಿದಂತೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ್ ಕಲ್ಲೊಟ್ಟೆ ಹಾಗೂ ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನೀರೆ ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿ ನಾಡಗೀತೆ ಹಾಡಿದರು. ಪಂಚಾಯತ್ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ ವಂದಿಸಿದರು.







































